ಶಿವಮೊಗ್ಗ :ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸತತ ಮೂರು ವರ್ಷ ಬರಗಾಲವಿತ್ತು. ಇದರಿಂದ ಸಂಕಷ್ಟದಲ್ಲಿದ್ದ ಜನರಿಗೆ ಅನುಕೂಲವಾಗಲೆಂದು ಕೂಲಿಗಾಗಿಕಾಳು ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಆ ಯೋಜನೆಗಾಗಿ ಬಂದಿದ್ದ ಅಕ್ಕಿ 11 ವರ್ಷಗಳಿಂದ ಇನ್ನೂ ಖರ್ಚಾಗದೇ ಗೋದಾಮುಗಳಲ್ಲೇ ಇರುವ ಆತಂಕಕಾರಿ ಸಂಗತಿ ಹೊರಬಿದ್ದಿದೆ.
ಹೌದು. ಅನುಷ್ಠಾನಾಧಿಕಾರಿಗಳ ಬೇಜವಾಬ್ದಾರಿಯಿಂದ ಜಿಲ್ಲೆಯ ಗೋದಾಮುಗಳಲ್ಲಿ ಕೂಲಿಗಾಗಿ ಕಾಳು ಯೋಜನೆಯ 58 ಟನ್ ಅಕ್ಕಿ ಬಳಕೆಯಾಗದೆ ಉಳಿದಿರುವ ಸಂಗತಿ ಬಯಲಾಗಿದೆ. ಶಿರಾಳಕೊಪ್ಪ ಪಟ್ಟಣದ ಉಗ್ರಾಣದಲ್ಲಿ 627 ಚೀಲ ಬಳಕೆಯಾಗದೆ ಉಳಿದಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬೆಳಕಿಗೆ ಬಂದಿತ್ತು. ಆದರೆ ಜಿಲ್ಲೆಯ ವಿವಿಧ ವೇರ್ಹೌಸ್ಗಳಲ್ಲಿ 58 ಟನ್ ಅಕ್ಕಿ ಕೊಳೆಯುತ್ತಿರುವುದು ಗಮನಕ್ಕೆ ಬಂದಿದೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅವರು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಎಸ್.ಎಂ.ಕೃಷ್ಣ ಕಾಲದಲ್ಲಿ ಬರಗಾಲದಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿ ಜನ ಗುಳೇ ಹೋಗುವುದನ್ನು ತಪ್ಪಿಸಿ ಉದ್ಯೋಗ ಸೃಷ್ಟಿಸಲು ಕೂಲಿಗಾಗಿ ಕಾಳು ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಲಿಯ ಶೇ.60ರಷ್ಟು ಅಕ್ಕಿ, ಉಳಿದ ಶೇ.40 ಹಣವನ್ನು ನೀಡಲಾಗುತ್ತಿತ್ತು. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳನ್ನೂ ನೇಮಿಸಲಾಗಿತ್ತು.
ವಿಪರ್ಯಾಸವೆಂದರೆ 11 ವರ್ಷ ಕಳೆದರೂ ಈ ಯೋಜನೆಯಲ್ಲಿ ವಿನಿಯೋಗಿಸದೆ ಉಳಿದ ಅಕ್ಕಿಯನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಈ ಪ್ರಮಾಣದ ಅಕ್ಕಿ ಬಳಕೆಯಾಗಿಲ್ಲ ಎಂದು ಸರ್ಕಾರದ ಗಮನಕ್ಕೂ ತಂದಿಲ್ಲ. ಇಷ್ಟು ದಿನಗಳಿಂದ ಅಕ್ಕಿ ಹಾಳಾಗದಿರಲೆಂದು ಕ್ರಿಮಿನಾಶಕ ಇಟ್ಟಿರುವುದರಿಂದ ಆ ಅಕ್ಕಿಯ ಬಳಸಲಂತೂ ಬರವುದೇ ಇಲ್ಲ ಬಿಡಿ. ಆದರೆ 11 ವರ್ಷ ಬಳಕೆಯಾಗದೆ ಉಳಿದ ಅಕ್ಕಿ ಮಾತ್ರ ಯಾರ ಕಣ್ಣಿಗೂ ಬೀಳದಿರುವುದು ಅಚ್ಚರಿ ಮೂಡಿಸಿದೆ.