ಮೀರತ್: ಶಾಲೆಯಲ್ಲಿ ಮಕ್ಕಳಿಗೆ ರಜೆ ನೀಡಲು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳು ಮುಖ್ಯೋಪಾಧ್ಯಾಯರಿಗೆ ಸಿಗಬಹುದು; ಆದರೆ ತನಗೆ ಇನ್ನೊಂದು ಶಾಲೆಯ ಮುಖ್ಯೋಪಾದ್ಯಾಯಿನಿಯೊಂದಿಗೆ ಸರಸ – ಸಲ್ಲಾಪ ನಡೆಸಲು ಅನುಕೂಲವಾಗಲೆಂಬ ಕಾರಣಕ್ಕೆ ಶಾಲೆಯ ಮಕ್ಕಳಿಗೆ ರಜೆ ನೀಡಿದರೆ ? ಅಂತಹ ಒಂದು ವಿಲಕ್ಷಣ ಪ್ರಸಂಗ ಇದೀಗ ವರದಿಯಾಗಿದೆ.
ಮೀರತ್‌ನ ಬಿಜನೂರ್ ಎಂಬಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮೊನ್ನೆ ಎಂದಿನಂತೆ ಶಾಲಾ ತರಗತಿಗಳು ಆರಂಭವಾದ ಸ್ವಲ್ಪವೇ ಹೊತ್ತಿನಲ್ಲಿ, ಅಂದರೆ ಬೆಳಗ್ಗೆ 10 ಗಂಟೆ ಆಗುತ್ತಲೇ, “ಮಕ್ಕಳೇ, ನಿಮಗಿವತ್ತು ರಜೆ, ತರಗತಿಗಳು ಇಲ್ಲ, ನೀವೆಲ್ಲ ಈಗ ಮನೆಗೆ ಹೋಗಿ’ ಎಂದು ಹೇಳಿದರು.
ಹೀಗೆ ಅಛಾನಕ್ ಆಗಿ ಸಿಕ್ಕಿದ ರಜೆಯ ಸಂಭ್ರಮದಲ್ಲಿ ಮಕ್ಕಳೆಲ್ಲ ಮನೆಗೆ ಹೋದರು. ಮಕ್ಕಳು ಇದ್ದಕ್ಕಿದ್ದಂತೆಯೇ ಮನೆಗೆ ಬಂದದ್ದನ್ನು ಕಂಡು ಮನೆಯಲ್ಲಿದ್ದ ಹೆತ್ತವರಿಗೆ ಅಚ್ಚರಿಯಾಯಿತು. ಶಾಲೆಗೆ ಯಾಕೆ ರಜೆ ಎಂದು ಮಕ್ಕಳನ್ನು ಕೇಳಿದರು. “ರಜೆ ಸಿಕ್ಕಿದ್ದು ಹೌದು, ಕಾರಣ ಗೊತ್ತಿಲ್ಲ’ ಎಂದು ಮಕ್ಕಳು ಉತ್ತರಿಸಿದರು.
ಮಕ್ಕಳ ಉತ್ತರದಿಂದ ಹೆತ್ತವರಿಗೆ ಯಾಕೋ ಸಮಾಧಾನವಾಗಲಿಲ್ಲ. ಹೆತ್ತವರಲ್ಲಿ ಕೆಲವರು ಕುತೂಹಲ ತಡೆಯಲಾರದೆ ನೇರವಾಗಿ ಶಾಲೆಗೆ ಹೋದರು. ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಇನ್ನೊಂದು ಶಾಲೆಯ ಮುಖ್ಯೋಪಾಧ್ಯಾಯಿಯಿನಿ ಶಾಲೆಯ ಕೋಣೆಯೊಂದರಲ್ಲಿ ಬಾಗಿಲು ಮುಚ್ಚಿಕೊಂಡು ಪರಸ್ಪರ ಬಿಸಿ ಅಪ್ಪುಗೆಯಲ್ಲಿರುವುದನ್ನು ಕಂಡು ಇವರು ದಿಗಿಲುಗೊಂಡರು.
ಸಿಟ್ಟಿಗೆದ್ದ ಹೆತ್ತವರು ಒಡನೆಯೇ ಅವರಿಬ್ಬರನ್ನು ಬಲವಂತದಿಂದ ಪೊಲೀಸ್ ಠಾಣೆಗೆ ಕರೆದೊಯದ್ದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಹಾಗಿದ್ದರೂ ಪೊಲೀಸರು, ಆರೋಪಿ ಮುಖ್ಯೋಪಾಧ್ಯಾಯ – ಮುಖ್ಯೋಪಾಧ್ಯಾಯಿನಿಗೆ ಮಂಗಳವಾರ ತಡರಾತ್ರಿ ಬೇಲ್ ನೀಡಿ ಕಳಿಸಿದರು.
