ಕರ್ನಾಟಕ

“ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ’ ಎಷ್ಟು ನಿಜ ಅಲ್ಲವೇ….?

Pinterest LinkedIn Tumblr

thinking_man_pic

ಮಂಗಳೂರು: ಲೋಕದ ಜನತೆ ಯಮರಾಜನಿಂದ ಟಿಕೆಟ್ ಪಡೆಯಲು ತಯಾರಾಗಿ ನಿಂತಿರುವಂತೆ ಕಾಣುತ್ತ ಇದೆ ಜೀವದ ಕೌಂಟ್ ಡೌನ್ ಶುರುವಾಗಿದೆ. ಯಾಕೆ ಎದೆ ಢವ ಢವ ಎನ್ನಲು ಶುರುವಾಯಿತೇ? ಈ ಲೇಖನ ಪೂರ್ತಿ ಓದೋ ಮನಸ್ಸು ಇದ್ರೆ ಮಾತ್ರ ಇಲ್ಲಿ ಮುಂದುವರಿಯರಿ. ಏಕೆಂದರೆ ಲೇಖನ ಪೂರ್ತಿ ಓದಿದ ಬಳಿಕ ನೀವು ಬದಲಾಗಬೇಕು, ನಿಮ್ಮವರು ಬದಲಾಗಬೇಕು, ಇಡೀ ಸಮಾಜವೇ ಬದಲಾಗಬೇಕು ಎಂಬುದು ನಮ್ಮ ಆಸೆ.

ಇರಲ್ಲಿ ಬಿಡಿ ನೇರವಾಗಿ ವಿಷಯಕ್ಕೆ ಬಂದೇ ಬಿಡ್ತೀನಿ. ಕಳೆದ ವರ್ಷ ಅಂದರೆ 2015ರಲ್ಲಿ ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಬಲಿಯಾದವರ ಸಂಖ್ಯೆ ಅಂದಾಜು 2.6 ಲಕ್ಷ ಮಂದಿ. ಅಂದ್ರೆ ನಾವ್ಯಾಕೆ ಯೋಚನೆ ಮಾಡ್ಕೇಕು? ಹೋದವರು ಹೋದ್ರು ಎಂಬ ಚಿಂತನೆ ನಿಮ್ಮದಾದ್ರೆ ಆ ದೇವರೆ ಕಾಪಾಡಬೇಕು.

ಸ್ವಲ್ಪ ಗಂಭೀರವಾಗಿ ಯೋಚಿಸಿ ನೋಡಿ. ಕಳೆದ ವರ್ಷ ರಸ್ತೆ ಅಪಘಾತಕ್ಕೆ ಅನಾಥವಾದ ಕುಟುಂಬಗಳು 1.4 ಲಕ್ಷ. ಇದಕ್ಕೆಲ್ಲ ಕಾರಣ ಯಾರು? ಆಡಳಿತ ವರ್ಗ, ಸರಕಾರ, ಅವರು ಇವರು ರಸ್ತೆ ಸರಿಯಿಲ್ಲ, ನಿಯಮ ಸರಿಯಿಲ್ಲ ಅಂಥ ಸಬೂಬು ನೀಡುವ ಭಾವ ನಿಮ್ಮದಾದ್ರೆ ನಾವಿಲ್ಲಿ ಹೇಳಬಯಸುತ್ತೇವೆ ನೋಡಿ. ಬನ್ನಿ ಬದಲಾಗೋಣ. ಸಮಸ್ಯೆಯನ್ನು ಆಳವಾಗಿ ಪಠಿಸೋಣ. ನಮ್ಮ ತಪ್ಪು ತಿದ್ದಿಕೊಳ್ಳೋಣ. ಈವಾಗ ಮಾಡದಿದ್ದಲ್ಲಿ ಕುಟುಂಬ ಬರಿದಾದ ಮೇಲೆ ಮಾಡಿ ಏನು ಪ್ರಯೋಜನ?

