ಮುಂಬೈ,ನ.2: ಶಿವಸೇನೆ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ಕಲ್ಯಾಣ್-ಡೊಂಬಿವಿಲಿ ನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯು 52 ಸ್ಥಾನಗಳನ್ನು ಗೆದ್ದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ಸರಕಾರದಲ್ಲಿ ಬಿಜೆಪಿಯ ಜೊತೆಗಾರನಾದ ಶಿವಸೇನೆಯು ಕಲ್ಯಾಣ್-ಡೊಂಬಿವಿಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಕಲ್ಯಾಣ್-ಡೊಂಬಿವಿಲಿ ನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಭರ್ಜರಿ ಗೆಲುವು, ಬಿಜೆಪಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ.
ಶಿವಸೇನೆ 52,ಬಿಜೆಪಿ 42 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ರಾಜ್ಠಾಕ್ರೆಯ ಎಂಎನ್ಎಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 4, ಎನ್ಸಿಪಿ 2 ಹಾಗೂ ಅಸಾದುದ್ದೀನ್ ಓವೈಸಿ ನೇತೃತ್ವದ ಎಂಐಎಂಗೆ 1 ಸ್ಥಾನ ದೊರೆತಿದೆ. ಉಳಿದ 10 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಆದಾಗ್ಯೂ ಹಾಲಿಮೇಯರ್, ಶಿವಸೇನೆಯ ನಾಯಕ ಕಲ್ಯಾಣಿ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿ ಸುಮನ್ ನಿಖಮ್ ಎದುರು ಸೋಲನುಭವಿಸಿದ್ದಾರೆ.
ಕಲ್ಯಾಣ್-ಡೊಂಬಿವಿಲಿ ನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅದಕ್ಕೆ ಸ್ಪಷ್ಟ ಬಹುಮತ ಲಭ್ಯವಿಲ್ಲದ ಕಾರಣ, ನೂತನ ನಗರಪಾಲಿಕೆಯಲ್ಲಿ ಪಕ್ಷೇತರರು ಹಾಗೂ ಎಂಎನ್ಎಸ್ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಕಲ್ಯಾಣ್ ಡೊಂಬಿವಿಲಿ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆಗಳು ಪ್ರತ್ಯೇಕವಾಗಿ ಸ್ಪರ್ಧಿಸಿರುವುದು, ಉಭಯಪಕ್ಷಗಳ ನಡುವಿನ ವಿರಸ ತೀವ್ರರೂಪ ಪಡೆದಿರುವುದನ್ನು ಬಯಲುಗೊಳಿಸಿದೆ.
ಕಲ್ಯಾಣ್-ಡೊಂಬಿವಿಲಿ ನಗರಪಾಲಿಕೆಯ ಎಲ್ಲಾ 122 ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ ಕಳೆದ ತಿಂಗಳು ಘೋಷಿಸುವ ಮೂಲಕ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಬಹುದೊಡ್ಡ ಬಿರುಕು ಕಾಣಿಸಿಕೊಂಡಿತ್ತು.ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರಗಳಲ್ಲಿ ಬಿಜೆಪಿ ಹಾಗೂ ಶಿವಸೇನೆ ಮಿತ್ರಪಕ್ಷಗಳಾಗಿವೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 122 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 23 ಸ್ಥಾನಗಳ ಕೊರತೆಯಿದೆ. 63 ಮಂದಿ ಶಾಸಕ ಬಲ ಹೊಂದಿರುವ ಶಿವಸೇನೆಯ ಬೆಂಬಲದೊಂದಿಗೆ ಅದು ಆಡಳಿತ ನಡೆಸುತ್ತಿದೆ.
ಕೊಲ್ಲಾಪುರ ನಗರಪಾಲಿಕೆ: ಕಾಂಗ್ರೆಸ್ ಮೇಲುಗೈ
81 ಸದಸ್ಯ ಬಲದ ಕೊಲ್ಲಾಪುರ ನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನಗಳಲ್ಲಿ ಜಯಗಳಿಸಿದ್ದು, ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಎನ್ಸಿಪಿ 15 ಸ್ಥಾನಗಳನ್ನು ಪಡೆದಿದೆ. ಬಿಜೆಪಿ-ತಾರಾರಾಣಿ ಅಗಾಡಿ ಮೈತ್ರಿಕೂಟವು ಒಟ್ಟು 32 ಸ್ಥಾನಗಳನ್ನು ಗಳಿಸಿದೆ (ಬಿಜೆಪಿ -12, ತಾರಾರಾಣಿ ಅಗಾಡಿ-20), ಶಿವಸೇನೆಗೆ ಕೇವಲ ನಾಲ್ಕು ಸ್ಥಾನಗಳಷ್ಟೇ ದೊರೆತಿವೆ.
ಈ ಮಧ್ಯೆ ಕಾಂಗ್ರೆಸ್ ನಾಯಕ ಸತೇಜ್ ಪಾಟೀಲ್ ಹೇಳಿಕೆ ನೀಡಿ, ಕೊಲ್ಲಾಪುರ ನಗರಪಾಲಿಕೆಯಲ್ಲಿ ಪಕ್ಷವು ಎನ್ಸಿಪಿಯೊಂದಿಗೆ ಮೈತ್ರಿ ಏರ್ಪಡಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೆಂದು ಹೇಳಿದ್ದಾರೆ. ಕೊಲ್ಲಾಪುರ ನಗರಪಾಲಿಕೆಯಲ್ಲಿ ಬಹುಮತಕ್ಕೆ 42 ಸ್ಥಾನಗಳ ಅಗತ್ಯವಿದೆ. ಈ ಮಧ್ಯೆ ಮೂವರು ಪಕ್ಷೇತರರು ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ದಾರೆ.
