ಕರಾವಳಿ

ಮಗುವಿಗೆ ಬಾಟಲಿಯನ್ನು ಪರಿಚಯಿಸುವುದಕ್ಕೆ ಮೊದಲ ಕ್ರಮ ಬಲ್ಲಿರಾ…?

Pinterest LinkedIn Tumblr

ಬಹುತೇಕ ಪೋಷಕರು ತಮ್ಮ ಮಗುವಿಗೆ ಬಾಟಲಿ ಹಾಲನ್ನು ಯಾವಾಗ ಪರಿಚಯಿಸಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ. ಇದನ್ನು ತುಂಬಾ ಬೇಗನೆ ಮಾಡಿದರೆ ಮಗುವು ಎಲ್ಲಿ ಎದೆಹಾಲು ಕುಡಿಯುವುದು ಬಿಟ್ಟುಬಿಡುತ್ತದೋ ಎಂಬ ಭಯ ಅಥವಾ ತಡ ಮಾಡಿದರೆ ಎಲ್ಲಿ ತುಂಬಾ ತಡವಾಗಿ ಬಿಡುತ್ತದೋ ಎಂಬ ಭಯ ಅವರಲ್ಲಿ ಇರುತ್ತದೆ. ನೀವು ಇಲ್ಲಿ ಕೆಲವೊಂದು ವಿಷಯಗಳನ್ನ ನೆನಪಲ್ಲಿ ಇಡಬೇಕೆ ಹೊರತು, ಮಗುವಿಗೆ ಬಾಟಲಿಯನ್ನು ಪರಿಚಯಿಸುವುದಕ್ಕೆ ಇಂತದ್ದೇ ಕ್ರಮ ಇದೆ ಎಂತಲ್ಲ.

ಎದೆಹಾಲು ನೀಡುವಾಗ ಮಾಡುವಂತೆಯೇ, ಇಲ್ಲೂ ಎಲ್ಲವೂ ನೈಸರ್ಗಿಕವಾಗಿ ತಾನಾಗಿಯೇ ನಡೆದುಕೊಂಡು ಹೋಗಲು ಬಿಡಬೇಕು. ಇದರೊಂದಿಗೆ ನೀವು ಪರಿಗಣಿಸಬೇಕಾದ ಇನ್ನೊಂದು ವಿಷಯ ಎಂದರೆ, ನಿಮ್ಮ ಮಗುವಿಗೆ ಬಾಟಲಿಯಲ್ಲಿ ನೀವು ನೀಡಲು ಹೊರಟಿರುವುದು ನಿಮ್ಮದೇ ಶೇಖರಿಸಿಟ್ಟ ಎದೆಹಾಲೋ ಅಥವಾ ಫಾರ್ಮುಲಾ ಹಾಲೋ ಎಂಬುದು. ಸಾಮಾನ್ಯವಾಗಿ, ಮೊದಲಿಗೆ ಮಗುವಿಗೆ ಬಾಟಲಿಯಲ್ಲಿ ನಿಮ್ಮದೇ ಶೇಖರಿಸಿಟ್ಟ ಎದೆಹಾಲು ನೀಡುವುದರ ಮೂಲಕ ಶುರು ಮಾಡಲು ನಾವು ಶಿಫಾರಸು ಮಾಡುತ್ತೇವೆ.

ಯಾವಾಗ :
ಬಹುತೇಕ ಅಮ್ಮಂದಿರಿಗೆ ತಮ್ಮ ಮಟೆರ್ನಿಟಿ ರಜೆಗಳು ಮುಗಿಯುತ್ತಾ ಬಂದಾಗ ಅಥವಾ ಎದೆಹಾಲು ನೀಡಿ ನೀಡಿ ಮಧ್ಯೆ ಒಂದು ವಿರಾಮ ತೆಗೆದುಕೊಳ್ಳಬೇಕು ಎಂದುಕೊಂಡಾಗ ಈ ಪರಿಸ್ತಿಥಿ ಎದುರಾಗುತ್ತದೆ. ನಿಮ್ಮ ಮಗುವಿಗೆ ಬಾಟಲಿ ಅಥವಾ ಕೃತಕ ನಿಪ್ಪಲ್ ಅನ್ನು ನೀಡುವ ಮುನ್ನ ಕನಿಷ್ಠ ಪಕ್ಷ ನೀವು 4 ವಾರಗಳವರೆಗೆ ಆದರೂ ಕಾಯುವುದು ಒಳ್ಳೆಯದು. ನೀವು ಹೀಗೆ ಒಂದು ತಿಂಗಳ ಕಾಲದವರೆಗೆ ನಿಮ್ಮ ಮಗುವಿಗೆ ಎದೆಹಾಲನ್ನು ನೀಡುವ ಮೂಲಕ ನಿಮ್ಮ ಸ್ತನಗಳಲ್ಲಿಯೂ ನಿಯಮಿತವಾಗಿ ಎದೆಹಾಲು ಉತ್ಪತ್ತಿ ಆಗುತ್ತದೆ.

