ಕರಾವಳಿ

ಹೆದ್ದಾರಿಗಳಲ್ಲಿ ಹೆಚ್ಚುತ್ತಿದೆ ಅಪಘಾತ; ಶಾಲೆಗಳ ಗೋಡೆಯಲ್ಲಿ ಟ್ರಾಫಿಕ್ ರೂಲ್ಸ್ ಚಿತ್ರ, ಬರಹಗಳು!

Pinterest LinkedIn Tumblr

ಉಡುಪಿ: ಶಾಲೆಗಳ ಗೋಡೆ, ಕಂಪೋಂಡ್ ಗೋಡೆಗೆ ಬಣ್ಣ ಬಳಿದು ಚಿತ್ರ ಬಿಡಿಸುತ್ತಿರೋ ಶಿಕ್ಷಕರು….ಗೋಡೆಗಳಲ್ಲಿ ಕಾಣಿಸುತ್ತಿರೋ ಅಪಘಾತ ಎಚ್ಚರಿಕೆ ಬಣ್ಣದ ಚಿತ್ತಾರ….ಅಷ್ಟಕ್ಕೂ ಏನಿದು ಹೊಸ ಆದೇಶ ಅಂತೀರಾ…..ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಹೆಚ್ಚುತ್ತಿರುವ ರಸ್ತೆ ಅಪಘಾತದ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಬೀಸಿದ ಛಾಟಿಗೆ ಎಚ್ಚೆತ್ತ ರಾಜ್ಯ ಸರ್ಕಾರ ಶಾಲೆಗಳ ಮೂಲಕ ಅಪಘಾತ ಜಾಗೃತಿ ಮೂಡಿಸುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಉಡುಪಿ ಜಿಲ್ಲೆಯ 150 ಶಾಲೆಗಳಲ್ಲಿ ಅಪಘಾತ ಜಾಗೃತಿ ಮೂಡಿಸುವ ಸ್ಲೋಗನ್, ಚಿತ್ರಗಳ ಬಿಡಿಸುವ ಕೆಲಸ ಚಿತ್ರಕಲಾ ಶಿಕ್ಷಕರು ಮಾಡಬೇಕಿದೆ. ಅದಕ್ಕಾಗಿಯೇ ಚಿತ್ರಕಲಾ ಶಿಕ್ಷಕರ ತಂಡ ರಚನೆಯಾಗಿದ್ದು, ಶೇ.80ರಷ್ಟು ಕೆಲಸ ಪೂರ್ಣವಾಗಿದೆ. ಬೈಂದೂರು ವಿಭಾಗದಲ್ಲೂ ಕೂಡಾ ಚಿತ್ರಕಲಾ ಶಿಕ್ಷಕರ ತಂಡ ಚಿತ್ರ ಬಿಡಿಸುವ ಕೆಲಸ ಮಾಡುತ್ತಿದ್ದಾರೆ. ಕುಂದಾಪುರ ಬೈಂದೂರಿನಲ್ಲಿ ಚಿತ್ರಕಲಾ ಶಿಕ್ಷಕರ ನಾಲ್ಕು ತಂಡ ರಚನೆ ಮಾಡಲಾಗಿದೆ. ಒಂದೊದು ತಂಡದಲ್ಲಿ ಐದು ಚಿತ್ರಕಲಾ ಶಿಕ್ಷಕರಿದ್ದು, ಗುರತಿಸಿದ ಶಾಲೆಗಳಲ್ಲಿ ಚಿತ್ರ ಬಿಡಿಸಿ, ಸ್ಲೋಗನ್ ಬರೆದು ಅಂದಗೆಟ್ಟ ಗೋಡೆಯಲ್ಲಿ ಅಪಘಾತ ಎಚ್ಚರಿಕೆ ಚಿತ್ತಾರ ಬಿಡಿಸಿದ್ದಾರೆ. ಚಿತ್ರಕಲಾವಿದರು ಕಾಟಾಚಾರಕ್ಕೆ ಕೆಲಸ ಮಾಡುತ್ತಿಲ್ಲ. ಒಮ್ಮೆ ರಸ್ತೆಯಲ್ಲಿ ಹೋಗವವರು ವಾಹನ ಚಾಲಕರ ಕಣ್ಣುಹಾಯಿಸಿ ನೋಡುವಂತೆ ಆಕರ್ಷಕವಾಗಿದೆ. ಮಕ್ಕಳ ತಮ್ಮತ್ತ ಸೆಳೆಯುವಲ್ಲೂ ಚಿತ್ರಗಳು ಯಶಸ್ವಿಯಾಗಿವೆ.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆ ಬಳಿ ಹಾದುಹೋಗುವ ರಸ್ತೆ ಮಗ್ಗುಲಲ್ಲಿರುವ ಶಾಲೆಗಳಲ್ಲಿ ಅಪಘಾತ ಎಚ್ಚರಿಕೆ ಚಿತ್ರ ಬಿಡಿಸುವುದು ಕಡ್ಡಾಯ. ಶಾಲೆ ಕಂಪೌಂಡ್, ಗೋಡೆಗಳ ಮೇಲೆ ಚಿತ್ರ ಬರೆಯುವಂತೆ ಸೂಚಿಸಿದೆ. ಅಪಘಾತ ಎಚ್ಚರಿಕೆ ಚಿತ್ರಗಳಿಗೆ ಬೇಕಾಗುವ ಬಣ್ಣ ಹಾಗೂ ಗೋಡೆ ಬಣ್ಣಕ್ಕೆ ಶಾಲಾ ಸಂಚಯನ ಅನುದಾನ ಬಳಸಿಕೊಳ್ಳುವಂತೆ ಸೂಚಿಸಿದ್ದು, ದಾನಿಗಳ ಮೂಲಕ ನಿರ್ವಹಿಸಲು ಅವಕಾಶವಿದೆ. ಕೇವಲ ಗೋಡೆಯಲ್ಲಿ ಚಿತ್ರ ಬಿಡಿಸಿ, ಅಕ್ಷರ ಬರೆದರಷ್ಟೇ ಸಾಲೋದಿಲ್ಲ. ಎಲ್ಲವನ್ನೂ ಸಾಕ್ಷಿ ಸಮೇತ ವರದಿ ಸರ್ಕಾರಕ್ಕೆ ನೀಡಬೇಕಾಗುತ್ತದೆ.

