ಕರಾವಳಿ

ರಂಗುರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾಪುರದ ಕೊಂಕಣ ಖಾರ್ವಿ ಸಮಾಜ (Video)

Pinterest LinkedIn Tumblr

ಕುಂದಾಪುರ: ನಾಡಿನೆಲ್ಲೆಡೆ ಈಗ ಹೋಳಿಹಬ್ಬದ ಗೌಜು. ಅಂತೆಯೇ ಕುಂದಾಪುರ ತಾಲೂಕಿನಲ್ಲಿ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವಾರಗಳ ಕಾಲ ವೈಶಿಷ್ಟ್ಯ ಪೂರ್ವಕವಾಗಿ ಆಚರಿಸುತ್ತಾರೆ. ಇವರು ಆಚರಿಸುವ ಹೋಳಿಯಲ್ಲಿ ಧಾರ್ಮಿಕತೆ, ಸಾಂಸ್ಕ್ರತಿಕದ ಜೊತೆಗೆ ಮನೋರಂಜನೆಯೂ ಇದೆ. ಈ ಹಬ್ಬದ ಒಂದು ಝಲಕ್ ಇಲ್ಲಿದೆ.

ಕುಂದಾಪುರ ಪೇಟೆಯಲ್ಲಿ ವಾರಗಳಿಂದಲೂ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕುಂದಾಪುರದ ಖಾರ್ವಿ ಸಮಾಜದವರು ಆಚರಿಸುವ ಹೋಳಿಹಬ್ಬವು ಮಾರ್ಚ್ 17 ರಿಂದ ಆರಂಭಗೊಂಡು ಆರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆದವು. ಹೋಳಿ ಹಬ್ಬದ ಕೊನೆಯ ದಿನವಾದ ಶುಕ್ರವಾರ ಓಕುಳಿ ಹಾಗೂ ಪುರ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನದಿಂದ ಸಾಗಿಬಂದ ಮೆರವಣಿಗೆ ಪೇಟೆಯಲ್ಲಿ ಸಂಚರಿಸಿ ಬಳಿಕ ಪುನಃ ದೇವಸ್ಥಾನದ ಬಳಿ ತೆರಳಿ ಸಮಾಪನಗೊಂಡಿತು.

 

ಈ ಬೃಹತ್ ಮೆರವಣಿಗೆಯಲ್ಲಿ ಬಣ್ಣಗಳ ಎರಚಾಟ, ಕುಣಿತ, ಗಾನಬಜಾನ ಕುಂದಾಪುರ ಪೇಟೆಯಲ್ಲಿ ಕಂಡು ಬಂದಿತು. ಯುವಕ-ಯುವತಿಯರು, ಹಿರಿಯರು ಮಕ್ಕಳು ಎಂಬ ಭೇದ ಭಾವಗಳಿಲ್ಲದೇ ಪರಸ್ಪರ ಬಣ್ಣ ಹಚ್ಚಿಕೊಂಡು ಡಿಜೇ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸಂಪೂರ್ಣ ಹೋಳಿ ಮೆರವಣಿಗೆಯಲ್ಲಿ ಒಂದಷ್ಟು ಮಂದಿ ವಿದೇಶಿಗರು ಪಾಲ್ಗೊಂಡರು. ಯುವ ಜನಾಂಗವನ್ನು ಆಕರ್ಷಿಸುವ ನಿಟ್ಟಿನಲ್ಲಿ ಡ್ರೆಸ್ ಕೋಡ್ ಸ್ಪರ್ಧೆ ಆಯೋಜಿಸಲಾಗಿತ್ತು. ಗುಂಪುಗಳನ್ನು ಮಾಡಿಕೊಂಡ ಯುವಕ ಯುವತಿಯರು ತಮ್ಮದೇ ವಿಶಿಷ್ಟ ಧಿರಿಸಿನ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದು ನೋಡುಗರ ಗಮನಸೆಳೆದರು.