1. ಹದೆಗೆಟ್ಟ ಲೈಸನ್ಸ್ ವ್ಯವಸ್ಥೆ :
ನಮ್ಮ ದೇಶದಲ್ಲಿ ಅತ್ಯಂತ ಹದೆಗೆಟ್ಟ ಲೈಸನ್ಸ್ ವ್ಯವಸ್ಥೆ ಇರೋ ವಿಚಾರ ಎಲ್ಲರಿಗೂ ತಿಳಿದಿದೆ. ಇಲ್ಲಿಂದಲೇ ಸಮಸ್ಯೆ ಆರಂಭ. ಭ್ರಷ್ಟಚಾರಿ ಅಧಿಕಾರಿಗಳು ಕೇವಲ ದುಡ್ಡಿನ ಆಸೆಗಾಗಿ ಬೇಕಾಬಿಟ್ಟಿ ಚಾಲನಾ ಪರವಾನಗಿ ನೀಡುತ್ತಾರೆ. ಇದರ ಭವಿಷ್ಯತ್ ಫಲವೇನು? ಸ್ವಲ್ಪ ಚಿಂತಿಸಿ ನೋಡಿ

2. ನಮ್ಮ ಮನೋಸ್ಥಿತಿ:
ನಮ್ಮ ಮನೋಸ್ಥಿತಿಯೇ ಹಾಗಿದೆ. ಯಾವತ್ತೂ ಇತರ ವಾಹನಗಳ ಬಗ್ಗೆ ಕೇರ್ ತಗೊಳ್ಳಲ್ಲ. ನಾವು ಸೇಫಾಗಿ ತಲುಪಿದರಾಯಿತು ಎಂಬ ಭಾವನೆ ನಮ್ಮದ್ದು. ಇತರರು ಏನೇ ಮಾಡಿದರೂ ನಾವ್ಯಾಕೇ ಯೋಚಿಸಬೇಕು ಅಲ್ಲವೇ? ನಾವು ಯಾವತ್ತೂ ಸುರಕ್ಷಿತ ಚಾಲನೆಗೆ ಆಸ್ಪದ ಕೊಟ್ಟಿಲ್ಲ. ಚಿಕ್ಕದಿನಿಂದಲೇ ನಮಗಿದು ಹವ್ಯಾಸವಾಗಿಬಿಟ್ಟಿದೆ. ರಸ್ತೆಗಿಳಿದ ಬಳಿಕ ತಾ ಮುಂದು ತಾ ಮುಂದು ಎಂದು ಹಾರ್ನ್ ಹೊಡೆದು ಪರಸ್ಪರ ಕಚ್ಚಾಡುವುದಷ್ಟೇ ನಮಗೆ ಗೊತ್ತು.

3. ತಾಳ್ಮೆಯ ಕೊರತೆ :
ನೇರ ರಸ್ತೆಯಾಗಿರಲಿ, ತಿರುವು ಆಗಿರಲಿ ಏನೇ ರಸ್ತೆ ಪರಿಸ್ಥಿಯಿದ್ದರೂ ಅದಕ್ಕನುಸಾರವಾಗಿ ಎಚ್ಚರದಿಂದ ವಾಹನ ಚಾಲನೆ ಮಾಡುವಲ್ಲಿ ನಾವು ಪದೇ ಪದೇ ವಿಫಲರಾಗುತ್ತಿದ್ದೇವೆ.

4. ಸುರಕ್ಷತೆಗಳಿಲ್ಲ:
ನಮ್ಮ ವಾಹನಗಳಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಹಾಗೂ ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂಗಳಂತಹ ಆಧುನಿಕ ಸುರಕ್ಷತೆಗಳಿಲ್ಲ. ಅದು ಹೋಗಲಿ ತುರ್ತು ಪರಿಸ್ಥಿತಿಯಲ್ಲಿ ನಮ್ಮ ವಾಹನವನ್ನು ಹೇಗೆ ನಿಯಂತ್ರಣಕ್ಕೆ ತರಬೇಕು ಎಂಬ ಪಾಠವನ್ನು ಯಾರು ಹೇಳಿಕೊಡುವುದಿಲ್ಲ.

5. ಇಂಡಿಕೇಟರ್ :
ಇಂಡಿಕೇಟರ್,ಅಂದರೇನು? ಅದೇನದು? ಎಂದು ಕೇಳವವರು ಜಾಸ್ತಿಯಾಗಿಬಿಟ್ಟಿದ್ದಾರೆ. ಮಾರ್ಗ ಮಧ್ಯೆ ಲೇನ್ ಬದಲಾಯಿಸುವಾಗ, ಅಥವಾ ಎಡದಿಂದ ಬಲಕ್ಕೆ ತಿರುಗುವಾಗ ನಾವು ಇಂಡಿಕೇಟರ್ ಸೇವೆಯನ್ನು ಬಳಕೆ ಮಾಡುವುದಿಲ್ಲ.