ಕೊಲ್ಲಾಪುರ ನಗರಪಾಲಿಕೆಯಲ್ಲಿ ಬಿಜೆಪಿಯು ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆಯೆಂದು ಮಹಾರಾಷ್ಟ್ರದ ಸಹಕಾರಿ ಸಚಿವ ಹಾಗೂ ಕೊಲ್ಲಾಪುರದ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ. 12ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು 50-100 ಮತಗಳ ಅಂತರದಿಂದ ಸೋಲುಂಡಿದ್ದು, ಪಕ್ಷವು ತುಸು ಹೆಚ್ಚು ಪ್ರಯತ್ನಿಸಿದ್ದರೆ ಆ ಸ್ಥಾನಗಳನ್ನು ಗೆಲ್ಲಬಹುದಿತ್ತೆಂದು ಅವರು ಹೇಳಿದ್ದಾರೆ.
ಉ.ಪ್ರ. ಪಂಚಾಯತ್ ಚುನಾವಣೆ: ಮೋದಿಯ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿಗೆ 58ರಲ್ಲಿ 8
ಲಕ್ನೋ, ನ.2: ಉತ್ತರಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ 58ರಲ್ಲಿ 50 ಸ್ಥಾನಗಳನ್ನು ಕಳೆದುಕೊಂಡಿದೆ.
ಕೇಂದ್ರ ಗೃಹ ಸಚಿವ ರಾಜ್ನಾಥ್ರ ಲಕ್ನೋ ಕ್ಷೇತ್ರದಲ್ಲಿ ಬಿಜೆಪಿಗೆ 28 ಸ್ಥಾನಗಳ ಪೈಕಿ ಕೇವಲ ನಾಲ್ಕರಲ್ಲಿ ಜಯಗಳಿಸಲು ಸಾಧ್ಯವಾಗಿದೆ. ಅದೇ ವೇಳೆ, ಕೇಂದ್ರ ಸಚಿವ ಕಲ್ರಾಜ್ ಮಿಶ್ರಾರ ಕ್ಷೇತ್ರ ದೇವರದಲ್ಲಿನ 56 ಸ್ಥಾನಗಳ ಪೈಕಿ 49ರಲ್ಲಿ ಬಿಜೆಪಿ ಸೋಲು ಕಂಡಿದೆ. ಗ್ರಾಮೀಣ ಪ್ರದೇಶಗಳ ಮತದಾರರನ್ನು ಓಲೈಸಲು ಯತ್ನಿಸುತ್ತಿರುವ ಬಿಜೆಪಿಗೆ ಪಂಚಾಯತ್ ಚುನಾವಣೆ ಮಹತ್ವದ್ದಾಗಿದೆ. ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ 2017ರಲ್ಲಿ ನಡೆಯಲಿದೆ.
ಈ ಪಂಚಾಯತ್ ಚುಾವಣೆಯಲ್ಲಿ ಮಾಯಾವತಿಯ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಭಾರೀ ಮುನ್ನಡೆ ಗಳಿಸಿದೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಎಸ್ಪಿ ಬೆಂಬಲಿತ ಹೆಚ್ಚಿನ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಸ್ಥಾನ ಗಳಿಸಲು ವಿಫಲವಾದ ಬಳಿಕ ಬಿಎಸ್ಪಿ ವೌನವಾಗಿತ್ತು. ಪಂಚಾಯತ್ ಚುನಾವಣೆ ಫಲಿತಾಂಶ ಅದರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಚುನಾವಣೆಯಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದ ಅಭ್ಯರ್ಥಿಗಳೂ ಭಾರೀ ಸಂಖ್ಯೆಯಲ್ಲಿ ಸೋಲನುಭವಿಸಿದ್ದಾರೆ.
ಇನ್ನೆರಡು ವರ್ಷಗಳಲ್ಲಿ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಈ ಫಲಿತಾಂಶದೊಂದಿಗೆ ರಾಜ್ಯದ ರಾಜಕೀಯ ಸಮೀಕರಣ ಬದಲಾಗಿದೆ. 2012ರಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ್ತು 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಮಂಕಾಗಿದ್ದ ಬಿಎಸ್ಪಿ ಅನಿರೀಕ್ಷಿತವಾಗಿ ಚೇತರಿಸಿಕೊಂಡಿದೆ.
ಉವೈಸಿ ಪಕ್ಷಕ್ಕೆ ಗೆಲುವು
ಮಹತ್ವದ ಬೆಳವಣಿಗೆಯೊಂದರಲ್ಲಿ, ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ರ ಸಂಸದೀಯ ಕ್ಷೇತ್ರ ಅಝಮ್ಗಢದಲ್ಲಿ ಒಂದು ಸ್ಥಾನವನ್ನು ಅಕ್ಬರುದ್ದೀನ್ ಉವೈಸಿಯ ಎಂಐಎಂ ಗೆದ್ದಿದೆ. ಇತರ ಕೆಲವು ವಾರ್ಡ್ಗಳಲ್ಲಿ ಎಂಐಎಂ ಮುಂದಿದೆ ಎಂಬುದಾಗಿ ವರದಿಯಾಗಿದೆ.