ಕರಾವಳಿ

‘ಲೋಟ ಕೃಷಿ’ ಸಕ್ಸಸ್-ಉಪ್ಪು ನೀರಿನಿಂದ ಬರಡಾಗಿದ್ದ ಗದ್ದೆಯಲ್ಲಿ ಭತ್ತ ಬೆಳೆದ ರೈತ!

Pinterest LinkedIn Tumblr

ಕುಂದಾಪುರ: ಆ ಊರಿನ ಸಿಗಡಿ ಕೃಷಿ ನೂರಾರು ಎಕ್ರೆ ಫಲವತ್ತಾದ ಭತ್ತದ ಬಯಲು ಬರಡು ಮಾಡಿತ್ತು. ನಾಟಿ ಮಾಡಿದ ನೇಜಿ ಚಿಪ್ಪೊಡೆದು ಬೇರೂರುವ ಮೊದಲೇ ಕರಗಿ ಹೋಗುತ್ತಿದ್ದರಿಂದ ಕೃಷಿ ಸಹವಾಸವೇ ಬೇಡಾ ಎಂದು ಕೆಲ ರೈತರು ಕೃಷಿ ಮಾಡೋದು ಬಿಟ್ಟಿದ್ರು. ಭತ್ತದ ಗದ್ದೆ ಹಾಳು ಬೀಳುವುದ ನೋಡಲಾಗದೆ ಹೊಸ ಪ್ರಯೋಗಕ್ಕೆ ಮುಂದಾದ ರೈತರೊಬ್ಬರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಈ ಬಾರಿ ಪ್ರಾಯೋಗಿಕ ಮಾಡಿದ ಲೋಟ ಕೃಷಿ ಸಕ್ಸಸ್ ಆಗಿದ್ದು ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ಸಕ್ಸಸ್ ಆದ ಲೋಟ ಕೃಷಿ
ಕುಂದಾಪುರ ತಾಲೂಕು ಕಟ್‌ಬೇಲ್ತೂರು ಗ್ರಾಮ ಪ್ರಗತಿಪರ ಕೃಷಿಕ ವಿಶ್ವನಾಥ ಗಾಣಿಗ ತಮ್ಮ ಗದ್ದೆಯಲ್ಲಿ ಪ್ರಾಯೋಗಿಕವಾಗಿ ಮಾಡಿದ ಲೋಟ ಕೃಷಿ ಫಲಕೊಟ್ಟಿದೆ. ಸಾಮಾನ್ಯ ನಾಟಿ ಮಾಡಿದ ಗದ್ದೆಯಲ್ಲಿ ನೇಜಿ ಹನ್ನೆರಡರಿಂದ ಹದಿನೈದು ಚಿಪ್ಪೊಡೆದರೆ, ಲೋಟ ಕೃಷಿಯಲ್ಲಿ ಭತ್ತದ ನೇಜಿ ನಲವತ್ತೈದರಿಂದ ಐವತ್ತು ಚಿಪ್ಪುಡೆದಿದ್ದು ಭತ್ತದ ತೆನೆ ಕೂಡಾ ಸಮೃದ್ಧವಾಗಿದೆ. ಹರೆಗೋಡು ಉಪ್ಪುನೀರಿನ ಪ್ರಭಾವ ಎಷ್ಟಿದೆ ಎಂದರೆ ಕಣ್ಣು ಹಾಯಿಸಿದಷ್ಟು ದೂರವೂ ಭತ್ತದ ಕೃಷಿಯಿಂದ ಹಸಿರಾಗಿ ಕಂಗೊಳ್ಳಿಸುತ್ತಿದ್ದ ಬಯಲು ಉಪ್ಪು ನೀರಿಗೆ ಕರಟಿ ಬಿಳಿಚಿಕೊಂಡ ಹುಲ್ಲು, ಕರಗಿದ ಭತ್ತದ ಸಸಿ ಎಲ್ಲೆಲ್ಲೂ ಇಡೀ ಹಸಿರು ಬಯಲೇ ಬರಡು ಭೂಮಿಯಾಗಿ ಪರಿವರ್ತನೆ ಕಂಡಿದೆ. ಆದರೆ ವಿಶ್ವನಾಥ ಗಾಣಿಗ ಮಾಡಿದ ಲೋಟ ಕೃಷಿ ಗದ್ದೆ ಮಾತ್ರ ಹಚ್ಚಹಸಿರಾಗಿದೆ.

