ಹೊಸದಿಲ್ಲಿ: ಒತ್ತೆ ಹಣಕ್ಕಾಗಿ ಅಪಹರಿಸುವ ಪ್ರಕರಣಗಳು ಸಾಧಾರಣ ಅಪರಾಧಿಗಳಿಂದ ಹಿಡಿದು, ಭಯೋತ್ಪಾದಕ ಮಟ್ಟದಲ್ಲಿಯೂ ಹೆಚ್ಚುತ್ತಿದ್ದು, ಇದಕ್ಕೆ ಕಠಿಣ ಶಿಕ್ಷೆ ನೀಡುವ ಅಗತ್ಯವನ್ನು ಮನಗೊಂಡ ಸುಪ್ರೀಂ ಕೋರ್ಟ್, ಅಪಹರಣ ಹಾಗೂ ಕೊಲೆಗಾಗಿ ಅಪರಾಧಿಯೊಬ್ಬನಿಗೆ ಅಧೀನ ನ್ಯಾಯಾಲಯದ ನೀಡಿದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಸಣ್ಣ ಪುಟ್ಟ ಹಣಕ್ಕಲ್ಲದೇ, ದೇಶದ ಆರ್ಥಿಕ ಸ್ಥಿತಿಯನ್ನೇ ಅಲ್ಲೋಲಕಲ್ಲೋಲಗೊಳಿಸುವಂಥ ದೊಡ್ಡ ಮಟ್ಟದ ಅಪಹರಣಗಳು ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364ಎಯನ್ನು ಆಧರಿಸಿ, ಒತ್ತೆ ಹಣಕ್ಕಾಗಿ ಅಪಹರಿಸುವ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬಹುದು, ಎಂದಿದೆ.
ನಾಗರಿಕರ ರಕ್ಷಣೆ ಹಾಗೂ ಭದ್ರತಾ ದೃಷ್ಟಿಯಿಂದ ಮತ್ತು ದೇಶದ ಏಕತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕಾರಣಕ್ಕೆ ಅಪಹರಣದ ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವ 364ಎ ರಚಿಸಲಾಗಿದೆ, ಎಂದು ನ್ಯಾ.ಟಿ.ಎಸ್.ಠಾಕೂರ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ.
ಅಪಹರಕ್ಕಾಗಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯೊಬ್ಬ, ಐಪಿಸಿ 364ಎ ನ ಸಾಂವಿಧಾನಿಕ ಮೌಲ್ಯ ಪ್ರಶ್ನಿಸಿ, ಸಲ್ಲಿಸಿದ್ದ ಅರ್ಜಿಗೆ ಅಪೆಕ್ಸ್ ಕೋರ್ಟ್ ಈ ಅಭಿಪ್ರಾಯಪಟ್ಟಿದೆ.