Uncategorized

ಸಾಕೋ ಸಾಕು, ಭಾರತ ಶಾಶ್ವತವಾಗಿ ನೋವು ಅನುಭವಿಸುತ್ತ ಇರಲಾಗದು: ಮೋದಿ

Pinterest LinkedIn Tumblr

ಗಾಜಿಯಾಬಾದ್: ಭಾರತದ ಮೇಲೆ ದಾಳಿ ನಡೆಸುವ ಭಯೋತ್ಪಾದಕ ಸಂಘಟನೆಗಳಿಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಥವನ್ನೆಲ್ಲ ಸಹಿಸಿಕೊಂಡು ಕೂರುವ ಕಾಲ ಮುಗಿದು ಹೋಗಿದೆ ಎಂದು ಸಾರಿದರು.

ಉರಿ ಮತ್ತು ಪುಲ್ವಾಮಾ ದಾಳಿಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಶಾಶ್ವತವಾಗಿ ನಾವು ನೋವು ಅನುಭವಿಸುತ್ತ ಕೂರುವ ಕಾಲ ಮುಗಿದು ಹೋಯಿತು’ ಎಂದರು.

ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಯ (ಸಿಐಎಸ್‌ಎಫ್‌) 50ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಧಾನಿ, ನೆರೆಯ ಶತ್ರು ರಾಷ್ಟ್ರ ಹಾಗೂ ದೇಶದೊಳಗೇ ಸಂಚು ರೂಪಿಸುವ ಕೆಲವು ವೈರಿಗಳಿಗೆ ಹೊರಗಿನ ಶಕ್ತಿಗಳ ಸಹಕಾರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಿಐಎಸ್‌ಎಫ್‌ನಂತಹ ಭದ್ರತಾ ಪಡೆಗಳ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ನುಡಿದರು.

‘ನಮ್ಮ ನೆರೆಯ ಶತ್ರು ದೇಶ ನಮ್ಮೊಂದಿಗೆ ನೇರ ಯುದ್ಧ ಮಾಡುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ದೇಶದೊಳಗೇ ಇರುವ ಕೆಲವು ಆಂತರಿಕ ಶತ್ರುಗಳಿಗೆ ವಿಧ್ವಂಸಕ ಕೃತ್ಯ ನಡೆಸಲು ಗಡಿಯಾಚೆಯಿಂದ ಕುಮ್ಮಕ್ಕು, ಸಹಕಾರ ನೀಡುತ್ತ ಛಾಯಾ ಸಮರಕ್ಕೆ ಮುಂದಾಗಿದೆ. ಭಯೋತ್ಪಾದನೆಯಂತಹ ಅಪಾಯಕಾರಿ ಸನ್ನಿವೇಶದಲ್ಲಿ ನಮ್ಮ ದೇಶ ಹಾಗೂ ಅದರ ಸಂಸ್ಥೆಗಳ ಭದ್ರತೆ ಕಾಪಾಡಿಕೊಳ್ಳುವುದು ಬಹು ದೊಡ್ಡ ಸವಾಲೇ ಆಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ದೇಶದಲ್ಲಿರುವ ವಿಐಪಿ ಸಂಸ್ಕೃತಿ ಭದ್ರತಾ ಪಡೆಗಳಿಗೆ ಸವಾಲೊಡ್ಡುತ್ತಿದೆ. ಕೆಲವು ಬಾರಿ ಸರಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ ಮತ್ತು ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಮೋದಿ ನುಡಿದರು.

ಸಿಐಎಸ್‌ಎಫ್‌ಗೆ ಅಭಿನಂದನೆ ಸಲ್ಲಿಸಿದ ಅವರು, ಒಬ್ಬ ವ್ಯಕ್ತಿಯ ರಕ್ಷಣೆ ಸುಲಭ; ಆದರೆ ಒಂದು ಸಂಸ್ಥೆಯ ರಕ್ಷಣೆ ಬಹಳ ಕಷ್ಟ ಎಂದು ಹೇಳಿದರು.

Comments are closed.