ವಿಶ್ವನಾಥ ಗಾಣಿಗ ಅವರಿಗೆ ಹರೆಗೋಡಿನಲ್ಲಿ ಎರಡು ಎಕ್ರೆ ಭತ್ತದ ಕೃಷಿ ಭೂಮಿಯಿದ್ದು, ಹಿಂದೆ ಎರಡು ಬೆಳೆ ಬೆಳೆಯುತ್ತಿದ್ದರು. ಕಳೆದ ಐದಾರು ವರ್ಷದಿಂದ ಸಿಗಡಿ ಕೆರೆಗಾಗಿ ತೋಡಲ್ಲಿ ಹರಿಸುವ ಉಪ್ಪು ನೀರು ಇವರ ಕೃಷಿ ಭೂಮಿ ಬರಡಾಗಿಸಿದ್ದು, ಭತ್ತದ ನಾಟಿ ಮಾಡಿ ಹದಿನೈದು ದಿನದಲ್ಲಿ ನೇಜಿ ಕೆಂಪಾಗಿ ಸತ್ತು ಹೋಗುತ್ತಿತ್ತು. ಹೇಗಾದರೂ ಭತ್ತದ ಗದ್ದೆ ಹಸಿರಾಗುಸವ ಪಣತೊಟ್ಟ ವಿಶ್ವನಾಥ ಕಂಡುಕೊಂಡ ಮಾರ್ಗ ಲೋಟಕೃಷಿ. ಸುಮಾರು ಒಂದು ಸಾವಿರ ಲೋಟ ವಿಕ್ರಯಸಿ, ನೇಜಿ ತಯಾರಿಸಿ ತಮ್ಮ ಗದ್ದೆಯಲ್ಲಿ ಲೋಟ ಸಹಿತ ನಾಟಿ ಮಾಡಿದ್ದು, ಇದರೊಟ್ಟಿಗೆ ನೇಜು ಕೈನಾಟಿ ಕೂಡಾ ಮಾಡಿದ್ದಾರೆ. ಲೋಟದಲ್ಲಿ ಅಲ್ಲದ ಕೈನಾಟಿ ಮಾಡಿದ ನೇಜಿ ನಲೆ ಮಟ್ಟದಿಂದ ಮೇಲಕ್ಕೆ ಬಾರದಿದ್ದರೂ ಲೋಟ ಕೃಷಿ ತಲೆ ಎತ್ತಿ ನಿಂತಿದೆ. ಒಟ್ಟಾರೆ ಲೋಟ ಕೃಷಿ ಪ್ರಯೋಗ ಫಲಕೊಟ್ಟಿದೆ.

ಸಿಗಡಿ ಕೆರೆ ಕೊಟ್ಟ ಸಮಸ್ಯೆ….
ಹರೆಗೋಡು ಭತ್ತದ ಕೃಷಿಗೆ ಸಿಗಡಿ ಕೆರೆ ಕಾರಣ ಎನ್ನೋದು ಅಕ್ಷರಶಹ ಸತ್ಯ. ಸಿಗಡಿ ಕೆರೆ ನಿಲುಗಡೆಗೆ ಭತ್ತದ ಕೃಷಿಕರು ಆಗ್ರಹಿಸಿದ್ದಾರೆ. ರಾಜಾಡಿ ಬಳಿ ಕಾಂಡ್ಲಾ ವನದ ಬಳಿ ಚಿಕ್ಕದೊಂದು ಕಿಂಡಿ ಆಣೆಕಟ್ಟಿನ ಮೂಲಕ ಬಯಲಿಗೆ ಉಪ್ಪುನೀರು ನುಗ್ಗದಂತೆ ಮಾಡಲಾಗಿತ್ತು. ಆದರೆ ಸಿಗಡಿ ಕೃಷಿಕರು ಉಪ್ಪುನೀರಿಗಾಗಿ ಕಿಂಡಿ ಆಣೆಕಟ್ಟು ದುರುಪಯೋಗ ಮಾಡಿಕೊಂಡು ಉಪ್ಪುನೀರು ಪಡೆಯಲು ತೋಡಲ್ಲಿ ಹರಿಸುವುದೇ ಇಷ್ಟೆಲ್ಲಾ ಸಮಸ್ಯೆಗೆ ಮೂಲಕ ಕಾರಣ. ಈ ಎಲ್ಲಾ ಸಂಗತಿಯನ್ನೊಳಗೊಂಡ ಸರಣಿ ವರದಿ ವಿಜಯವಾಣಿ ಪ್ರಕಟಿಸಿದ ನಂತರ ಅಂದು ಕುಂದಾಪುರ ಎಸಿ ಆಗಿದ್ದ ಡಾ.ಎಸ್.ಎಸ್.ಮಧುಕೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಕೃಷಿಕರ ಸಮಸ್ಯೆ ಪರಿಹಾರದ ಜೊತೆ ಸಿಗಡಿ ಕೃಷಿಕರು ಕಟ್ಟುನಿಟ್ಟಿನ ಕ್ರಮ ವಹಿಸಿ ಕೃಷಿ ಮಾಡುವಂತೆ ನೋಟಿಸ್ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು.ಸಿಗಡಿ ಕೃಷಿ ಮಾಲೀಕರ ವಿರುದ್ಧ ಏನು ಕ್ರಮ ತೆಗೆಕೊಂಡಿದ್ದಾರೆ ಎಂಬ ಚಿಕ್ಕ ಮಾಹಿತಿ ಕೂಡಾ ಇಲ್ಲ. ಎಸಿ ವರ್ಗಾವಣೆ ಆದರೂ ಪೈಲಿಗೆ ಸಹಿಹಾಕುವ ಮೂಲಕ ಬ್ರಷ್ಟಾಚಾರ ನಿಗ್ರಹದಳಕ್ಕೆ ಸಿಕ್ಕಿಬಿದ್ದಿದ್ದು, ಸಿಗಡಿ ಕೃಷಿಕರ ಲಾಬಿಗೆ ಎಸಿ ಮಣಿದಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಸಮಸ್ಯೆ ಪರಿಹಾರ ಮಾಡದಿದ್ದರೆ ಹರೆಗೋಡು ರೈತರು ತಾಲೂಕು ಕಚೇರಿ ಮುಂದೆ ಕೂರಬೇಕಾಗುತ್ತದೆ ಎಂಬ ಎಚ್ಚರಿಕೆ ಕೂಡಾ ನೀಡಿದ್ದಾರೆ.