6. ಬೈಕ್‌ನಲ್ಲಿ ಮಿರರ್ :
ಅಗತ್ಯವಿದೆಯೇ? ನಾವುಗಳು ಭವಿಷ್ಯದ ಪ್ರಜೆಗಳು. ಹಿಂದಕ್ಕೆ ತಿರುಗಿ ನೋಡೋ ಅಗತ್ಯ ನಮಗಿಲ್ಲ. ಹಾಗಾದ್ದಲ್ಲಿ ಬೈಕ್‌ನಲ್ಲಿ ಹಿಂಬದಿಯ ಮಿರರ್ ಅಗತ್ಯವಿದೆಯೇ ಎಂಬ ಭಾವನೆ ನಮ್ಮದ್ದು.

7. ಪದೇ ಪದೇ ತಪ್ಪುಗಳು ಪುನರಾವರ್ತನೆ:
ಸಂಚಾರಿ ಟ್ರಾಫಿಕ್ ಗಳಲ್ಲಿ ಯಾವುದೇ ಮುನ್ನಚ್ಚೆರಿಕೆಯಿಲ್ಲದೆ ನಾವು ಸಡನ್ ಆಗಿ ಬ್ರೇಕ್ ಅದುಮುವುದು, ಲೇನ್ ಬದಲಾವಣೆ, ಅಡ್ಡಾದಿಡ್ಡಿ ಚಾಲನೆ, ಇಕ್ಕಟ್ಟಾದ ಪ್ರದೇಶದಲ್ಲೂ ವೇಗ ವರ್ಧಿಸುವುದು ಮುಂತಾದ ತಪ್ಪುಗಳನ್ನು ಪದೇ ಪದೇ ಮಾಡುತ್ತಿರುತ್ತೇವೆ.

8. ಹೆಲ್ಮೆಟ್:
ಕರ್ಮಕಾಂಡ ಯಾರೋ ಮಾಡಿರುವ ಪಾಪವನ್ನು ನಾವು ಅನುಭವಿಸುವ ರೀತಿಯಲ್ಲಿ ಯಾರದೋ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಅರ್ಧಂಬರ್ಧ ಹೆಲ್ಮೆಟ್ ಗಳನ್ನು ನಾವು ಧರಿಸುತ್ತೇವೆ. ಅಷ್ಟು ಮಾಡಿದರೂ ಸರಿ ಹೆಲ್ಮೆಟ್ ಪಟ್ಟಿಯನ್ನು ಬಿಗಿಗೊಳಿಸದಿದ್ದರೆ ಹೇಗೆ?

9. ಚಾಂಚಲ್ಯ : ಮನಸ್ಸು ನಮ್ಮದ್ದು ಚಾಂಚಲ್ಯ ಮನಸ್ಸು. ಒಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದು ಮಗದೊಂದು ಕೈಯಲ್ಲಿ ಮೊಬೈಲ್ ಸಂಭಾಷಣೆ ಅಥವಾ ಎಸ್‌ಎಂಎಸ್ ಮಾಡುವ ಜಾಯಮಾನ ನಮ್ಮದ್ದು. ಇಂತಹ ಹವ್ಯಾಸಗಳಿಗೆ ಮುಕ್ತಿ ನೀಡದೆ ಹೋದ್ದಲ್ಲಿ ಯಮರಾಜನಿಗೂ ನೀವು ಬಹುಬೇಗನೇ ಪ್ರಿಯವಾಗಲಿದ್ದೀರಿ.

10. ಓವರ್ ಟೇಕ್ :
ಓವರ್ ಟೇಕಿಂಗ್ ವೇಳೆ ಪಾಲಿಸಬೇಕಾದ ಕನಿಷ್ಠ ಸಂಚಾರ ನಿಯಮವನ್ನು ಪಾಲಿಸಲು ನಮಗೆ ತಿಳಿದಿರುವುದಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ.

11. ರೆಡ್ ಸಿಗ್ನಲ್ ಬಹುಶ:
ನಮ್ಮ ವಾಹನ ಸವಾರರು ರೆಡ್ ಸಿಗ್ನಲ್ ಅಂದರೆ ಇನ್ನಷ್ಟು ವೇಗವಾಗಿ ವಾಹನ ಚಾಲನೆ ಮಾಡು ಎಂದು ಅರ್ಥಮಾಡಿಕೊಂಡಿದ್ದಾರೆ.