ರಸ್ತೆ ಸುಕ್ಷತಾ ಅಪಘಾತ ತಡೆಗಟ್ಟುವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ 150 ಶಾಲೆಗಳ ಗುರುತಿಸಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ, ಪ್ರೌಢ ಶಾಲೆ ಹಾಗೂ ಕಾಲೇಜ್ ಎನ್ನುವ ಬೇಧವಿಲ್ಲದೆ ಎಲ್ಲಾ ಶಾಲೆಗಳಲ್ಲೂ ಜಾಗೃತಿ ಮೂಡಿಸುವ ಸ್ಲೋಗನ್ ಹಾಗೂ ಅದಕ್ಕೆ ಪೂರಕ ಚಿತ್ರಗಳ ಶಾಲೆ ಗೋಡೆ ಅಥವಾ ಕಂಪೌಂಡ್ ವಾಲ್ ಬಳಸಿಕೊಳ್ಳಲು ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿ ಮೂಲಕ ಅದೇಶ ಹೊರಡಿಸಿದ್ದಾರೆ. ನುಡಿಕಟ್ಟು, ಚಿತ್ರ ಹಾಗೂ ಚಿತ್ರದ ಹಿಂಬದಿ ಬಣ್ಣಕ್ಕೆ ಶಾಲೆ ಸಂಚಯನ ಅನುದಾನ ಬಳಸಿಕೊಳ್ಳಲು ಸೂಚಿಸಲಾಗಿದೆ. ಒಂದು ಶಾಲೆಗೆ ಕನಿಷ್ಟ ಅಂದರೆ, 2 ಸಾವಿರ ಗರಿಷ್ಠ 3 ಸಾವಿರ ಖರ್ಚಾಗುತ್ತದೆ. ಕುಂಭಾಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಅನುದಾನ ನೀಡಿ, ರಸ್ತೆ ಸುಕ್ಷತಾ ಎಚ್ಚರಿಕೆ ಕಾರ್‍ಯಕ್ಕೆ ಸಹಕಾರ ನೀಡಿದ್ದಾರೆ.

ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ಬ್ರಹ್ಮಾವರ, ಕುಂದಾಪುರ ಬೈಂದೂರು ಸೇರಿದ್ದು, ಕುಂದಾಪುರ ತಾಲೂಕಿನ 30 ಶಾಲೆಗಳ ಗುರುತಿಸಲಾಗಿದೆ. ಅದರಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ, ರಸ್ತೆ ಮಗ್ಗಲಿನ ಶಾಲೆಗಳಲ್ಲಿ ರಸ್ತೆ ಸುರಕ್ಷತೆ ಬೋರ್ಡ್ ಬರೆಯುವುದು ಕಡ್ಡಾಯವಾಗಿದ್ದು, ಕುಂದಾಪುರ ಹಾಗೂ ಬೈಂದೂರು 15 ಶಾಲೆಗಳಲ್ಲಿ 11 ಶಾಲೆಗಳ ಬೋರ್ಡ್ ಬರೆಯುವ ಕೆಲಸ ಪೂರ್ಣವಾಗಿದ್ದು, ಇದೇ ತಿಂಗಳು 20ನೇ ತಾರೀಕಿನ ಒಳಗೆ ಎಲ್ಲಾ ಶಾಲೆಗಳ ಕೆಲಸ ಸಂಪೂರ್ಣವಾಗಲಿದೆ. ಮಕ್ಕಳ ಮನಸ್ಸು ಸೆಳೆಯುವ ಚಿತ್ರಗಳ ಮೂಲಕ ಚಂದದ ನುಡಿಕಟ್ಟುಗಳ ಬರೆದು ವಿದ್ಯಾರ್ಥಿಗಳ ಸೆಳೆಯುವ ಪ್ರಯತ್ನ ಇದರಲ್ಲಿ ಇದೆ. ಮಕ್ಕಳಿಗೆ ಪ್ರಿಯವಾದ ಮೊಲ, ಕರಡಿ, ಆನೆ, ಇಲಿ, ಮುಂತಾದ ಚಿತ್ರಗಳ ಬಳಸಲಾಗಿದೆ. ರಸ್ತೆ ಸುರಕ್ಷಿತ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡಬಹುದು.

ಒಟ್ಟಾರೆ ಅಪಘಾತ ಎಚ್ಚರಿಕೆ ಅಕ್ಷರ, ಚಿತ್ರಗಳು ಶಾಲೆಯ ಅಂದ ಹೆಚ್ಚಿಸಿದ್ದಲ್ಲದೆ, ಮಕ್ಕಳಲ್ಲೂ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸುತ್ತಿದೆ. ಅಪಘಾತ ಎಚ್ಚರಿಕೆ ಫಲಕಗಳು ರಸ್ತೆ ಅಪಘಾತ ತಗ್ಗಿಸಿದರೆ ಚಿತ್ರಕಲಾವಿದರ ಪ್ರಯತ್ನಕ್ಕೆ ನ್ಯಾಯಸಿಕ್ಕಂತೆ ಆಗುತ್ತದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.