ಮುಂಬಯಿ: ದೇಶದ ಮಹಾನಗರಗಳು ಸೇರಿದಂತೆ ಹಲವು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಲೈಂಗಿಕವಾಗಿ ಸಕ್ರಿಯವಾಗಿದ್ದು, ಅದರಿಂದ ಹರಡುವ ಸೋಂಕಿಗೂ ತುತ್ತಾಗುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ನೂತನ ಸಮೀಕ್ಷೆ ಹೊರಹಾಕಿದೆ.
ಈ ಸಮೀಕ್ಷೆ ವರದಿ, ಶಾಲಾ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುಬೇಕು ಎಂಬ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮೆಟ್ರೊ ಸೇರಿ ದೇಶದ 20 ನಗರಗಳ 13ರಿಂದ 19 ವರ್ಷದೊಳಗಿನ ಸುಮಾರು 15,000ಕ್ಕೂ ಹೆಚ್ಚು ಮಕ್ಕಳ ಸಂದರ್ಶನವನ್ನು ಆಧರಿಸಿ ಈ ಹೊಸ ಸಮೀಕ್ಷೆ ವರದಿ ಸಿದ್ಧಪಡಿಸಲಾಗಿದೆ.
ಹುಡುಗರು ಹಾಗೂ ಹುಡುಗಿಯರು ಸರಾಸರಿ 14 ವರ್ಷದಲ್ಲಿ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ. ಅದೇರೀತಿ, ಲೈಂಗಿಕವಾಗಿ ಹರಡುವ ಸೋಂಕಿನ ಲಕ್ಷಣದಿಂದ ಶೇ.8.9 ಮಂದಿ ಕನಿಷ್ಠ ಒಂದು ಬಾರಿಯಾದರೂ ಬಳಲಿದ್ದಾರೆ.
‘ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ 2011-12ರ ವಾರ್ಷಿಕ ವರದಿ ಪ್ರಕಾರ ಸುಮಾರು 14 ವರ್ಷದವರಲ್ಲಿ ಲೈಂಗಿಕವಾಗಿ ಹರಡುವ ರೋಗ, ಎಚ್‌ಐವಿ ಪ್ರಕರಣಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ ದುಪ್ಪಟಾಗಿರುವ ಅಂಶ ಆತಂಕಕಾರಿಯಾಗಿದೆ,’ಎಂದು ಸಮೀಕ್ಷೆಯ ನೇತೃತ್ವ ವಹಿಸಿದ್ದ ಮೆಡಿಏಜೆಂಲ್ಸ್‌ನ ಡಾ. ದೇವರಾಜ್ ಶೋಮೆ ಹೇಳಿದ್ದಾರೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಸಮೀಕ್ಷೆ ಕೈಗೊಳ್ಳಲು ಇ-ಆರೋಗ್ಯ ಸಂರಕ್ಷಣೆ ಕಂಪನಿಗೆ ಹಣಕಾಸು ನೆರವು ಒದಗಿಸಿತ್ತು.
‘ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.6.3 ಹುಡುಗರು ಹಾಗೂ 1.3ಕ್ಕೂ ಹೆಚ್ಚು ಹುಡುಗಿಯರು ಕನಿಷ್ಠ ಒಂದು ಬಾರಿಯಾದರೂ ಮಿಲನ ಕ್ರಿಯೆಯಲ್ಲಿ ಭಾಗಿ ಆಗಿರುವುದಾಗಿ ಹೇಳಿದ್ದಾರೆ. ಈ ಮೊದಲ ಅನುಭವ ಹುಡುಗರಿಗೆ 14 ವರ್ಷದಲ್ಲಾದರೆ, ಹುಡುಗಿಯರಿಗೆ 16 ವರ್ಷದಲ್ಲಿ ಆಗಿದೆ,’ ಎಂದು ತಿಳಿಸಿದೆ.
2005ರಲ್ಲಿ ಹೊರಬಂದ 3ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ, 15ರಿಂದ 24 ವರ್ಷದೊಳಗಿನವರು ವಿವಾಹಪೂರ್ವ ಲೈಂಗಿಕತೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿತ್ತು. ಈ ಪೈಕಿ ಪುರುಷರು (ಶೇ.15-22), ಮಹಿಳೆಯರು (ಶೇ.1-6) ಇದ್ದರು.
ತಿಳಿವಳಿಕೆ ಇಲ್ಲದಿರುವುದು ಕಾರಣ:
‘ಲೈಂಗಿಕ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಭಾರತದ ಜನಸಂಖ್ಯೆಯಲ್ಲಿ ಶೇ.4 ಸಹ ದೊಡ್ಡ ಸಂಖ್ಯೆಯೇ. ಲೈಂಗಿಕತೆ ಬಗೆಗಿನ ಕುತೂಹಲದಿಂದ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು. ಈ ವಯಸ್ಸಿನವರು ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದಿಲ್ಲ. ತಿಳಿವಳಿಕೆ ಇಲ್ಲದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ,’ ಎಂದು ಖ್ಯಾತ ಲೈಂಗಿಕ ತಜ್ಞ ಡಾ. ಎಂ. ವಾತ್ಸ ಹೇಳಿದ್ದಾರೆ.