12. ಪ್ರಕಾಶಮಾನವಾದ ಬೆಳಕು :
ವಾಹನಗಳಲ್ಲಿ ಹೆಡ್ ಲೈಟ್ ಗಳಲ್ಲಿ ಡಿಮ್-ಡಿಪ್ ವ್ಯವಸ್ಥೆಯನ್ನು ಕೊಡಲಾಗಿದೆ. ಆದರೆ ರಾತ್ರಿ ವೇಳೆಯಲ್ಲಿ ನಾವಿದರ ಪ್ರಯೋಜನವನ್ನೇ ಪಡೆಯುದಿಲ್ಲ. ಬದಲಾಗಿ ಅತ್ಯಂತ ಪ್ರಕಾಶಮಾನವಾದ ಬೆಳಕಿನಿಂದ ಮುಂಭಾಗದಿಂದ ಬರುವ ವಾಹನಗಳಿಗೂ ತೊಂದರೆಯನ್ನು ಕೊಡುತ್ತಿರುತ್ತೇವೆ.

13. ಗೇರ್ ಬಳಕೆ:
ಗೇರ್ ಗಳ ನಿಖರ ಬಳಕೆಯ ಬಗ್ಗೆ ನಮಗೆ ಅರಿವಿರುವುದಿಲ್ಲ. ಇಂದರಿಂದ ಇಂಧನ ಕ್ಷಮತೆಯ ಅಭಾವವುಂಟಾಗುತ್ತದೆ. ‘ಮರಳಿ ಮನೆಗೆ’ ಎಂಬ ರೀತಿಯಲ್ಲಿ ಕಾರು ಚಾಲಕರು ವಾಹನಗಳ ಬೇಸಿಕ್ ಪಾಠ ಕಲಿಯಬೇಕಾಗಿರುವುದು ಅನಿವಾರ್ಯವೆನಿಸಿದೆ.

14. ಸಹ ಪ್ರಯಾಣಿಕರ ಬಗ್ಗೆ ಕಾಳಜಿ :
ಸಹ ಪ್ರಯಾಣಿಕರಿಗೆ ಸೀಟು ಬೆಲ್ಟ್ ಬೇಡವೇ? ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಚಾಲಕರು ಮಾತ್ರ ಸೀಟು ಬೆಲ್ಟ್ ಧರಿಸಿರುತ್ತಾರೆ. ಆದರೆ ಸುರಕ್ಷತೆಯ ದೃಷ್ಟಿಕೋನದಲ್ಲಿ ಸಹ ಪ್ರಯಾಣಿಕರು ಸೀಟು ಬೆಲ್ಟ್ ಧರಿಸಬೇಕಾಗಿರುವುದು ಅತಿ ಅಗತ್ಯ ಎಂಬುದನ್ನು ಮರೆತುಬಿಡುತ್ತೇವೆ.

15. ವಾಹನಗಳ ನಡುವೆ ಅಂತರ:
ವಾಹನಗಳ ನಡುವೆ ಅಂತರ ಕಾಪಾಡುವುದರಿಂದ ಆಗುವ ಪ್ರಯೋಜನಗಳೇನು? ಹೌದು, ಸಣ್ಣ ರಸ್ತೆ ಆಗಿರಲಿ ಅಥವಾ ಹೈವೇನೇ ಆಗಿರಲಿ ವಾಹನಗಳ ನಡುವೆ ಅಂತರ ಕಾಪಾಡಿಕೊಂಡು ಚಲಿಸಿದರೆ ಏನಾದರೂ ತೊಂದರೆಯಿದೆಯೇ?

16. ಪಾನಮತ್ತ ಚಾಲನೆ :
ಯಾರು ಏನೇ ಉಪದೇಶ ಹೇಳಿಕೊಟ್ಟರೂ ನಮ್ಮದ್ದು ಮಾತ್ರ ಮದ್ಯ ಪ್ರಿಯ ರಾಷ್ಟ್ರ. ಎಮ್ಮೆಗೆ ವೇದ ಪಾಠ ಹೇಳಿ ಏನು ಪ್ರಯೋಜನ?

17. ಕತ್ತಲಾಗದ ಹೊರತು ಹೆಡ್ ಲೈಟ್ ಆನ್ ಮಾಡಲ್ಲ:
ಮಳೆಗಾಲದಂತಹ ಮೋಡ ಕವಿದ ವಾತಾವರಣಗಳಲ್ಲಿ ನಾವು ಹೆಡ್ ಲೈಟ್ ಮಹತ್ವವನ್ನು ಅರಿಯಬೇಕು. ವಾತಾವರಣದಲ್ಲಿ ಕತ್ತಲು ಆವರಿಸಿದ್ದಲ್ಲಿ ಹೆಡ್ ಲೈಟ್ ಸದುಪಯೋಗವನ್ನು ಪಡೆಯಬೇಕು.

