ಕುಂದಾಪುರ: ಮದುವೆ ಸಂಭ್ರದಲ್ಲಿರುವ ನವವಿವಾಹಿತ ಜೋಡಿಯೊಂದು ಸಾಮಾಜಿಕ ಕಳಕಳಿಯ ಕಾರ್ಯದ ಮೂಲಕ ಸುದ್ದಿಯಾಗಿದೆ. ಬೈಂದೂರು ತಾಲೂಕಿನ ತಾಲೂಕಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ದಂಪತಿಗಳು ಇತ್ತೀಚೆಗಷ್ಟೇ ಹಸೆಮಣೆ ಎರಿದ್ದು ತಾವು ಹನಿಮೂನ್‌ಗೆ ಹೋಗುವುದನ್ನು ಮುಂದಕ್ಕೆ ಹಾಕಿ ಬೀಚ್ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
ನ.27ರಿಂದ ಒಂಬತ್ತು ದಿನಗಳ ಕಾಲ ಈ ನವದಂಪತಿಗಳು ಬೀಚ್ ಸ್ವಚ್ಛತಾ ಕಾರ್ಯ ನಡೆಸಿದ್ದು ಸೋಮೇಶ್ವರ ಕಡಲತೀರದ ಒಂದು ಭಾಗದಲ್ಲಿದ್ದ ಎಲ್ಲಾ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಅನುದೀಪ್ ಹೆಗ್ಡೆ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿ ಮಾಡಿಕೊಂಡಿದ್ದು ಮಿನುಷಾ ಫಾರ್ಮಾಸಿಟಿಕಲ್ ಕಂಪೆನಿ ಉದ್ಯೋಗಿಯಾಗಿದ್ದಾರೆ. ಇಬ್ಬರು ನವೆಂಬರ್ 18 ರಂದು ವಿವಾಹವಾಗಿದ್ದರು.
ತಮ್ಮ ದಾಂಪತ್ಯ ಜೀವನದ ನೆನಪುಗಳು ಅಚ್ಚಳಿಯದಂತೆ ನೆನಪಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಅವರು ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಮೊದಲ ಏಳು ದಿನಗಳಲ್ಲಿ ಅವರು 500 ಕೆ.ಜಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಸ್ಥಳೀಯರು ಅವರೊಂದಿಗೆ ಕೈಜೋಡಿಸಿದ್ದಾರೆ. ಕಡಲತೀರದ 700 ಮೀಟರ್‌ಗಳನ್ನು ಈಗ ಸ್ವಚ್ಛಗೊಳಿಸಲಾಗಿದೆ. ಪ್ರತಿದಿನ ಬೀಚ್ ಸ್ವಚ್ಚತೆಗೆ ಎರಡು ಗಂಟೆಗಳ ಸಮಯ ಕಾಯ್ದಿರಿಸಿದ್ದು ಮದ್ಯದ ಬಾಟಲಿಗಳು, ಪಾದರಕ್ಷೆಗಳು ಸಹಿತ ಅಪಾರ ಪ್ರಮಾಣದ ತ್ಯಾಜ್ಯ ವಸ್ತುಗಳನ್ನು ಒಗ್ಗೂಡಿಸಿದ್ದಾರೆ. ಬೈಂದೂರಿನ ಮಂಜುನಾಥ್ ಶೆಟ್ಟಿ ಹಾಗೂ ಹಸನ್ ಎನ್ನುವರ ತಂಡ ಕೂಡ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಒಟ್ಟಿನಲ್ಲಿ ಈ ದಂಪತಿಗಳ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿಯಾಗುವಂತದ್ದು.
(ವರದಿ- ಯೋಗೀಶ್ ಕುಂಭಾಸಿ)