
ಬೆಂಗಳೂರು: ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಮೈಸೂರಿನ ಪುಷ್ಪಾ ಅಮರನಾಥ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರೇ ನೇಮಕವಾದಂತಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸ್ಥಾನಕ್ಕೆ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪುಷ್ಪಾ ಅಮರನಾಥ ನೇಮಕವಾಗಿರುವುದು ಹಲವರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಜಗಳಕ್ಕೆ ನಿಂತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದದ ಕೇಂದ್ರಬಿಂದುವಾಗಿದ್ದರು. ಆ ವೇಳೆ ಅವರು ನೀಡಿದ್ದ ಕೆಲ ಹೇಳಿಕೆಗಳಿಂದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮುಜುಗರ ಅನುಭವಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಲು ಆಗಿನಿಂದಲೇ ಕಸರತ್ತು ಆರಂಭವಾಗಿತ್ತು.
ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮುಂದುವರೆಸಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಈ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಪಿಸಿಸಿ ಕಾರ್ಯದರ್ಶಿಗಳಾದ ನಾಗಲಕ್ಷ್ಮೀ ಚೌಧರಿ, ಶಾರದಾ ಗೌಡ, ಭಾರತಿ ಶಂಕರ್, ಮಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೆರ್ಲೆಟ್ ಪಿಂಟೋ ಅವರನ್ನು ಹೈಕಮಾಂಡ್ ನಾಯಕರು ದೆಹಲಿಗೆ ಕರೆಸಿ ಸಂದರ್ಶನ ನಡೆಸಿದ್ದರು.
ನಾಗಲಕ್ಷ್ಮೀ ಚೌಧರಿಗೆ ನಿರಾಸೆ:
ಐವರು ಆಕಾಂಕ್ಷಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ರಾಜಕೀಯ ಹಿನ್ನೆಲೆ, ರಾಜಕೀಯ ಪ್ರವೇಶಕ್ಕೆ ಕಾರಣ ಹಾಗೂ ಪ್ರೇರಣೆ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಅಂತಿಮವಾಗಿ ನಾಗಲಕ್ಷ್ಮೀ ಚೌಧರಿ ಮತ್ತು ಪುಷ್ಪಾ ಅಮರನಾಥ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಖಚಿತ ಎನ್ನಲಾಗಿತ್ತು. ಖುದ್ದು ರಾಹುಲ್ ಗಾಂಧಿಯೇ ಸಂದರ್ಶನ ನಡೆಸಿ ಪುಷ್ಪಾ ಅಮರನಾಥ್ ಅವರ ಹೆಸರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುಷ್ಪಾ ಅವರ ಆಯ್ಕೆಯಿಂದ ಅಧ್ಯಕ್ಷೆ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾಗಲಕ್ಷ್ಮೀ ಚೌಧರಿ ಅವರಿಗೆ ಭಾರೀ ನಿರಾಸೆ ಉಂಟಾಗಿದೆ. ಈ ಸ್ಥಾನಕ್ಕಾಗಿ ಸಾಕಷ್ಟು ಲಾಬಿ ನಡೆಸಿದ್ದ ಚೌಧರಿಗೆ ಕೊನೆಗೂ ಹಿನ್ನಡೆಯಾಗಿದೆ. ಪುಷ್ಪಾ ಅಮರನಾಥ್ ಸಿದ್ದರಾಮಯ್ಯನವರ ತವರಿನವರಾಗಿದ್ದು, ಈ ಹಿಂದೆ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿಯೂ ಅಧಿಕಾರ ನಿರ್ವಹಿಸಿದ್ದರು.
Comments are closed.