ಮುಂಬೈ

ಮುಂಬೈ ಗಲಭೆ: ನಾಲ್ವರಿಗೆ ಜೀವಾವಧಿ – ಎತ್ತಿಹಿಡಿದ ಬಾಂಬೆ ಹೈಕೋರ್ಟ್

Pinterest LinkedIn Tumblr

BHಮುಂಬೈ, ನ.2: ಮುಂಬೈಯಲ್ಲಿ 1992ರ ಕೋಮು ಗಲಭೆಯ ವೇಳೆ ಮುಸ್ಲಿಮ್ ದಂಪತಿಯನ್ನು ಹತ್ಯೆಗೈದ ನಾಲ್ವರಿಗೆ ನೀಡಲಾಗಿರುವ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಾಸಿಕ್ಯೂಶನ್ ಈ ಪ್ರಕರಣದಲ್ಲಿ ದೋಷಿಗಳ ಮೇಲಿನ ಆರೋಪವನ್ನು ಸಂಶಯಾತೀತವಾಗಿ ಸಾಬೀತು ಪಡಿಸಿದೆ ಎಂದಿದೆ.

ದೋಷಿಗಳಾದ ಸುಹಾಸ್ ಪಂಚಾಲ್, ಸಂಜಯ್ ಮಂಡಾವ್ಕರ್, ಸುನೀಲ್ ಮಂಡಾವ್ಕರ್ ಮತ್ತು ಚಂದನ್ ಲೋಖಂಡೆ ಸಲ್ಲಿಸಿರುವ ಮೇಲ್ಮನವಿಗಳನ್ನು ಉಸ್ತುವಾರಿ ಮುಖ್ಯ ನ್ಯಾಯಾಧೀಶ ವಿ.ಕೆ. ತಾಹಿಲ್‌ರಮನಿ ಮತ್ತು ನ್ಯಾ. ಎ.ಎಸ್. ಗಡ್ಕರಿ ಅವರನ್ನೊಳಗೊಂಡ ವಿಭಾಗ ಪೀಠವೊಂದು ತಳ್ಳಿಹಾಕಿದೆ.

ವಿಚಾರಣಾ ನ್ಯಾಯಾಲಯ ವೊಂದು 2011 ಫೆಬ್ರವರಿಯಲ್ಲಿ ಮುಸ್ಲಿಮ್ ದಂಪತಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ದೋಷಿಗಳು ಎಂಬ ನಿರ್ಧಾರಕ್ಕೆ ಬಂದಿತ್ತು ಹಾಗೂ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

1992 ಡಿಸೆಂಬರ್‌ನಲ್ಲಿ ಮುಂಬೈಯಲ್ಲಿ ಕೋಮು ಗಲಭೆಗಳು ನಡೆದ ಬಳಿಕ ಆರೋಪಿಗಳು, ಚೆಂಬೂರಿನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದ ಕೋಣೆಯನ್ನು ತೆರವುಗೊಳಿಸುವಂತೆ ಗನಿ ಶೇಖ್ ಮತ್ತು ರಾಬಿಯಾ ಶೇಖ್‌ಗೆ ಬೆದರಿಕೆ ಹಾಕಿದ್ದರು. ತೆರವುಗೊಳಿಸದಿದ್ದರೆ ಅದರ ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ ಎಂದು ಹೇಳಿದ್ದರು. 1993 ಜನವರಿ 11ರಂದು ಆರೋಪಿಗಳು ಶೇಖ್‌ರ ಮನೆ ಮೇಲೆ ಕಲ್ಲು ತೂರಿದರು ಹಾಗೂ ರಾಬಿಯಾರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ತಲವಾರಿನಿಂದ ಇರಿದರು. ದುಷ್ಕರ್ಮಿಗಳು ಗನಿ ಶೇಖ್ ಮೇಲೆಯೂ ತಲವಾರಿನಿಂದ ಕಡಿದರು ಎಂದು ಪ್ರಾಸಿಕ್ಯೂಶನ್ ಹೇಳಿದೆ.

ರಾಬಿಯಾ ಸ್ಥಳದಲ್ಲೇ ಮೃತಪಟ್ಟರೆ, ಗನಿ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದಂಪತಿಯ ನಾಲ್ವರು ಮಕ್ಕಳು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Write A Comment