18. ನಿರ್ವಹಣೆ ಕೊರತೆ:
ಹಳೆಯ ಗುಜರಿ ಗಾಡಿಗಳನ್ನು ಉಪಯೋಗಿಸುವ ಮೂಲಕ ಇತರ ಪ್ರಯಾಣಿಕರ ಜೊತೆಗೆ ವಾತಾವರಣವನ್ನು ಮಾಲಿನ್ಯಗೊಳಿಸುತ್ತೇವೆ. ಇಂತಹ ಪ್ರವೃತ್ತಿಗಳು ನಮ್ಮದ್ದೇ ಆರೋಗ್ಯವನ್ನು ಹದೆಗೆಡಿಸಲಿದೆ ಎಂಬುದನ್ನು ಮರೆಯದಿರಿ.

19. ಅಸುರಕ್ಷಿತ ಬೈಕ್ ಚಾಲನೆ :
ನಮ್ಮಲ್ಲಿ ಎಷ್ಟು ಮಂದಿ ಬೈಕ್ ನಲ್ಲಿ ಪಯಣಿಸುವಾಗ ಜಾಕೆಟ್, ಹ್ಯಾಂಡ್ ಕವರ್, ಹೆಲ್ಮೆಟ್ ಹಾಗೂ ಶೂ ಗಳಂತಹ ಸುರಕ್ಷಿತ ಕವಚಗಳನ್ನು ಧರಿಸುತ್ತಿದ್ದಾರೆ? ಇವೆಲ್ಲ ನಮಗ್ಯಾಕೆ ಎಂದು ಮುಜುಗರ ಪಟ್ಟುಕೊಳ್ಳುವವರೇ ಜಾಸ್ತಿ.

20. ಜಾನುವಾರುಗಳ ಕಾಟ:
ಸುಂದರ ಭಾರತದಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ. ರಸ್ತೆಗಳ ನಡುವೆ ಜಾನುವಾರುಗಳು ಅಡ್ಡಾದಿಡ್ಡಿ ಓಡಾಡುತ್ತಿರುವುದನ್ನು ನೀವು ಕಾಣಬಹುದು. ಇವೆಲ್ಲದರ ಬಗ್ಗೆ ಮುನ್ನಚ್ಚೆರಿಕೆ ವಹಿಸುವುದು ಒಳ್ಳೆಯದು.

21. ರಸ್ತೆ ಚಿಹ್ನೆಗಳು:
ನಮ್ಮಲ್ಲಿ ಹಲವರಿಗೆ ಈಗಲೂ ರಸ್ತೆ ಸಂಚಾರ ಚಿಹ್ನೆಗಳ ಬಗ್ಗೆ ಸರಿಯಾದ ಅರಿವಿರುವುದಿಲ್ಲ. ಚಾಲನಾ ಪರವಾನಗಿ ನೀಡುವ ವೇಳೆ ಸಂಬಂಧಪಟ್ಟ ರಸ್ತೆ ಸಂಚಾರ ಅಧಿಕೃತರು ಈ ಬಗ್ಗೆ ಕಟ್ಟುನಿಟ್ಟಿನ ಪರೀಕ್ಷೆ ಏರ್ಪಡಿಸಬೇಕಾಗಿದೆ.

22. ಮೂಲ ಸೌಕರ್ಯದ ಕೊರತೆ: ಜನರೇ ಸರಿಯಿಲ್ಲ ಎಂದ ಮೇಲೆ ಅಧಿಕಾರಿಗಳು ಸರಿಯಿರುತ್ತಾರೆಯೇ? ನಮ್ಮ ರಸ್ತೆಯ ಸುರಕ್ಷತೆಯನ್ನು ಮುತುವರ್ಜಿಯನ್ನು ವಹಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಅಲ್ಲದೆ ಮತ್ಯಾರೋ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರೆ ರಸ್ತೆ ಗುಂಡಿಗಳು ನೀಗುವುದೇ?

ಮೇಲೆ ನೀಡಿದ ಮಾಹಿತಿಯಲ್ಲಿ ಯಾವುದೇ ಅಂಶಗಳು ಬಿಟ್ಟು ಹೋಗಿದ್ದಲ್ಲಿ ನಿಮ್ಮ ಕಾಮೆಂಟ್ ಉಲ್ಲೇಖಿಸಲು ಮರೆಯದಿರಿ. ಹಾಗೂ ಈ ಲೇಖನ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿ ಅವರಿಗೆ ಇದರ ಉಪಯೋಗವನ್ನು ತಿಳಿಯಲು ಸಹಕರಿಸಿ.

Comments are closed.