ಐಪಿಸಿ ಸೆ.294ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ (ಶಾಲೆಯಲ್ಲಿ)ಅನೈತಿಕ ಚಟುವಟಿಕೆಯಲ್ಲಿ ತೊಡಗಿದವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶವಿದೆ. ಆರೋಪಿ ಶಿಕ್ಷಕ-ಶಿಕ್ಷಕಿ ವಿರುದ್ಧ ಪೊಲೀಸರು ಈಗ ಇದೇ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಆರ್ ಆರ್ ಕಠೇರಿಯಾ ಅವರ ಕಾರ್ಯವ್ಯಾಪ್ತಿಗೆ ಈ ಶಾಲೆ ಒಳಪಟ್ಟಿದ್ದು, ಅವರು ಈ ಪ್ರಕರಣದ ಸಂಬಂಧ ಹೀಗೆ ಹೇಳಿದರು: ಶಾಲೆಯ ಕೋಣೆಯಲ್ಲಿ ಆರೋಪಿ ಶಿಕ್ಷಕ – ಶಿಕ್ಷಕಿ ಹಾಸಿಗೆಯಲ್ಲಿ ಜತೆಯಾಗಿರುವುದನ್ನು ಗ್ರಾಮಸ್ಥರು ಕಂಡಿದ್ದಾರೆ. ಆರೋಪಿಗಳನ್ನು ಗ್ರಾಮಸ್ಥರೇ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಹಾಗಾಗಿ ಈ ಪ್ರಕರಣಕ್ಕೆ ಬಲವಾದ ಸಾಕ್ಷ್ಯಾಧಾರವಿದೆ.
ಆರೋಪಿ ಶಾಲಾ ಮುಖ್ಯೋಪಾಧ್ಯಾಯ ಮತ್ತು ಮುಖ್ಯೋಪಾಧ್ಯಾಯಿನಿಯನ್ನು ದೂರದ ಚಾಂದ್‌ಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿರುವ ಹಿನ್ನೆಲಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಪ್ರಾಥಮಿಕ ಶಿಕ್ಷಾಧಿಕಾರಿ ಹಾಗೂ ಗ್ರಾಮದ ಮುಖ್ಯಸ್ಥರು ಶಾಲೆಗೆ ಭೇಟಿಕೊಟ್ಟಿದ್ದಾರೆ.
ಬಿಎಸ್‌ಎ ರಾಜೇಶ್ ಶ್ರೀವಾಸ್ತವ ಅವರ ಪ್ರಕಾರ ಆರೋಪಿ ಶಿಕ್ಷಕ – ಶಿಕ್ಷಕಿ ಗಂಭೀರವಾದ ಅಪರಾಧ ಎಸಗಿರುವುದರಿಂದ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.
ಹಾಗಿದ್ದರೂ ಆರೋಪಿ ಶಿಕ್ಷಕ – ಶಿಕ್ಷಕಿ ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ. ತಾವೇನೂ ತಪ್ಪು ಮಾಡಿಲ್ಲ ಎಂದಿದ್ದಾರೆ.
ಆರೋಪಿ ಮುಖ್ಯೋಪಾಧ್ಯಾಯ “ಆಪಾದನೆಗಳೆಲ್ಲ ನಿರಾಧಾರವಾಗಿದೆ. ಇನ್ನೊಂದು ಶಾಲೆಯ ಮುಖ್ಯೋಪಾಧ್ಯಾಯಿನಿ ನಮ್ಮ ಶಾಲೆಗೆ ಬಂದಿರುವುದೇನೋ ನಿಜ. ಉಳಿದ ಸಂಗತಿಗಳೆಲ್ಲವೂ ತಥಾಕಥಿತ ಮತ್ತು ಸೃಷ್ಟಿಸಲ್ಪಟ್ಟದ್ದು’ ಎಂದಿದ್ದಾರೆ.
ಆರೋಪಿ ಮುಖ್ಯೋಪಾಧ್ಯಾಯಿನಿಯು “ನಾನು ಆ ಶಾಲೆಗೆ ಹೋದದ್ದು ನನ್ನ ಸಹವರ್ತಿ ಶಿಕ್ಷಕಿಯನ್ನು ಕಾಣುವುದಕ್ಕಾಗಿ; ನನ್ನ ಮೇಲಿನ ಬೇರೆಲ್ಲ ಆರೋಪಗಳು ಅಸತ್ಯ, ನಿರಾಧಾರ’ ಎಂದಿದ್ದಾರೆ.
-ಉದಯವಾಣಿ