ಕರ್ನಾಟಕ

ಮಧುಮೇಹ ರೋಗದ ಬಗ್ಗೆ ತಿಳಿಯ ಬೇಕಾದ ಸಂಪೂರ್ಣ ವಿವರ

Pinterest LinkedIn Tumblr

diabetes_type_1

ಮಂಗಳೂರು:ಕೇಳಲು ಮಧುರವಾದ ಹೆಸರಾದರೂ ಸಕ್ಕರೆ ಕಾಯಿಲೆ ಎಂದಾಕ್ಷಣ ಕಳವಳದಿಂದ ಮುಖ ಕಿವಿಚುವರೇ ಜಾಸ್ತಿ. ಅಂತಹ ರೋಗ ಈ ಸಕ್ಕರೆ ಕಾಯಿಲೆ (ಡಯಾಬಿಟೀಸ್) ಅಥವಾ ಮಧುಮೇಹ. ಇದು ನಮ್ಮ ದೇಹದಲ್ಲಿ ಜಠರದ ಹಿಂದೆ ಇರುವ ಪ್ಯಾಂಕ್ರಿಯಾಸ್ ಗ್ರಂಥಿಯು(ಮಾಂಸಲಿ) ಸ್ರವಿಸುವ ಇನ್ಸುಲಿನ್ ಎಂಬ ಪ್ರದೀಪಕದ ಕೊರತೆ ಅಥವಾ ಅದರ ಕಾರ್ಯಕ್ಕೆ ಅಡ್ಡಿಯಾಗುವಂತಹ ಜೀವರಾಸಾಯನಿಕದ ಬದಲಾವಣೆಗಳಿಂದ ಉಂಟಾಗುವ ಕಾಯಿಲೆ.

ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪಚನಗೊಂಡು ಶರ್ಕರಪಿಷ್ಟ, ಸಸಾರಜನಕ ಹಾಗೂ ಕೊಬ್ಬಿ ಘಟಕಗಳಾದ ಗ್ಲೂಕೋಸ್, ಅಮೈನೋಆಮ್ಲ ಹಾಗೂ ಮೇದೋಆಮ್ಲಗಳ ರೂಪದಲ್ಲಿ ಹೀರಲ್ಪಡುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿದಾಗ ತಕ್ಷಣವೇ ಪ್ಯಾಂಕ್ರಿಯಾಸ್ ಸ್ಪಂದಿಸಿ ಇನ್ಸುಲಿನ್ಅನ್ನು ಬಿಡುಗಡೆ ಮಾಡುವುದರಿಂದ ಸಕ್ಕರೆ ಮಟ್ಟ ಸಹಜ ಸ್ಥಿತಿಗೆ ಬರಲು ಕಾರಣವಾಗುತ್ತದೆ. ಇನ್ಸುಲಿನ್‌ನ ಸಮ್ಮುಖದಲ್ಲಿ ಜೀವಕೋಶಗಳು ಸಕ್ಕರೆಯನ್ನು ಇಂಧನವಾಗಿ ದಹಿಸಿ ದೈಹಿಕ ಚಟುವಟಿಕೆಗಳಿಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ.

ಕೆಲವು ಜೀವರಾಸಾಯನಿಕ ಕಾರಣಗಳಿಂದ ಇನ್ಸುಲಿನ್‌ನ ಸ್ರವಿಕೆಯ ಕೊರತೆ ಇಲ್ಲವೆ ಅದರ ಕಾರ್ಯ ಚಟುವಟಿಕೆಗಳಿಗೆ ಕೆಲವು ಊತಕಗಳು ತೋರ್ಪಡಿಸುವ ಪ್ರತಿರೋಧದ ಫಲವಾಗಿ ಶರ್ಕರ ಪಿಷ್ಟ, ಸಸಾರಜನಕ ಹಾಗೂ ಕೊಬ್ಬಿ ಜೀರ್ಣ ಕ್ರಿಯೆಯಲ್ಲಿ ವ್ಯತ್ಯಯವುಂಟಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ.

diabetes_type_2

ಸಕ್ಕರೆ ಕಾಯಿಲೆಯ ವಿಧಗಳು:
1. ಇನ್ಸುಲಿನ್ ಅವಲಂಬಿತ ಸಕ್ಕರೆ ಕಾಯಿಲೆ:
ಇದು ಸಾಮಾನ್ಯವಾಗಿ ಅನುವಶೀಯವಾಗಿರುತ್ತದೆ. ಇದು ಹೆಚ್ಚಾಗಿ ಮಕ್ಕಳು ಹಾಗೂ ಚಿಕ್ಕವಯಸ್ಸಿನ ಯುವಕರಲ್ಲಿ ಕಂಡುಬರುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದೇ ಇರುವ ಕಾರಣ ಪ್ರತಿದಿನ ತಪ್ಪದೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುವು ದು.  ಚುಚ್ಚುಮದ್ದನ್ನು ತಪ್ಪಿಸಿದರೆ ಮುಂದೆ ಇವರಿಗೆ ಕಿಟೊಆಸಿಡೋಸಿಸ್ ಎಂಬ ತೊಂದರೆ ತಲೆದೋರಬಹುದು.

