ಕರಾವಳಿ

ರಾಷ್ಟ್ರಮಟ್ಟದ ರೈತರ ಹೋರಾಟಕ್ಕೆ ಬೆಂಬಲ: ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯಿಂದ ನಾಳೆ ನಂತೂರಿನಲ್ಲಿ ರಾಸ್ತಾ ರೋಕೊ

Pinterest LinkedIn Tumblr

ಮಂಗಳೂರು, ಡಿಸೆಂಬರ್.07 : ಕೇಂದ್ರ ಸರಕಾರದ ಕೃಷಿ ಮತ್ತು ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ದೇಶದ ಪ್ರಗತಿಪರ ಹಾಗೂ ಜನಪರ ಸಂಘಟನೆಗಳು ತೀವ್ರವಾದ ಪ್ರತಿಭಟನೆಗಳನ್ನು ನಡೆಸುತ್ತಿವೆ. ವಿಭಿನ್ನ ಸಂಘಟನೆಗಳು ಕರಾವಳಿಯ ವಿವಿಧೆಡೆ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮ ಗಳಲ್ಲಿ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸದಸ್ಯರು ಸಕ್ರಿಯರಾಗಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದ ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಿದ್ದಾರೆ.

ಇದರ ಭಾಗವಾಗಿ ಡಿಸೆಂಬರ್ 8ರಂದು ಬೆಳಿಗ್ಗೆ 10 ಗಂಟೆಗೆ ಅಖಿಲ ಭಾರತ ಬಂದ್ ಕರೆ ಬೆಂಬಲಿಸಿ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯು, ಮಂಗಳೂರಿನ ನಂತೂರು ಜಂಕ್ಷನ್ ಬಳಿ ರಾಸ್ತಾ ರೋಕೊ ಹೆದ್ದಾರಿ ತಡೆ ಹಮ್ಮಿಕೊಂಡಿದೆ ಎಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸಂಚಾಲಕ ಶಭೀರ್ ಆಹಮ್ಮದ್ ತಿಳಿಸಿದ್ದಾರೆ.

ಪಂಜಾಬು, ಹರ್ಯಾಣ, ರಾಜಸ್ತಾನ, ಉತ್ತರ ಪ್ರದೇಶದ ಲಕ್ಷಾಂತರ ರೈತರು ವಿವಿಧ ರೈತಸಂಘಟನೆಗಳ ಆಶ್ರಯದಲ್ಲಿ ದೆಹಲಿಯ ಹೊರವಲಯದಲ್ಲಿ ಅನೇಕ ದಿನಗಳಿಂದ ಮುಷ್ಕರವನ್ನು ಹೂಡಿದ್ದಾರೆ. ಕೇಂದ್ರ ಸರಕಾರವು ರೈತರ ಹಕ್ಕೊತ್ತಾಯದ ಕುರಿತು ಅನಪೇಕ್ಷಣೀಯ ಅಪಪ್ರಚಾರ ನಡೆಸಿ ಅವರ ಮೇಲೆ ಬಲಪ್ರಯೋಗಕ್ಕೂ ಮುಂದಾಯಿತು. ಎದೆಗುಂದದ ಹೋರಾಟಗಾರರು ಮುಷ್ಕರವನ್ನು ಮುಂದುವರಿಸಿದ್ದಲ್ಲದೆ, ದೇಶಾದ್ಯಂತ ವಿಭಿನ್ನ ಸಂಘಟನೆಗಳು, ಹೋರಾಟಗಾರರು, ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು ಹೋರಾಟಕ್ಕಿಳಿದ ರೈತರಿಗೆ ಬೆಂಬಲವನ್ನು ನೀಡುತ್ತಿದ್ದಾರೆ.

ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯು ಕೃಷಿ ಮತ್ತು ರೈತರ ಹಿತಾಸಕ್ತಿಗಳ ರಕ್ಷಣೆಗೆ 2007ರಿಂದ ತನ್ನನ್ನು ತೊಡಗಿಸಿಕೊಂಡಿದೆ. ಬೃಹತ್ ಉದ್ದಿಮೆಗಳಿಗೋಸ್ಕರ ಹಾಗೂ ಭೂಮಿಯ ದಳ್ಳಾಳಿಗಳ ಲಾಭಕ್ಕೋಸ್ಕರ ಕೃಷಿಭೂಮಿಯನ್ನು ಅಕ್ರಮವಾಗಿ ಸ್ವಾಧೀನ ಪಡಿಸುವ ಪ್ರಕ್ರಿಯೆಗಳ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸಿದೆ.

ಇಂದಿನ ಕೇಂದ್ರ ಸರಕಾರದ ರೈತವಿರೋಧಿ ನೀತಿಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಮಾತ್ರವಲ್ಲ ಸಂಸತ್ತಿನಲ್ಲಿ ಮಂಜೂರಾದ ಮೂರೂ ರೈತವಿರೋಧಿ ಕಾನೂನುಗಳನ್ನು ರೈತಸಂಘಗಳ ಬೇಡಿಕೆಯಂತೆ ಹಿಂಪಡೆಯಬೇಕೆಂದು ಸರಕಾರವನ್ನು ಒತ್ತಾಯಿಸುತ್ತದೆ ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.