ಹೆರಿಗೆ ನಂತರದ ಮೊದಲ 2-3 ವಾರಗಳ ಕಾಲ, ನಿಮ್ಮ ಎದೆಹಾಲಿನ ಉತ್ಪತ್ತಿಯ ನಿಯಂತ್ರಣವು ಎಂಡೋಕ್ರೈನ್ ಹಾರ್ಮೋನ್ ಕೈಯಲ್ಲಿ ಇರುತ್ತದೆ. ಹೀಗಾಗಿ ನಿಮ್ಮ ಮಗುವಿಗೆ ಮೊದಲ ಕೆಲವು ವಾರಗಳವರೆಗೆ ನೀವು ಎದೆಹಾಲು ಕೊಡುವುದರ ಮೂಲಕ, ನೀವು ನಿಮ್ಮ ಎದೆಹಾಲಿನ ಉತ್ಪತ್ತಿಗೆ ಅಡಿಪಾಯ ಹಾಕಿ ಕೊಡುತ್ತೀರ. ನಿಮಗೆ ತಿಳಿದಿರಬೇಕಾದ ಇನ್ನೊಂದು ವಿಷಯ ಎಂದರೆ, ಮಗುವಿಗೆ ಬಾಟಲಿ ನೀಡುವುದು ಕೂಡ ನೀವು ಅಂದುಕೊಂಡಷ್ಟು ಸುಲಭವಲ್ಲ.

ನೀವು ನಿಮ್ಮ ಮಗುವಿಗೆ ಉಸಿರಾಡಲು ಸಮಯ ನೀಡುವಂತೆ ಮತ್ತು ಅವರಿಗೆ ಬಾಟಲಿಯಿಂದ ಕುಡಿಯಲು ಸುಲಭವಾಗುವ ರೀತಿಯಲ್ಲಿ ನೀವು ಬಾಟಲಿಯನ್ನು ಇಡಬೇಕು. ನಿಮ್ಮ ಮಗುವು ಸ್ವಲ್ಪ ಬೆಳೆದ ನಂತರ ಮತ್ತು ಅರಿವಿನ ಕೌಶಲ್ಯ ಬೆಳೆಸಿಕೊಂಡ ಮೇಲೆ, ಅವರು ತಾವಾಗಿಯೇ ತಮಗೆ ಬೇಕಾದ ರೀತಿಯಲ್ಲಿ ಬಾಟಲಿಯನ್ನು ಬಳಸುತ್ತಾರೆ. ಆದರೆ ಅಲ್ಲಿಯವರೆಗೆ ನೀವೇ ಬಾಟಲಿಯನ್ನು ಅವರ ಬಾಯಿಗೆ ಹಿಡಿಯಬೇಕು.

