ಕರ್ನಾಟಕ

‘ಬೆಂಗಳೂರು-ಮೈಸೂರು’ ಷಟ್ಪಥದ ಕಾಂಕ್ರಿಟ್ ರಸ್ತೆಗೆ ಪ್ರಸ್ತಾವ: ಮಹದೇವಪ್ಪ

Pinterest LinkedIn Tumblr

HC-Mahadevappಬೆಂಗಳೂರು, ನ.2: ಬೆಂಗಳೂರು-ಮೈಸೂರು ರಸ್ತೆಯನ್ನು ಸರ್ವಿಸ್ ರಸ್ತೆ ಸೇರಿದಂತೆ ಷಟ್ಪಥದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಸ್ತೆಗೆ ಭೂ ಸ್ವಾಧೀನಕ್ಕೆ ಕೇಂದ್ರ ಸರಕಾರ ಈಗಾಗಲೇ 2,200 ಕೋಟಿ ರೂ.ಬಿಡುಗಡೆ ಮಾಡಿದ್ದು, 2016ರಿಂದ ಕ್ರಿಯಾ ಯೋಜನೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದರು.

ಮೇಲ್ದರ್ಜೆಗೆ: ಕೇಂದ್ರದಿಂದ 2 ಸಾವಿರ ಕಿ.ಮೀ. ರಾಜ್ಯ ಸರಕಾರದಿಂದ 11ಸಾವಿರ ಕಿ.ಮೀ, ಏಷ್ಯನ್ ಅಭಿವೃದ್ಧಿ ಮತ್ತು ವಿಶ್ವಬ್ಯಾಂಕ್ ನೆರವಿನಿಂದ 3 ಸಾವಿರ ಕಿ.ಮೀ. ಸೇರಿದಂತೆ ರಾಜ್ಯದ 16 ಸಾವಿರ ಕಿ.ಮೀ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಮಹದೇವಪ್ಪ ತಿಳಿಸಿದರು.

ಬೆಂಗಳೂರು-ಮೈಸೂರು ರಸ್ತೆಯ ಮೇಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರು -ಕನಕಪುರ ನಡುವಿನ 37 ಕಿ.ಮೀ. ಕನಕಪುರ-ಮಳವಳ್ಳಿ, ಚಾಮರಾಜನಗರ- ಸತ್ಯಮಂಗಲ ರಸ್ತೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಸಿರಸಿ-ಹಾವೇರಿ, ಕೂಡ್ಲಗಿ-ಮೊಳಕಾಲ್ಮೂರು ಮಧ್ಯದ 247 ಕಿ.ಮೀ, ಕೇರಳದ ಮಾನಂದವಾಡಿ- ಎಚ್.ಡಿ.ಕೋಟೆ-ಮೈಸೂರು ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದು, ಈಗಾಗಲೇ ಆ ಕಾರ್ಯಕ್ಕೆ 500 ಕೋಟಿ ರೂ. ಒದಗಿಸಲಾಗಿದೆ ಎಂದ ಅವರು, ವೈಜ್ಞಾನಿಕ ರೀತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಉಬ್ಬುಗಳ ತೆರವು: ರಾಜ್ಯದ ವಿವಿಧ ರಸ್ತೆಗಳಲ್ಲಿದ್ದ 9 ಸಾವಿರ ಅವೈಜ್ಞಾನಿಕ ರಸ್ತೆ ಉಬ್ಬುಗಳ ಪೈಕಿ ಏಳೂವರೆ ಸಾವಿರಕ್ಕೂ ಹೆಚ್ಚು ಉಬ್ಬುಗಳನ್ನು ತೆರವುಗೊಳಿಸಿದ್ದು, ಉಳಿದ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಅಗತ್ಯವಿರುವ ಕಡೆಗಳಲ್ಲಿನ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುತ್ತಿದ್ದು, ಕೆಂಪು ದೀಪಗಳನ್ನು ಅಳವಡಿಸಲಾಗುತ್ತಿದೆ ಎಂದರು.

ನೀಲನಕ್ಷೆ: ಸಚಿವರು, ಮೇಲ್ಮನೆ ಸಭಾಪತಿ ಹಾಗೂ ಸ್ಪೀಕರ್ ಅವರ ನಿವಾಸಗಳ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಜಾಗ ಗುರುತಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದ ಅವರು, ನಗರದ ಆನಂದ ರಾವ್ ವೃತ್ತದ ಬಳಿ ಹೊಸದಿಲ್ಲಿಯ ವಿಜ್ಞಾನ ಭವನದ ಮಾದರಿಯಲ್ಲಿ ಸರಕಾರಿ ಕಚೇರಿಗಳ ಸಂಕೀರ್ಣವೊಂದನ್ನು ನಿರ್ಮಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ಮರಳು ಮಾಫಿಯಾ ತಡೆಗೆ ಗೂಂಡಾ ಕಾಯ್ದೆ ಜಾರಿಗೊಳಿಸುತ್ತಿದ್ದು, ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ 23 ದಶಲಕ್ಷ ಟನ್ ಮರಳಿನ ಬೇಡಿಕೆಯಿದ್ದು, 10ರಿಂದ 12 ದಶಲಕ್ಷ ಟನ್ ಮರಳಿನ ಲಭ್ಯತೆಯಿದೆ. ಆ ಹಿನ್ನೆಲೆಯಲ್ಲಿ ಕೃತಕ ಮರಳಿಗೆ ಉತ್ತೇಜನ ನೀಡಲಾಗುತ್ತಿದೆ.
-ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ

Write A Comment