ಕರಾವಳಿ

ಬಿಲ್ಲವ ಸಮಾಜದ ಧುರೀಣರ ಆದರ್ಶ ಸಂಘಟನಾತ್ಮಕವಾಗಿ ಉಳಿಸೋಣ : ಭಾಸ್ಕರ ಎಂ ಸಾಲ್ಯಾನ್

Pinterest LinkedIn Tumblr

ಮಂಗಳೂರು : ಬಿಲ್ಲವ ಸಮಾಜದ ಸಂಘಟನಾ ಶಕ್ತಿಯಾಗಿದ್ದ ರುಕ್ಕರಾಮ್ ಸಾಲ್ಯಾನ್ ಹಾಗೂ ಜಯ ಸುವರ್ಣರ ಆದರ್ಶವನ್ನು ಉಳಿಸಿಕೊಳ್ಳಲು ಅವರ ಸ್ಮರಣೆಯಲ್ಲಿ ಮೂಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಸ್ವಯಂ ಪ್ರೇರಿತರಾಗಿ ಸಹಕಾರ ನೀಡುವ ಮೂಲಕ ಸಮಾಜವನ್ನು ಕಟ್ಟಲು ಪ್ರಾಮಾಣಿಕವಾಗಿ ದುಡಿಯೋಣ ಎಂದು ಭಾರತ್ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ ಎಂ. ಸಾಲ್ಯಾನ್ ಹೇಳಿದರು.

ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಶ್ರೀ ರುಕ್ಕರಾಮ್ ಸಾಲ್ಯಾನ್ ಕಟ್ಟಡ ಅಭಿವೃದ್ಧಿ ಸಮಿತಿಯ ಜಂಟಿ ಸಂಭೆಯಲ್ಲಿ ಮಾರ್ಗದರ್ಶನ ನೀಡಿ, ಹಿರಿಯರ ತ್ಯಾಗಮಯ ಬದುಕನ್ನೇ ನಾವು ದಾರಿದೀಪವಾಗಿ ಕಂಡುಕೊಳ್ಳುವ ಕಾಲ ಕೂಡಿ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳದೆ ಎಲ್ಲಾ ಪ್ರದೇಶದಲ್ಲಿರುವ ಬಿಲ್ಲವ ಬಾಂಧವರನ್ನು ಒಗ್ಗೂಡಿಸಿ ಮಹಾನ್ ಕಾರ್ಯಕ್ಕೆ ಸಜ್ಜಾಗೋಣ ಎಂದರು.

ಕಟ್ಟಡ ಸಮಿತಿಯ ಅಧ್ಯಕ್ಷ ವಿಠಲ ಸಿ. ಅಮೀನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಮಾತನಾಡಿ, ಸಮಿತಿಯ ಸದಸ್ಯರು ಸಕ್ರೀಯವಾಗಿ ತೊಡಗಿಕೊಂಡಲ್ಲಿ ಯಾವುದೇ ಕಾರ್ಯ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ, ನಮ್ಮಲ್ಲಿನ ಭಾವನೆಗಳು ಒಂದೇ ರೀತಿಯಾಗಿ ಕೆಲಸ ನಿರ್ವಹಿಸಿದಲ್ಲಿ ಒಂದೇ ವರುಷದಲ್ಲಿ ಕಟ್ಟಡ ಪೂರ್ಣವಾಗುವುದು ನಿಶ್ಚಿತ, ಸೂಕ್ತ ಗುರಿಯೊಂದಿಗೆ ಮುಂದೆ ಸಾಗೋಣ ಎಂದರು.

ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸುವರ್ಣ ಅವರು ಧನ ಸಹಾಯವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆ ಎಂದು ಮಾಹಿತಿ ನೀಡಿದರು.

ಇಂಜಿನಿಯರ್ ಪ್ರಮಲ್ ಕಾರ್ಕಳ ಕಟ್ಟಡದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು, ಕೋಶಾಧಿಕಾರಿ ಪ್ರಕಾಶ್ ಸುವರ್ಣ ಅವರು ಆರ್ಥಿಕ ಲೆಕ್ಕಗಳ ಬಗ್ಗೆ ಮಾಹಿತಿ ನೀಡಿದರು. ಸತೀಶ್ ಅಂಚನ್, ರಾಘು ಸುವರ್ಣ, ವಿಜಯಕುಮಾರ್ ಕುಬೆವೂರು ಮತ್ತಿತರರು ಸಲಹೆಗಳನ್ನು ನೀಡಿದರು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಜಿ. ಅಮೀನ್, ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಸೂರ್ಯಕುಮಾರ್ ಸುವರ್ಣ ಹಾಗೂ ಎಚ್.ವಿ.ಕೋಟ್ಯಾನ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಬಡುಗುಹಿತ್ಲು ಕಾರ್ಯಕ್ರಮ ನಿರೂಪಿಸಿದರು.

ಚಿತ್ರ, ವರದಿ: ದಿನೇಶ್ ಕುಲಾಲ್

Comments are closed.