ಹೊಸದಿಲ್ಲಿ,ನ.2: ವಾಯವ್ಯ ಭಾರತದ ವಿಶಾಲವಾದ ಕೃಷಿ ಭೂಮಿ ಪ್ರದೇಶಗಳು ದಟ್ಟವಾದ ಹೊಗೆ ಹಾಗೂ ಧೂಳಿನಿಂದ ಆವೃತವಾಗಿರುವುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಉಪಗ್ರಹ ತೆಗೆದ ಛಾಯಾಚಿತ್ರಗಳು ತೋರಿಸಿಕೊಟ್ಟಿದ್ದು, ಭಾರತದಲ್ಲಿ ವಾಯು ಗುಣಮಟ್ಟವು ತೀವ್ರವಾಗಿ ಹದಗೆಟ್ಟಿರುವ ಬಗ್ಗೆ ಆತಂಕ ಮೂಡಿಸಿದೆ.
ಅಕ್ಟೋಬರ್ 30ರಂದು ನಾಸಾದ ಉಪಗ್ರಹವೊಂದು ಭಾರತ ಹಾಗೂ ಪಾಕಿಸ್ತಾನಗಳ ಪಂಜಾಬ್ ಪ್ರಾಂತ್ಯಗಳಲ್ಲಿ ಭತ್ತದ ಗದ್ದೆಗಳಲ್ಲಿ ಕೊಯ್ಲಿನ ಬಳಿಕ ಅಳಿದುಳಿದ ಕೂಳೆಯನ್ನು ಅನಿಯಂತ್ರಿತವಾಗಿ ಸುಡಲಾಗುತ್ತಿರುವುದರಿಂದ ವ್ಯಾಪಕವಾದ ಹೊಗೆ ಉತ್ಪತ್ತಿಯಾಗಿ, ವಾತಾವರಣದಲ್ಲಿ ಹರಡಿರುವುದನ್ನು ನಾಸಾ ಉಪಗ್ರಹದ ಚಿತ್ರಗಳು ಸೆರೆಹಿಡಿದಿವೆ.
ಈ ದಟ್ಟವಾದ ಹೊಗೆಯು ಗಾಳಿಯ ಮೂಲಕ ರಾಜಧಾನಿ ಹೊಸದಿಲ್ಲಿ ಸೇರಿದಂತೆ ಉತ್ತರಭಾರತಾದ್ಯಂತ ಹರಡಿರುವ ದೃಶ್ಯವಿರುವ ಈ ಚಿತ್ರಗಳನ್ನು ನಾಸಾದ ಉಪಗ್ರಹವು ಕಳೆದ ವರ್ಷ ತೆಗೆದಿದೆ. ಹೊಸದಿಲ್ಲಿಯ ಜಗತ್ತಿನ ಅತ್ಯಂತ ಮಾಲಿನ್ಯಪೀಡಿತ ರಾಜಧಾನಿಯೆಂಬ ಕುಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ನಾಸಾ ಬಿಡುಗಡೆ ಮಾಡಿರುವ ಈ ಉಪಗ್ರಹ ಚಿತ್ರಗಳಿಗೆ ಹೆಚ್ಚಿನ ಮಹತ್ವ ದೊರೆತಿದೆ.
ಸಿಖ್ಖರ ಪವಿತ್ರ ಯಾತ್ರಾಸ್ಥಳವಾದ ಅಮೃತಸರದ ಸ್ವರ್ಣಮಂದಿರ ಕೂಡಾ, ಗಾಳಿಯಿಂದ ಹರಡುವ ಹೊಗೆ ಮಾಲಿನ್ಯದಿಂದಾಗಿ ತನ್ನ ಶೋಭೆಯನ್ನು ಕಳೆದುಕೊಳ್ಳುತ್ತಿದೆಯೆಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ಭತ್ತದ ಕೊಯ್ಲಿನ ಬಳಿಕ ಅದರ ಕೂಳೆಯನ್ನು ರೈತರು ಸುಡುವುದರಿಂದ, ಭಾರೀ ಪ್ರಮಾಣದಲ್ಲಿ ಇಂಗಾಲದ ಆಮ್ಲ ವಾತಾವರಣಕ್ಕೆ ಬಿಡುಗಡೆಯಾಗಿ, ಅದು ಹಿಮಾಲಯ ಪರ್ವತಶ್ರೇಣಿಯವರೆಗೂ ತಲುಪುತ್ತದೆ. ಇದು ಹಿಮಾಲಯದ ಶಿಖರಗಳ ನೀರ್ಗಲ್ಲುಗಳ ಕರಗುವಿಕೆಗೆ ಕಾರಣವಾಗುತ್ತದೆಯೆಂದು ಅಧ್ಯಯನವು ತಿಳಿಸಿದೆ.
ಈ ಮೊದಲು ಉತ್ತರಭಾರತದಲ್ಲಿ ರೈತರು ವರ್ಷಕ್ಕೆ ಎರಡು ಬೆಳೆಗಳನ್ನು ಮಾತ್ರವೇ ಬೆಳೆಯುತ್ತಿದ್ದರು. ಆದರೆ ಕೃಷಿ ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದು ಕನಿಷ್ಠ ಮೂರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಭತ್ತದ ಕೊಯ್ಲಿನ ಬಳಿಕ ಅವುಗಳ ಕೂಳೆಗಳನ್ನು ಸುಡುವ ಪದ್ಧತಿಯನ್ನು ಅವರು ಹೆಚ್ಚಾಗಿ ಅನುಸರಿಸುತ್ತಿದ್ದಾರೆ.