ಕುಂದಾಪುರ: ಆ ಊರಿನ ರೈತರು ಭತ್ತದ ಕೃಷಿ ಮಾಡೋದು ಬಿಟ್ಟಿದ್ದು ನೂರಾರು ಎಕರೆ ಕೃಷಿಭೂಮಿ ಹಡಿಲು ಬಿದ್ದಿದೆ. ಅಷ್ಟಕ್ಕೂ ಆ ಊರಿನ ಕೃಷಿಕರಿಗೆ ವಿಲನ್ ಆಗಿದ್ದು ಆ ಊರಿನಲ್ಲಿರುವ ಸಿಗಡಿ ಕೆರೆ. ಆದರೂ ಛಲಬಿಡದ ಆ ಊರಿನ ಕೃಷಿಕ “ಲೋಟಕೃಷಿ” ಎನ್ನುವ ಹೊಸ ಪ್ರಯೋಗದೊಂದಿಗೆ ಭತ್ತ ನಾಟಿ ಮಾಡಿದ್ದು ಉತ್ತಮ ಪಸಲಿನ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ ಆ ಊರು ಯಾವುದು? ಏನಿದು ಲೋಟ ಕೃಷಿ ಅನ್ನೋದಕ್ಕೆ ಈ ವರದಿ ನೋಡಿ.
ಸಿಗಡಿ ಕೆರೆಯಿಂದ ಪ್ರಾಬ್ಲಮ್ಮ್!
ಕಣ್ಣು ಹಾಯಿಸಿದಷ್ಟು ದೂರವೂ ಭತ್ತದ ಕೃಷಿಯಿಂದ ಹಸಿರಾಗಿ ಕಂಗೊಳ್ಳಿಸುತ್ತಿದ್ದ ಬಯಲು ಇದೀಗ ಬರಡು ಭೂಮಿಯಾಗಿದೆ. ಅಲ್ಲೊಂದು ಇಲ್ಲೊಂದು ಗದ್ದೆಯಲ್ಲಿ ಭತ್ತದ ಕೃಷಿ ಕಂಡರೂ ನೇಜಿ ಕೆಂಬಣ್ಣಕ್ಕೆ ತಿರುಗಿದೆ. ಉಪ್ಪು ನೀರಿನ ಸಮಸ್ಯೆಯಿಂದ ಇಲ್ಲಿನ ಕೃಷಿಕರು ಕೃಷಿ ಕಾರ್ಯದಿಂದ ವಿಮುಖರಾಗುತ್ತಿದ್ದ ಈ ಹೊತ್ತಲ್ಲಿ ಇಲ್ಲೊಬ್ಬ ಕೃಷಿಕ ನೇಜಿಯನ್ನು ಉಪ್ಪು ನೀರಿನಿಂದ ರಕ್ಷಿಸಿಕೊಳ್ಳಲು ಹೊಸ ಪ್ರಯೋಗವೊಂದನ್ನು ಕಂಡುಕೊಂಡಿದ್ದಾರೆ. ಕುಂದಾಪುರ ತಾಲೂಕು, ಕಟ್ಬೇಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ಹರೆಗೋಡು ಸಮೃದ್ಧ ಭತ್ತದ ಕೃಷಿ ಭೂಮಿ ಇದೀಗ ಹಡಿಲು ಬಿದ್ದಿದೆ. ಹಲವು ಕೃಷಿಕರು ಕೃಷಿಗೆ ವಿದಾಯ ಹೇಳಿದರೆ, ಮತ್ತೆ ಕೆಲ ಉತ್ಸಾಹಿ ರೈತರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಛಲಗಾರ ಕೃಷಿಕ!