(ಉಪ್ಪು ನೀರು ಗದ್ದೆಯಲ್ಲಿ ಮಾಡಿದ ಸಾಮಾನ್ಯ ನಾಟಿ ಮಾಡಿದ ಸಸಿಗಳ ಕೂರುತ್ತಿದ್ದು, ಮತ್ತೆ ಗದ್ದೆಯಲ್ಲಿ ಕರಗಿ ಹೋದ ನೇಜಿಗಳು)

ಏನಿದು ಲೋಟ ಕೃಷಿ?
ಪರಿಸರ ಪೂರಕ ಪೇಪರ್ ಲೋಟದ ತುಂಬು ಮಣ್ಣು ತುಂಬಿ, ಅದರಲ್ಲಿ ಐದರಿಂದ ಆರು ಭತ್ತದ ಬೀಜ ಹಾಕಿ ಮನೆ ಅಂಗಳದಲ್ಲಿ ಜೋಡಿಸಿಡಲಾಗುತ್ತದೆ. ಮಳೆ ಬಂದರೆ ಲೋಟದಲ್ಲಿರುವ ಮಣ್ಣು ನೆನೆದು ಭತ್ತದ ಬೀಜ ಸಸಿಯಾಗಿ ಹೊರ ಬರುತ್ತದೆ. ಕೊಡಪಾನದಲ್ಲಿ ನೀರು ತಂದು ಚುಮುಕಿಸುವ ಮೂಲಕವೂ ನೇಜಿ ಪಡೆಯಬಹುದು. ಭತ್ತದ ಚಿಪ್ಪೊಡೆದ 16 ರಿಂದ 18 ದಿನದಲ್ಲಿ ನಾಟಿ ಮಾಡಲಾಗುತ್ತದೆ. ಕೈ ನಾಟಿ ಮಾಡುವ ಹಾಗೆ ಗದ್ದೆ ಎರಡು ಬಾರಿ ಹೂಟಿ ಮಾಡಿ, ನಾಟಿದಿನ ಭೂಮಿಗೆ ಹಟ್ಟಿಗೊಬ್ಬರ ಹಾಕಿ ಮತ್ತೆ ಭೂಮಿ ಹದಮಾಡಲಾಗುತ್ತದೆ. ಹದಮಾಡಿದ ನಂತರ ಭತ್ತದ ನೇಜಿಯಿದ್ದ ಕಾಗದದ ಲೋಟ ಸಹಿತಿ ನಾಟಿ ಮಾಡಿದಂತೆ ಮಣ್ಣಲ್ಲಿ ನೇಜಿ ಮಾಡಲಾಗುತ್ತದೆ. ಮಣ್ಣಲ್ಲಿ ಕಾಗದದ ಲೋಟ ಕರಗುವಷ್ಟರಲ್ಲಿ ಭತ್ತ ಸಸಿ ಗಟ್ಟಿಯಾಗಿ ನಿಲ್ಲುತ್ತದೆ.

