ಕರಾವಳಿ

ವೆನ್ಲಾಕ್ ಕಾರುಣ್ಯಕ್ಕೆ ಬಂಟರ ಸಂಘ ನೆರವು – 2ನೇ ಬಾರಿಗೆ ಒಂದು ತಿಂಗಳ ರಾತ್ರಿ ಊಟದ ವೆಚ್ಚ ಪಾವತಿಸಿದ ಜಾಗತಿಕ ಒಕ್ಕೂಟ

Pinterest LinkedIn Tumblr

ಮಂಗಳೂರು: ಎಂಫ್ರೆಂಡ್ಸ್ ಟ್ರಸ್ಟ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ಪ್ರತಿದಿನ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಒಂದು ತಿಂಗಳ ವೆಚ್ಚ 2.25 ಲಕ್ಷ ರೂ. ನೆರವು ನೀಡಿದೆ.

ನಗರದ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ಸೋಮವಾರ ವಿವಿಧ ಫಲಾನುಭವಿಗಳಿಗೆ ನೆರವು ನೀಡುವ ಸಮಾರಂಭದಲ್ಲಿ ಕಾರುಣ್ಯ ಯೋಜನೆಗೆ ನೆರವಿನ ಘೋಷಣಾ ಪತ್ರವನ್ನು ಎಂಫ್ರೆಂಡ್ಸ್ ಟ್ರಸ್ಟ್ನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಮತ್ತು ಟ್ರಸ್ಟಿ ಹಮೀದ್ ಅತ್ತೂರು ಅವರಿಗೆ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಸ್ತಾಂತರಿಸಿದರು.

ಒಕ್ಕೂಟವು ಬಂಟ ಸಮುದಾಯದ ಸಹಿತ ಇತರರಿಗೆ ನಿರಂತರ ನೆರವು ನೀಡುತ್ತಾ ಬಂದಿದೆ. ವೆನ್ಲಾಕ್ ಆಸ್ಪತ್ರೆಯ ಕಾರುಣ್ಯ ಯೋಜನೆಯು ಅತ್ಯುತ್ತಮ ಮಾನವೀಯ ಸೇವೆಯಾಗಿದೆ. ಇಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಹಸಿದವರ ಹೊಟ್ಟೆ ತಣಿಸುವ ಕಾರ್ಯ ನಡೆಸುತ್ತಿದೆ. ಈ ಯೋಜನೆಗೆ ಕಳೆದ ವರ್ಷದಂತೆ ಈ ವರ್ಷವೂ ಒಂದು ತಿಂಗಳ ವೆಚ್ಚ ನೀಡುತ್ತಿದ್ದೇವೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದರು.
ಎಂಫ್ರೆಂಡ್ಸ್ ಸುಮಾರು ಎರಡು ವರ್ಷಗಳಿಂದ ಕಾರುಣ್ಯ ಯೋಜನೆ ಮೂಲಕ ಕಷ್ಟದಲ್ಲಿರುವವರಿಗೆ ರಾತ್ರಿ ಊಟ ನೀಡುತ್ತಾ ಬಂದಿದೆ. ಬಂಟರ ಸಂಘಗಳ ಒಕ್ಕೂಟದ ನೆರವಿನಿಂದ ಯೋಜನೆಗೆ ಶಕ್ತಿ ಬಂದಿದೆ ಮತ್ತು ಇದು ಇತರರಿಗೆ ಪ್ರೇರಣೆ ನೀಡಿದೆ ಎಂದು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮುಹಮ್ಮದ್ ಆರಿಫ್ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿ ವಿರಾರ್ ಶಂಕರ್ ಶೆಟ್ಟಿ ಮುಂಬಯಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ಉಪಸ್ಥಿತರಿದ್ದರು.

Comments are closed.