ಕರಾವಳಿ

ಶಾಸಕ ಕಾಮಾತ್ ನೆರವು :ಕುವೈಟ್‌ ಸಂಕಷ್ಟದಿಂದ ಮುಕ್ತಿ – ಮಂಗಳೂರು ತಲುಪಿದ ಕರಾವಳಿಯ19 ಸಂತ್ರಸ್ತ ಯುವಕರು

Pinterest LinkedIn Tumblr

ಮಂಗಳೂರು, ಜುಲೈ.19: ಕುವೈಟ್‌ ನಲ್ಲಿ ಉದ್ಯೋಗಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ 58 ಕಾರ್ಮಿಕರ ಪೈಕಿ ಕರಾವಳಿಯ 19 ಸಂತ್ರಸ್ತ ಯುವಕರು ಬುಧವಾರ ರಾತ್ರಿ ಪ್ರಯಾಣ ಬೆಳೆಸಿದ್ದು, ಇಂದು ಮುಂಜಾನೆ 7 ಗಂಟೆಗೆ ಮುಂಬೈನಿಂದ ಬಸ್ಸ್ ಮೂಲಕ ಮಂಗಳೂರು ತಲುಪಿದ್ದಾರೆ.

ಮಂಗಳೂರಿನಲ್ಲಿ ಸ್ವಾಗತ

ಮುಂಬೈನಿಂದ ಬಸ್ಸ್ ಮೂಲಕ ಆಗಮಿಸಿ ನಗರದ ಪಂಪ್‌ವೆಲ್‌ನಲ್ಲಿ ಬಂದಿಳಿದ 19 ಮಂದಿ ಯುವಕರು ದ.ಕ.ಜಿಲ್ಲಾ ಬಿಜೆಪಿಯ ಹಿರಿಯ ಮುಖಂಡ ರವಿಶಂಕರ್ ಮಿಜಾರ್, ನಾಗರೀಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಹನುಮಂತ ಕಾಮಾತ್, ನಮೊ ಬ್ರಿಗೇಡ್ ಮುಂಖಂಡ ನರೇಶ್ ಶೆಣೈ ಸ್ವಾಗತಿಸಿದರು.

ಭಾರತದಿಂದ ಕುವೈಟ್‌ ನಲ್ಲಿ ಉದ್ಯೋಗಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ 58 ಕಾರ್ಮಿಕರ ಪೈಕಿ ಪ್ರಥಮ ಹಂತದಲ್ಲಿ ಸ್ವದೇಶಕ್ಕೆ ಇಬ್ಬರು ಆಗಮಿಸಿದ್ದು, ದ್ವೀತಿಯ ಹಂತದಲ್ಲಿ ಆಂಧ್ರದ 15 ಮಂದಿ ಭಾರತೀಯರು ವಾಪಸಾಗಿದ್ದರು. ಈಗ ಮೂರನೇಯ ತಂಡದಲ್ಲಿ ಕರಾವಳಿಯ 19 ಮಂದಿ ಕುವೈತ್‌ನಿಂದ ಮಂಗಳೂರು ತಲುಪಿದ್ದಾರೆ. ಇನ್ನುಳಿದವರು ಸಂತ್ರಸ್ತರು ವಿವಿಧ ಹಂತಗಳಲ್ಲಿ ತಾಯ್ನಾಡಿಗೆ ವಾಪಸಾಗಲಿದ್ದಾರೆ. ಆದರೆ ಜಿಪಿ ಪತ್ರ ಹಾಗೂ ಟಿಕೆಟ್ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ಮತ್ತೆ 15 ಮಂದಿಯ ಬಿಡುಗಡೆ ಬಾಕಿಯಾಗಿದೆ.

ಟಿಕೆಟ್‌ಗೆ ಹಣ ಭರಿಸಿದ ಶಾಸಕ ಕಾಮಾತ್ :

ಕುವೈತ್‌ನ ವಿಮಾನ ನಿಲ್ದಾಣದಿಂದ ಜು.17ರಂದು ರಾತ್ರಿ ಪ್ರಯಾಣ ಬೆಳೆಸಿ ಇದೀಗ ಮಂಗಳೂರು ತಲುಪಿದ ಕರಾವಳಿ ಮೂಲದ 19 ಕರಾವಳಿಯ ಸಂತ್ರಸ್ತರಿಗೆ ಮಂಗಳೂರು ದಕ್ಷಿಣ ವಿಧಾನಸಭೆ ಶಾಸಕ ವೇದವ್ಯಾಸ ಕಾಮತ್ ಟಿಕೆಟ್‌ಗೆ ಹಣ ಭರಿಸಿದ್ದಾರೆ. ಅಲ್ಲದೆ, ಗುರುವಾರ ಬೆಳಗ್ಗೆ ಮುಂಬೈಗೆ ತಲುಪಿರುವ ಸಂತ್ರಸ್ತರನ್ನು ಮಂಗಳೂರಿಗೆ ಕರೆತರಲು ‘ಕೆನರಾ ಪಿಂಟೊ’ ಬಸ್‌ನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಕುವೈತ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುಗೆ 

ಕುವೈತ್‌ನಲ್ಲಿ ಸಂಕಷ್ಟಕ್ಕೀಡಾಗಿ ಭಾರತಕ್ಕೆ ಪ್ರಯಾಣ ಆರಂಭಿಸಿದ ಕರಾವಳಿಯ 19 ಮಂದಿಗೆ ಕುವೈತ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಅನಿವಾಸಿ ಭಾರತೀಯರು ಬೀಳ್ಕೊಟ್ಟರು. ಈ ಸಂದರ್ಭ ಭಾರತೀಯ ಪ್ರವಾಸಿ ಪರಿಷತ್‌ನ ರಾಜ್ ಭಂಡಾರಿ, ಅನಿವಾಸಿ ಭಾರತೀಯ ಇಂಜಿನಿಯರ್ ಮಂಜೇಶ್ವರ ಮೋಹನ್‌ದಾಸ್ ಕಾಮತ್, ಮಾಧವ ನಾಯ್ಕೊ, ವಿಜಯ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

Comments are closed.