ಬಾಟಲಿಯ ಆಯ್ಕೆ :
ಬಹಳಷ್ಟು ಪೋಷಕರು ಸರಿಯಾದ ಫೀಡಿಂಗ್ ಸಾಧನಗಳನ್ನ ಆಯ್ಕೆ ಮಾಡುವುದರ ಮಹತ್ವವನ್ನೇ ತಿಳಿದಿರುವುದಿಲ್ಲ. ಯಾವುದೇ ರೀತಿಯ ಬಾಟಲಿ ಆದರೂ ಕೆಲಸ ಮಾಡುತ್ತದೆ, ಆದರೆ ಕೆಲವೊಂದು ಬಾಟಲಿಗಳು ಎದೆಹಾಲು ಹೀರುವ ಅನುಭವವನ್ನೇ ಇನ್ನಷ್ಟು ಚೆನ್ನಾಗಿ ಕೃತಕವಾಗಿ ನೀಡುತ್ತವೆ. ಅಗಲವಾದ ತಳ (ನಿಪ್ಪಲಿನ ವೃತ್ತಾಕಾರದ ಕೆಳಭಾಗ) ಇರುವ ನಿಪ್ಪಲ್ ಅನ್ನು ಹೊಂದಿರುವ ಬಾಟಲಿಯನ್ನೇ ನೀವು ಖರೀದಿಸಿ. ಅಲ್ಲದೆ ನಿಪ್ಪಲ್ ಇಂದ ಆಚೆ ಹಾಲು ಮೆಲ್ಲನೆ ಬರುವಂತ ನಿಪ್ಪಲ್ ಅನ್ನು ಆಯ್ಕೆ ಮಾಡಿ. ಹೀಗೆ ಮಾಡಿದರೆ ನಿಮ್ಮ ಮಗುವು ಹಾಲನ್ನು ಕುಡಿಯಲು ಅದನ್ನು ಚೀಪಬೇಕಾಗುತ್ತದೆ. ಕೆಲವೊಂದು ಕಂಪನಿಗಳು “ಫಾಸ್ಟ್ ಫ್ಲೋ” , “ಈಸಿ ಫ್ಲೋ” ಅಂತ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ನಿಮಗೆ ಬೇಕಿರುವುದು ಮೆಲ್ಲನೆ ಹರಿವಿಗೆ ಅವಕಾಶ ನೀಡುವ ಬಾಟಲಿಗಳು.

ಟೆಕ್ನಿಕ್
ಮೊದಲೇ ಹೇಳಿದಂತೆ, ನೀವು ಬಾಟಲಿಯನ್ನು ಹೇಗೆ ಹಿಡಿಯುತ್ತೀರ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ನೀವು ನಿಮ್ಮ ಮಗುವಿಗೆ ಒಂದೇ ಸಮನೆ ಎಲ್ಲಾ ಹಾಲನ್ನು ಕುಡಿಸುವ ಬದಲು, ಒಂದು ಸಲಕ್ಕೆ ಇಷ್ಟು ಅಂತ ಸ್ವಲ್ಪ ಸ್ವಲ್ಪನೇ ಬಿಡುವು ಕೊಡುತ್ತಾ ನೀಡಿ.

ಮೊದಲಿಗೆ ಸ್ವಲ್ಪ ಸ್ವಲ್ಪದರಿಂದಲೇ ಶುರು ಮಾಡಿ, ಕ್ರಮೇಣ ಹೆಚ್ಚಿಸುತ್ತಾ ಹೋಗಿ. ನೀವು ಕೇವಲ ಬಾಟಲಿಯನ್ನು ಸರಿಯಾಗಿ ಹಿಡಿದುಕೊಳ್ಳುವುದಷ್ಟೇ ಅಲ್ಲದೆ ನಿಮ್ಮ ಮಗುವನ್ನು ಸರಿಯಾದ ಭಂಗಿಯಲ್ಲಿ ಇಟ್ಟುಕೊಳ್ಳಿ. ನೀವು ಅವರನ್ನು ಸಮವಾಗಿ ಅಡ್ಡಡ್ಡ ಮಲಗಿಸುವ ಬದಲು, ಸ್ವಲ್ಪ ತಲೆ ಮೇಲೆ ಬರುವಂತೆ ವರಗಿಕೊಂಡ ಭಂಗಿಯಲ್ಲಿ ಇಟ್ಟುಕೊಳ್ಳಿ. ಅಲ್ಲದೆ ಮಗುವು ಹೇಗೆ ಸ್ಪಂದಿಸುತ್ತಿದೆ ಎಂದು ನೋಡಿ. ಕೆಲವು ಭಂಗಿಗಳು ಮಗುವಿಗೆ ಹಿತಕರ ಎನಿಸಿದರೆ, ಕೆಲವು ಭಂಗಿ ಮಗುವಿಗೆ ಅಹಿತಕರ ಆಗಿರಬಹುದು. ಹೀಗಾಗಿ ಅವರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ನೋಡಿ, ಬೇಕಿದ್ದಲ್ಲಿ ಭಂಗಿಯನ್ನು ಬದಲಿಸಿ.

Comments are closed.