ಬೇಸಿಗೆಯಲ್ಲಿ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ ಬರಡಾದ ಭೂಮಿಯಲ್ಲಿ ಮತ್ತೆ ಹಸಿರು ನಳನಳಿಸುವಂತೆ ಮಾಡುವ ಪ್ರಾಯೋಗಿಕ ಪ್ರಯತ್ನಕ್ಕೆ ಹರೆಗೋಡು ಕೃಷಿಕ ವಿಶ್ವನಾಥ ಗಾಣಿಗ ಮುಂದಾಗಿದ್ದಾರೆ. ಇದು ಫಲಪ್ರದವಾದರೆ ಉಪ್ಪುನೀರಿಂದ ಬರಡಾಗುತ್ತಿರುವ ಗದ್ದೆಯಲ್ಲೂ ಮತ್ತೆ ಹಸಿರನ್ನು ಕಾಣಬಹುದಾಗಿದೆ. ವಿಶ್ವನಾಥ ಗಾಣಿಗ ಅವರಿಗೆ ಹರೆಗೋಡುವಿನಲ್ಲಿ ಎರಡು ಎಕ್ರೆ ಕೃಷಿ ಭೂಮಿಯಿದ್ದು, ಹಿಂದೆ ಎರಡು ಬೆಳೆ ಬೆಳಯುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಸಿಗಡಿ ಕೆರೆಗಾಗಿ ತೋಡಲ್ಲಿ ಹರಿಸುವ ಉಪ್ಪು ನೀರು ಇವರ ಕೃಷಿ ಭೂಮಿ ಬರಡಾಗಿಸಿದ್ದು, ಭತ್ತದ ನಾಟಿ ಮಾಡಿ ಹದಿನೈದು ದಿನದಲ್ಲಿ ನೇಜಿ ಕೆಂಪಾಗಿ ಸತ್ತು ಹೋಗುತ್ತಿತ್ತು. ಹೇಗಾದರೂ ಭತ್ತದ ಗದ್ದೆ ಹಸಿರಾಗಿಸವ ಪಣತೊಟ್ಟ ಕೃಷಿಕ ವಿಶ್ವನಾಥ ಕಂಡುಕೊಂಡ ಮಾರ್ಗ ಲೋಟ ಕೃಷಿ!. ಕೃಷಿಕ ವಿಶ್ವನಾಥ್ ಪ್ರಾಯೋಗಿಕವಾಗಿ ಒಂದು ಲೋಟದಲ್ಲಿ ನೇಜಿ ತಯಾರಿಸಿ, ಉಪ್ಪುನೀರಿರುವ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ನೇಜಿ ಚಿಗುರೊಡೆದಿದ್ದರಿಂದ ಮತ್ತಷ್ಟು ನೇಜಿ ತಯಾರಿಸಿ ನಾಟಿ ಮಾಡುತ್ತಿದ್ದಾರೆ. ಒಟ್ಟಾರೆ ಈ ವಿಧಾನ ಸೆಕ್ಸಸ್ ಆದರೆ ಭತ್ತದ ಕೃಷಿಯಲ್ಲಿ ಮತ್ತೊಂದು ಹೊಸಾ ಹೆಜ್ಜೆ ಇಟ್ಟಂತೆ ಆಗುತ್ತದೆ.
ಏನಿದು ಲೋಟ ಕೃಷಿ?
ಪರಿಸರ ಪೂರಕ ಪೇಪರ್ ಲೋಟದ ಅರ್ಧದಷ್ಟು ಗೊಬ್ಬರ ಮಿಶ್ರಿತ ಮಣ್ಣು ತುಂಬಿ ಅದರ ಮೇಲೆ ಐದರಿಂದ ಆರು ಭತ್ತದ ಬೀಜ ಹಾಕಿ ಮತ್ತೆ ಮಣ್ಣು ಹಾಕಿ ಲೋಟ ಸಮತಟ್ಟು ಮಾಡಿ ಮನೆ ಅಂಗಳದಲ್ಲಿ ಜೋಡಿಸಿಡಲಾಗುತ್ತದೆ. ಮಳೆ ಬಂದರೆ ಲೋಟದಲ್ಲಿರುವ ಮಣ್ಣು ನೆನೆದು ಬೀಜಕ್ಕೆ ಬೇಕಾಗುವ ಪೋಷಕಾಂಶ ಮಣ್ಣಿನಿಂದ ಪಡೆದು ಭತ್ತದ ಬೀಜ ಸಸಿಯಾಗಿ ಹೊರ ಬರುತ್ತದೆ. ಮಳೆ ಬಾರದಿದ್ದರೆ ಕೊಡಪಾನದಲ್ಲಿ ನೀರು ತಂದು ಚುಮುಕಿಸುವ ಮೂಲಕ ಲೋಟದಲ್ಲಿರುವ ಮಣ್ಣು ನೆನೆಸುವ ಮೂಲಕವೂ ನೇಜಿ ಪಡೆಯಬಹುದು. ಭತ್ತದ ಚಿಪ್ಪೊಡೆದ 16 ರಿಂದ 18 ದಿನದೊಳಗೆ ನಾಟಿ ಮಾಡಲಾಗುತ್ತದೆ. ಕೈ ನಾಟಿ ಮಾಡುವ ಹಾಗೆ ಗದ್ದೆಯನ್ನು ಎರಡು ಬಾರಿ ಉಳುಮೆ ಮಾಡಿ, ನಾಟಿದಿನ ಭೂಮಿಗೆ ಗೊಬ್ಬರ ಹಾಕಿ ಮತ್ತೆ ಭೂಮಿ ಹದಮಾಡಲಾಗುತ್ತದೆ. ಹೀಗೆ ಹದಮಾಡಿದ ನಂತರ ಭತ್ತದ ನೇಜಿಯಿದ್ದ ಕಾಗದದ ಲೋಟ ಸಹಿತಿ ನಾಟಿ ಮಾಡಿದಂತೆ ಮಣ್ಣಲ್ಲಿ ನೇಜಿ ಮಾಡಲಾಗುತ್ತದೆ. ಗದ್ದೆಯಲ್ಲಿ ಮಣ್ಣು ಉಪ್ಪಾಗಿದ್ದರೂ ಲೊಟದ ಮಣ್ಣಲ್ಲಿ ನೇಜಿ ಇರುವುದರಿಂದ ಉಪ್ಪುಮಣ್ಣಿಗೆ ಭತ್ತದ ನೇಜಿ ಬೇರು ತಾಗದಂತೆ ನೋಡಿಕೊಳ್ಳುತ್ತದೆ. ಮಣ್ಣ ಮತ್ತು ನೀರಲ್ಲಿ ಕಾಗದದ ಲೋಟ ಕರುವಷ್ಟರಲ್ಲಿ ಭತ್ತ ಸಸಿ ಗಟ್ಟಿಯಾಗಿ ನಿಲ್ಲುತ್ತದೆ. ಒಂದೇ ಗದ್ದೆಯಲ್ಲಿ ಅರ್ಧ ಕೈನಾಟಿ ಮಾಡಿದ್ದು, ಭತ್ತದ ನೇಜಿ ಕರಗಿ ಹೋಗುತ್ತಿದ್ದರೆ, ಲೋಟದಲ್ಲಿ ನಾಟಿ ಮಾಡಿದ ನೇಜಿ ಚಿಪ್ಪೊಡೆದು ಹಸಿರಾಗಿ ಇದೆ. ಪ್ರಾಯೋಗಿಕವಾಗಿ ಈ ರೀತಿ ಮಾಡಿದ್ದು, ಲೋಟದಲ್ಲಿರುವ ನೇಜಿ ಬೆಳವಣಿಗೆ ಕಂಡು ಮತ್ತಷ್ಟು ಗದ್ದೆಗೆ ಈ ಹೊಸ ಪದ್ದತಿಯಲ್ಲಿ ನಾಟಿ ಮಾಡುವ ಚಿಂತನೆ ಕೂಡಾ ನಡೆಸಿದ್ದಾರೆ.
ಹರೆಗೋಡು ಭತ್ತದ ಕೃಷಿಗೆ ಸಿಗಡಿ ಕೆರೆ ಕಾರಣ ಎನ್ನೋದು ಅಕ್ಷರಶಃ ಸತ್ಯ. ಸಿಗಡಿ ಕೆರೆಯನ್ನು ಬಂದ್ ಮಾಡಿ ಇಲ್ಲವೇ ಗದ್ದೆಯಂಚಿಗೆ ಬದು ನಿರ್ಮಿಸಿಕೊಡಿ ಎಂಬ ಇಲ್ಲಿನ ಕೃಷಿಕರ ಕೂಗು ಸಂಬಂಧಪಟ್ಟ ಸ್ಥಳಿಯಾಡಳಿತಕ್ಕಾಗಲಿ, ಶಾಸಕರಿಗಾಗಲಿ ಕೇಳಿಸದಿರುವುದೇ ದುರಂತ. ಒಟ್ಟಿನಲ್ಲಿ ಉಪ್ಪು ನೀರು ಗದ್ದೆಗಳಿಗೆ ನುಗ್ಗುತ್ತಿದ್ದರೂ ಗದ್ದೆಗಳನ್ನ ಹಡಲು ಬಿಡದೇ ವಿಭಿನ್ನ ಪ್ರಯೋಗದ ಮೂಲಕ ಹೊಸದೊಂದು ಪ್ರಯೋಗಕ್ಕೆ ಮುನ್ನುಡಿ ಇಟ್ಟ ಕೃಷಿಕ ವಿಶ್ವನಾಥ್ ಗಾಣಿಗರ ಕೃಷಿಯ ಸೆಳೆತ ಮೆಚ್ಚಲೇಬೇಕು. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಅನ್ನೋದು ನಮ್ಮ ಆಶಯ.
(ವರದಿ- ಯೋಗೀಶ್ ಕುಂಭಾಸಿ)
Comments are closed.