ಕರ್ನಾಟಕ

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಪ್ರಕಾಶ್ ರೈ

Pinterest LinkedIn Tumblr


ಬೆಂಗಳೂರು: ನಟ-ನಿರ್ದೇಶಕ-ನಿರ್ಮಾಪಕ ಪ್ರಕಾಶ್ ರಾಜ್ ಅವರು ಅಪಾರ ಜನಸ್ತೋಮದ ಮಧ್ಯೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಕಾಶ್ ರೈ, ತಮ್ಮಿಂದ ಕಾಂಗ್ರೆಸ್​ನ ವೋಟು ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆಂಬ ಅಭಿಪ್ರಾಯವನ್ನ ತಳ್ಳಿಹಾಕಿದರು.

ಇದು ಯಾರಪ್ಪನ ಕೋಟೆ? ಇದು ಪ್ರಜೆಗಳ ಕೋಟೆ. ಯಾರು ಯಾರ ವೋಟನ್ನೂ ಡಿವೈಡ್ ಮಾಡಲು ಆಗಲ್ಲ. ಕಾಂಗ್ರೆಸ್ ಇಲ್ಲಿ ಮೊದಲು ಗೆಲ್ಲಲಿ. ಗೆದ್ದವರು ಹೇಳಬೇಕಾಗಿರುವ ಮಾತು ಇದು ಎಂದು ಕಾಂಗ್ರೆಸ್ ವಿರುದ್ಧವೇ ಪ್ರಕಾಶ್ ರಾಜ್ ಕಿಡಿಕಾರಿದರು. ಇದು ನನ್ನ ಕೋಟೆ ಎಂಬ ಅಹಂಕಾರ ಯಾರಲ್ಲೂ ಇರಬಾರದು. ಇಲ್ಲಿ ಗೆಲುವು ಸೋಲಿನ ಪ್ರಶ್ನೆ ಬರುವುದಿಲ್ಲ. ಜನರು ಆರಿಸಿ ಕಳುಹಿಸುತ್ತಾರೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇದೆ. ಸಂಸದರು ಏನೇನು ಕೆಲಸ ಮಾಡಿದ್ಧಾರೆ ಎಂಬುದನ್ನು ಜನರು ನೋಡಿ ತೀರ್ಮಾನಿಸುತ್ತಾರೆ ಎಂದು ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

ತಾನು ಹುಟ್ಟಿದ್ದು, ಬಾಲ್ಯ ಕಳೆದದ್ದು, ಓದಿದ್ದು, ರಂಗಭೂಮಿ, ಸಿನಿಮಾ ಪ್ರಾರಂಭ ಎಲ್ಲವೂ ಇಲ್ಲಿಯೇ ಆದ್ದರಿಂದ ತಾನು ಈ ಕ್ಷೇತ್ರವನ್ನು ಆರಿಸಿಕೊಂಡಿದ್ದೇನೆ. ಜನರು ಪ್ರಕಾಶ್ ರಾಜ್ ಅವರನ್ನು ಬರೀ ನಟನಾಗಿ ನೋಡಿಲ್ಲ. ಸಮಾಜಕ್ಕೆ ಸಮಸ್ಯೆ ಬಂದಾಗ ಎದುರಿಸುವುದನ್ನು ನೋಡಿದ್ದಾರೆ, ತನ್ನ ಧೈರ್ಯ ನೋಡಿದ್ಧಾರೆ. ತಾನು ಹಳ್ಳಿಗಳು, ಶಾಲೆಗಳನ್ನ ದತ್ತು ತೆಗೆದುಕೊಂಡಿರೋದನ್ನು, ಬರಹಗಾರನಾಗಿರೋದನ್ನ, ರಾಜಕೀಯ ವಿಚಾರಗಳನ್ನ ಮಾತನಾಡೋದನ್ನ ಜನರು ನೋಡಿದ್ದಾರೆ. ನನ್ನ ವ್ಯಕ್ತಿತ್ವವನ್ನು ಜನರು ಅರಿತುಕೊಳ್ಳುತ್ತಾರೆಂಬ ನಂಬಿಕೆ ನನ್ನಲ್ಲಿದೆ ಎಂದು ಪ್ರಕಾಶ್ ರೈ ವಿಶ್ವಾಸ ವ್ಯಕ್ತಪಡಿಸಿದರು.

ಈಗಿನ ಸಂಸದರು ಏನೂ ಕೆಲಸ ಮಾಡಿಲ್ಲ ಎಂಬುದು ಜನರಿಗೆ ಗೊತ್ತಿದೆ. ಕೇಂದ್ರದಿಂದ ಏನು ಅನುದಾನ ಬರುತ್ತಿದೆ? ಆಸ್ಪತ್ರೆಗಳು ಯಾಕೆ ಹೀಗಿವೆ? ಕೆರೆಗಳು ಯಾಕೆ ಹೀಗಿವೆ? ಜನರ ಬದುಕು ಯಾಕೆ ಇಷ್ಟು ಬಿಕ್ಕಟ್ಟಾಗಿದೆ? ಯಾಕೆ ಯಾವ ಸಂಸದರೂ ಮಾತನಾಡುತ್ತಿಲ್ಲ ಇದರ ಬಗ್ಗೆ? ಸಂಸತ್​ನಲ್ಲಿ ಧ್ವನಿ ಎತ್ತಿದ್ದಾರಾ? ಅಟೆಂಡೆನ್ಸ್ ರಿಜಿಸ್ಟರ್ ಕಥೆ ಏನು? ವರ್ಷಕ್ಕೊಂದು ಸಲ ರಿಪೋರ್ಟ್ ಕಾರ್ಡ್ ಯಾಕೆ ಕೊಡುತ್ತಿಲ್ಲ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಮಾಡಿದ ಪ್ರಕಾಶ್ ರಾಜ್, ಪಕ್ಷವನ್ನ ಗೆಲ್ಲಿಸುವ, ಸರಕಾರವನ್ನ ಗೆಲ್ಲಿಸುವ ಮಾತುಗಳನ್ನಾಡುವವರನ್ನು ತರಾಟೆಗೆ ತೆಗೆದುಕೊಂಡರು.

ಇವತ್ತು ಸೇರಿದ ಜನಸ್ತೋಮದ ಬಗ್ಗೆ ತೃಪ್ತಿ ವ್ಯಕ್ತಿಪಡಿಸಿದ ಪ್ರಕಾಶ್ ರಾಜ್, ಜನರು ಪ್ರೀತಿಯಿಂದ ಇಲ್ಲಿ ಬಂದಿದ್ದಾರೆ. ದುಡ್ಡು ಕೊಟ್ಟು ಕರೆದುಕೊಂಡು ಬಂದಿಲ್ಲ. ಬೀದಿಗಳಿಂದ ಬಂದಿದ್ದಾರೆ ಜನ. ಎಂಟು ವಿಧಾನಸಭಾ ಕ್ಷೇತ್ರಗಳಿಂದಲೂ ಬಂದಿದ್ಧಾರೆ. ಬೇರೆ ಬೇರೆ ಸಂಘ ಸಂಸ್ಥೆಗಳೂ ಇವೆ. ಬಿಎಸ್​ಪಿ, ಸಿಐಟಿಯು, ಮಹಿಳಾ ಮೋರ್ಚಾ, ಆಟೋ ಚಾಲಕರು ಇದ್ದಾರೆ.. ಇದು ಜನರ ಪ್ರೀತಿ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ಅವರು ಸತತ 2 ಬಾರಿ ಗೆದ್ದಿದ್ದಾರೆ. ಇಲ್ಲಿ ಪ್ರಕಾಶ್ ರಾಜ್ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿರುವ ಪ್ರಕಾಶ್ ರಾಜ್ ಅವರು ಸ್ವತಂತ್ರವಾಗಿಯೇ ಗೆಲ್ಲುವ ಉಮೇದಿನಲ್ಲಿದ್ಧಾರೆ.

Comments are closed.