ಕರಾವಳಿ

ಶಂಕರನಾರಾಯಣ ಜಾತ್ರೆಯ ಕಟ್ಟೆಪೂಜೆ- ಪೊಲೀಸರಿಂದ ನಡೆಯಿತು ಅನ್ನದಾನ

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧವಾದ ಕುಂದಾಪುರದ ಶಂಕರನಾರಾಯಣ ದೇವಸ್ಥಾನದ ರಥೋತ್ಸವವು ಜ.17 ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಜಾತ್ರೆಯ ಸಮಯ ಇಲ್ಲಿ ನಡೆಯುವ ಕಟ್ಟೆ ಪೂಜೆ ಕಾರ್ಯಕ್ರಮಕ್ಕೂ ಶಂಕರನಾರಾಯಣ ಪೊಲೀಸ್ ಠಾಣೆಗೂ ಒಂದು ನಂಟಿದೆ.

ಪೊಲೀಸ್ ಠಾಣೆಯಲ್ಲಿ ಸಡಗರ!
ಶಂಕರನಾರಾಯಣ ಜಾತ್ರೆಗೂ ಮೂರು ದಿನಗಳ ಹಿಂದೆ ರಾತ್ರಿ ದೇವರು ಕಟ್ಟೆ ಪೂಜೆ ಅಥವಾ ಕಟ್ಟೆ ಓಲಗಕ್ಕೆ ಬರುವ ಪರಿಪಾಠವಿದೆ. ಹೀಗೆ ಕಟ್ಟೆ ಪೂಜೆಗೆ ಬರುವ ದೇವರನ್ನು ಅಲ್ಲಲ್ಲಿ ಕಟ್ಟೆಗಳಲ್ಲಿಟ್ಟು ಪೂಜೆ ನಡೆಸಿ ಭಕ್ತಾಧಿಗಳಿಗೆ ಹಣ್ಣು ಕಾಯಿ ಪ್ರಸಾದ ನೀಡುವ ಪದ್ದತಿಯಿದೆ. ಈ ಕಟ್ಟೆಗಳ ಪೈಕಿ ಶಂಕರನಾರಾಯಣ ಪೊಲೀಸ್ ಠಾಣೆ ಎದುರಿಗಿನ ಆವರಣದಲ್ಲೇ ಇರುವ ಶಂಕರನಾರಾಯಣ ದೇವರಿಗೆ ಸಂಬಂಧಿಸಿದ ಕಟ್ಟೆಯೂ ಪ್ರಮುಖವಾದುದು. ಇಲ್ಲಿಗೆ ಬರುವ ದೇವರನ್ನು ಇಟ್ಟು ಇಡೀ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಗುತ್ತದೆ.

ಅನ್ನದಾನ, ಯಕ್ಷಗಾನ ಆಯೋಜನೆ!
ಈ ಬಾರಿ ಜಾತ್ರೆ ಸಲುವಾಗಿ ಕಟ್ಟೆ ಪೂಜೆಯ ಅಂಗವಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಸಂಭ್ರಮ ಮೇಳೈಸಿತ್ತು. ನಿತ್ಯ ಕೇಸು, ಬಂದೋಬಸ್ತ್ ಎಂದು ಬ್ಯುಸಿಯಾಗಿದ್ದ ಪೊಲೀಸರು ಜ.13 ಸೋಮವಾರ ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಧಾರ್ಮಿಕ ಪ್ರಕ್ರಿಯಲ್ಲಿ ತೊಡಗಿಸಿಕೊಂಡಿದ್ದರು. ದೇವರ ಪೂಜೆ, ಗಣಹೋಮ ಮೊದಲಾದ ಪೂಜಾ ಕೈಂಕರ್ಯಗಳು ಬೆಳಿಗ್ಗೆ ನಡೆದಿದ್ದು ಮಧ್ಯಾಹ್ನ ಮುನ್ನೂರಕ್ಕೂ ಅಧಿಕ ಮಂದಿಗೆ ಅನ್ನದಾನ ನಡೆಯಿತು. ಇನ್ನು ಕಟ್ಟೆಪೂಜೆ ನಿಮಿತ್ತ ಸೋಮವಾರ ರಾತ್ರಿ ಕಮಲಶಿಲೆ ಮೇಳದವರಿಂದ ಯಕ್ಷಗಾನ ಪ್ರದರ್ಶನವೂ ನಡೆಯಲಿದೆ.

ಪೊಲೀಸರೇ ಕೆಲಸ ಮಾಡಿದ್ರು…
ಇಡೀ ಠಾಣೆಯನ್ನು ಹೂ ಗಳಿಂದ ಅಲಂಕಾರ ಮಾಡಲಾಗಿತ್ತು. ಕಟ್ಟೆಯನ್ನು ಕೂಡ ತಳಿರು ತೋರಣ, ಹೂಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆನ ಪೂಜಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಅನ್ನದಾನ ವ್ಯವಸ್ಥೆಯಿತ್ತು. ಖುರ್ಚಿ ಟೇಬಲ್ ವ್ಯವಸ್ಥೆಯಿಂದ ಹಿಡಿದು ಭೋಜನದ ಬಳಿಕ ಎಲೆಯನ್ನು ಎತ್ತುವ ಕಾರ್ಯವನ್ನು ಕೂಡ ಪೊಲೀಸರೇ ಮಾಡಿ ಭಕ್ತಿ ಮೆರೆದರು. ಇನ್ನು ಒಂದು ವಿಶೇಷವೆಂದರೆ, ಅನ್ನಸಂತರ್ಪಣೆ, ಯಕ್ಷಗಾನ ಸಹಿತ ಎಲ್ಲಾ ಕಾರ್ಯಕ್ರಮಕ್ಕೂ ಪೊಲೀಸರು ಯಾವುದೇ ದೇಣಿಗೆಯನ್ನು ಸಂಗ್ರಹಿಸಿದೆ ತಮ್ಮ ಸ್ವಂತ ಖರ್ಚಿನಲ್ಲಿ ವ್ಯವಸ್ಥೆಯನ್ನು ಮಾಡಿರುವುದು.

ಭೇಷ್ ಎಂದ ನಾಗರಿಕರು…..
ಕಳೆದ ಕೆಲವು ವರ್ಷಗಳಿಂದ ಈ ಜಾತ್ರೆ ಸಂದರ್ಭ ಇಂತಹದ್ದೊಂದು ವಾಡಿಕೆ ನಡೆದುಕೊಂಡು ಬರುತ್ತಿದ್ದು ಈ ಬಾರಿ ವಿಶೇಷ ರೀತಿಯಾಗಿ ಮೂಡಿಬಂದಿದೆ. ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಈ ಬಾರಿ ಸುಸೂತ್ರ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಮಧ್ಯಾಹ್ನ ನಡೆದ ಅನ್ನ ಸಂಪರ್ಪಣೆಯಲ್ಲಿ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್., ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ, ಜಿ.ಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ತಾ.ಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಮೊದಲಾದವರು ಭಾಗಿಯಾಗಿದ್ದರು. ಈ ರೀತಿಯ ವ್ಯವಸ್ಥೆಯಿಂದ ಪೊಲೀಸರಿಗೂ ಮತ್ತು ಸಾರ್ವಜನಿಕರ ನಡುವೆ ಇರುವ ಅಂತರವು ಕಡಿಮೆಯಾಗಿ ಉತ್ತಮ ಜನಸಂಪರ್ಕ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ವೃದ್ಧಿಯಾಗಲಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.