ಹರೆಗೋಡು ಬಯಲು ಎರೆಡೆರೆಡು ಭತ್ತದ ಬೆಳೆ ಸೇರಿದಂತೆ ಇತರೆ ಉಪಬೆಳೆ ಬೆಳೆಯುವ ಸಮೃದ್ಧ ಭೂಮಿಯಾಗಿದ್ದು, ಯಾವತ್ತು ಸಿಗಡಿ ಕೃಷಿ ಆರಂಭವಾಯಿತೋ ಅಂದಿನಿಂದ ಭತ್ತದ ಬಯಲು ಬರಡಾಗುತ್ತಾ ಬಂತು. ಕಳೆದ ನಾಲ್ಕೈದು ವರ್ಷದಿಂದ ಭತ್ತದ ಗದ್ದೆ ಪ್ರಮಾಣ ಕಡಿಮೆ ಆಗುತ್ತಾ ಬಂದು ಪ್ರಸಕ್ತ ವರ್ಷ ಹೆಜ್ಜಿನ ಎಲ್ಲಾ ಗದ್ದೆಗಳು ಹಡಿಲು ಬಿದ್ದಿದೆ. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಹೊಸ ಚಿಂತನೆಯೇ ಲೋಟ ಕೃಷಿ. ಪ್ರಯೋಗಿಕವಾಗಿ ಮಾಡಿದ್ದು, ಯಶಸ್ವೀಯಾಗಿದ್ದರಿಂದ ಮುಂದಿನ ಬೇಸಾಯಕ್ಕೆ ಲೋಟ ಕೃಷಿಯನ್ನೇ ಅವಲಂಭಿಸಲಾಗುತ್ತದೆ. ಮುಂದಿನ ಬಾರಿ ದೊಡ್ಡ ಪೇಪರ್ ಲೋಟಗಳ ಬಳಸಲಾಗುತ್ತದೆ. ಪ್ರಯೋಗಿಕ ಲೋಟ ಕೃಷಿಗೆ ಸಾವಯವ ಬಿಟ್ಟು ಬೇರೇನನ್ನೂ ಬಳಸಿಲ್ಲ.
-ವಿಶ್ವನಾಥ ಗಾಣಿಗ, ಲೋಟ ಭತ್ತದ ಕೃಷಿ ಮಾಡಿದ ಕೃಷಿಕ.

ತಲ್ಲೂರು ಸಮೀಪ ರಾಜಾಡಿ ಕಳವಿನ ಬಾಗಿಲು ಬಳಿ  4.40 ಕೋಟ ವೆಚ್ಚದಲ್ಲಿ ಉಪ್ಪುನೀರು ತಡೆ ಆಣೆಕಟ್ಟು ಮಂಜೂರಾಗಿದ್ದು, ಟೆಂಡರ್ ಕೂಡಾ ಆಗಿದೆ. ಮಳೆ ಇದ್ದಿದ್ದರಿಂದ ಕಾಮಗಾರಿ ವಿಳಂಬವಾಗಿದ್ದು, ಆಣೆಕಟ್ಟಿ ನಿರ್ಮಾಣದ ನಂತರ ಹರೆಗೋಡು ಕೃಷಿಕರ ಸಮಸ್ಯೆ ಪರಿಹಾರ ಆಗಲಿದೆ. ಸಂಸದ ಬಿ.ವೈ.ರಾಘವೇಂದ್ರ ಸಹಕಾರದಲ್ಲಿ 72.23 ಕೋಟಿ ವೆಚ್ಚದಲ್ಲಿ ಸೌಕೂರು ಏತನೀರಾವರಿಗೆ ಅ.9ರಂದು ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ವಾರಾಹಿ ಮೂಲಕ ಬೈಂದೂರು ವಿಭಾಗದಕ್ಕೆ ಕುಡಿಯುವ ನೀರಿನ ಸಲುವಾಗಿ 320 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ದವಾಗುತ್ತಿದೆ.
– ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕ, ಬೈಂದೂರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ-

‘ಲೋಟ ಕೃಷಿ’ ಮೂಲಕ ಬರಡು ಭೂಮಿಯಲ್ಲಿ ಭತ್ತ ಬೆಳೆಯಲು ಮುಂದಾದ ಛಲಗಾರ ಕೃಷಿಕ! (Video)

Comments are closed.