ಖಾರ್ವಿಯರ ಹೋಳಿ ಹಬ್ಬಕ್ಕೆ ಹಲವು ವರ್ಷಗಳ ಇತಿಹಾಸ:
ಕುಂದಾಪುರದಲ್ಲಿ ಕೊಂಕಣ ಖಾರ್ವಿ ಸಮಾಜದವರು ಆಚರಿಸುವ ಹೋಳಿ ಹಬ್ಬಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಹೋಳಿ ಹಬ್ಬವನ್ನು ಈಶ್ವರನ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಖಾರ್ವಿ ಸಮಾಜದವರು ಆಚರಿಸುವ ಅತೀ ದೊಡ್ಡ ಹಾಗೂ ಪವಿತ್ರವಾದ ಹಬ್ಬ ಹೋಳಿಹಬ್ಬವಾಗಿದೆ. ಪ್ರಥಮ ದಿನದಂದು ಹೋಳಿ ಮನೆಯೆಂಬ ಆಚರಣೆಯೊಂದಿಗೆ ನಾಲ್ಕು ದಿನಗಳ ಕಾಲ ಗಡ್ಡೆ ಕಾರ್ಯಕ್ರಮ ನಡೆಯುತ್ತೆ. ಐದನೇ ದಿನ ಹೋಳಿ ಕಾಮದಹನ ನಡೆದರೆ ಕೊನೆಯ ದಿನ ಓಕುಳಿ ಹಾಗೂ ಪುರಮೆರವಣಿಗೆ ಸಾಂಪ್ರದಾಯಬದ್ಧವಾಗಿ ನಡೆಯುತ್ತೆ. ವರ್ಷದ ಎಲ್ಲಾ ದೋಷಗಳು ಈ ಹೋಳಿ ಹಬ್ಬದ ಮೂಲಕ ನಿವಾರಣೆಯಾಗುತ್ತೆ, ಸಮಾಜವು ಇದರಿಂದ ಅಭಿವ್ರದ್ಧಿಯಾಗುತ್ತೆ ಎಂಬ ನಂಬಿಕೆ ಖಾರ್ವಿ ಸಮಾಜದವರದ್ದು. ಪ್ರೀತಿ, ವಿಶ್ವಾಸ ಹಾಗೂ ವಿಶ್ವಶಾಂತಿಗಾಗಿ ಈ ಹಬ್ಬವನ್ನು ಆಚರಿಸುತ್ತಿದ್ದು ಸಮಾಜಬಾಂಧವರು ಮಾತ್ರವಲ್ಲದೇ ಇತರೇ ಸಮಾಜದ ಜನರು ಭಾಗವಹಿಸುವುದು ಇಲ್ಲಿನ ವಿಶೇಷ.

ಒಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೊಂಕಣ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವರ್ಷಂಪ್ರತಿ ಅದ್ಧೂರಿಯಾಗಿ ಆಚರಿಸುತ್ತಿದ್ದು ಧಾರ್ಮಿಕತೆ ಜೊತೆ ಮನೋರಂಜನೆಗೂ ಒತ್ತು ನೀಡಿದ್ದು ವಿಶೇಷವಾಗಿದೆ.

ಮತದಾನ ಜಾಗೃತಿ ಸಮವಸ್ತ್ರ:
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಲ್ಲಿನ ಹೋಳಿ ಮೆರವಣಿಗಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿತ್ತು. ಆದರೆ ಖಾರ್ವಿ ಸಮುದಾಯ ಅನುಮತಿ ನಿರಾಕರಿಸಿದ ಬಗ್ಗೆ ಹೋರಾಟಕ್ಕಿಳಿದಿದ್ದರಿಂದ ಚುನಾವಣಾ ಆಯೋಗ ಮತ್ತು ಕುಂದಾಪುರ ಪೊಲೀಸ್ ಇಲಾಖೆ ಕೆಲವು ನಿಭಂದನೆಗಳನ್ನು ಹೇರಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದರು. ಮೆರವಣಿಗೆಯಲ್ಲಿ ಯುವಕರ ತಂಡವೊಂದು ವಿಶಿಷ್ಟ ರೀತಿಯಲ್ಲಿ ಗಮನಸೆಳೆದಿದ್ದು, ಮತದಾನ ಜಾಗೃತಿ ಮೂಡಿಸುವ ಬರಹಗಳುಳ್ಳ ಸಮವಸ್ತೃ ಧರಿಸಿ ಸಮಾಮಾಜಿಕ ಪ್ರಜ್ಞೆ ಮೆರೆದರು.

ನಮ್ಮ ದೇಶದಲ್ಲೂ ಈ ರೀತಿಯ ಹಬ್ಬಗಳು ನಡೆಯುತ್ತೆ. ಆದರೆ ಅಲ್ಲಿ ಯುವತಿಯರು ಮಾಸ್ಕ್ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇಲ್ಲಿನ ಆಚರಣೆ ಕಂಡು ನಿಜಕ್ಕೂ ಖುಷಿಯಾಗಿದೆ. ಯುವಕ, ಯುವತಿಯರೆನ್ನದೇ ಯಾವುದೇ ಭೇದ-ಭಾವವಿಲ್ಲದೇ ಎಲ್ಲರೂ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಖಂಡಿತವಾಗಿಯೂ ನನಗೆ ಇದೊಂದು ಅದ್ಭುತ ಅನುಭವ.
-ಗ್ಲಿಂಡಾ, ಇಟೆಲಿ ಯುವತಿ

ಆರು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಕ್ಕೆ ಎಲ್ಲರೂ ಕೈಜೋಡಿಸಿದ್ದಾರೆ. ಪರವೂರಿನಲ್ಲಿ ಉದ್ಯೋಗದಲ್ಲಿರುವ ಎಲ್ಲರೂ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಬರುತ್ತಾರೆ. ನೀತಿ ಸಂಹಿತೆಯ ನಡುವೆಯೂ ಮೆರವಣಿಗೆಗೆ ಅವಕಾಶ ಕಲ್ಪಿಸಿ ಪೊಲೀಸ್ ಇಲಾಖೆಗೆ ಧನ್ಯವಾದ.
-ಪ್ರಕಾಶ್ ಖಾರ್ವಿ, ಖಾರ್ವಿ ಸಮಾಜದ ಮುಖಂಡರು

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.