2. ಇನ್ಸುಲಿನ್ ಅವಲಂಬಿತವಲ್ಲದ ಸಕ್ಕರೆ ಕಾಯಿಲೆ:
ಇದು ಸಾಮಾನ್ಯವಾಗಿ ಅತಿ ತೂಕ ಇರುವವರಲ್ಲಿ ಕಂಡುಬರುತ್ತದೆ. ಇನ್ಸಲಿನ್ ಉತ್ಪತ್ತಿಯದರೂ, ಇದರ ಕಾರ್ಯ ಸಮರ್ಥತೆಯಲ್ಲಿ ಅಡ್ಡಿಯುಂಟಾಗುವ ಮೂಲಕ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇವರಲ್ಲಿ ರೋಗಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಪಥ್ಯಾಚಾರ, ವ್ಯಾಯಾಮ ಹಾಗೂ ಔಷಧದ ಮೂಲಕ ರೋಗವನ್ನು ಹತೋಟಿಯಲ್ಲಿಡಬಹುದು.

3. ಅಪೌಷ್ಟಿಕತೆಗೆ ಸಂಬಂಧಿಸಿದ ಸಕ್ಕರೆ ಕಾಯಿಲೆ:
ಅಪೌಷ್ಟಿಕತೆಯಿಂದ ಉಂಟಾಗುವ ಸಕ್ಕರೆ ಕಾಯಿಲೆಯನ್ನು ಇತ್ತೀಚೆಗೆ ಗುರುತಿಸಲಾಗಿದೆ. ಈ ಕಾಯಿಲೆ ಮುಖ್ಯವಾಗಿ ಉಷ್ಣವಲಯಗಲಲ್ಲಿ 15-30 ವರ್ಷದೊಳಗಿನ ಯುವಕರಲ್ಲಿ ಕಂಡುಬರುತ್ತದೆ. ಭಾರತದಂತಹ ಉಷ್ಣವಲಯದ ದೇಶಗಳಲ್ಲಿ ಹೆಚ್ಚಿನ ಜನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಮೇದೋಜೀರಕ ಗ್ರಂಥಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್‌ಅನ್ನು ಉತ್ಪತ್ತಿ ಮಾಡದೇ ಇರುವುದರಿಂದ ಇನ್ಸುಲಿನ್ ಚುಚ್ಚುಮದ್ದು ಕೊಡಬೇಕಾಗುವುದು. ಆದರೆ, ಇವರಿಗೆ ಇನ್ಸುಲಿನ್ ಚುಚ್ಚುಮದ್ದು ತಪ್ಪಿಸಿದರೂ ಕೀಟೋಆಸಿಡೋಸಿಸ್ ರೋಗ ಬರುವುದಿಲ್ಲ.

diabetes_type_3

ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ:
ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದರಿಂದ ಇನ್ಸುಲಿನ್‌ನ ಅವಶ್ಯಕತೆ ಸಾಮಾನ್ಯಕ್ಕಿಂತ 2-3 ಪಟ್ಟು ಹೆಚ್ಚುತ್ತದೆ. ಆದ್ದರಿಂದ ಶೇ. 1ರಷ್ಟು ಸ್ತ್ರೀಯರಲ್ಲಿ ಗರ್ಭಧರಿಸಿದಾಗ ಮಧುಮೇಹರೋಗ ಕಂಡುಬರುತ್ತದೆ. ಅನುವಂಶೀಯವಾಗಿ ಸಕ್ಕರೆ ಕಾಯಿಲೆ ಇರುವವರಲ್ಲಿ ಇದರ ಸಂಭವ ಹೆಚ್ಚು. ಮಧುಮೇಹವನ್ನು ಮೊದಲ ಮೂರು ತಿಂಗಳಲ್ಲಿ ನಿಯಂತ್ರಿಸದಿದ್ದರೆ ಗರ್ಭಪಾತ ಅಥವಾ ಭ್ರೂಣದಲ್ಲಿ ನ್ಯೂನತೆ ಉಂಟಾಗಬಹುದು.. ಮಧುಮೇಹದಿಂದ ಬಳಲುವ ಗರ್ಭಪಾತ ಅಥವಾ ಭ್ರೂಣದಲ್ಲಿ ನ್ಯೂನತೆ ಉಂಟಾಗಬಹುದು. ಮಧುಮೇಹದಿಂದ ಬಳಲುವ ಗರ್ಭಿಣಿಯರಿಗೆ ಹುಟ್ಟಿದ ಮಗುವು ಸಾಮಾನ್ಯ ಮಕ್ಕಳಿಗಿಂತ ತೂಕದಲ್ಲಿ ಹೆಚ್ಚಾಗಿರುತ್ತದೆ. ಈ ಮಗು ಮುಂದೆ ಮಧುಮೇಹಿ ಆಗುವ ಸಂಭವ ಹೆಚ್ಚು.

ಗರ್ಭಿಣಿಯರಯ ಸರಿಯಾದ ಸಮಯದಲ್ಲಿ ತಪಾಸಣೆ ಮಾಡಿಸಿ ಇನ್ಸುಲಿನ್ ಹಗೂ ಆಹಾರ ಚಿಕೆತ್ಸೆಯ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಗರ್ಭಿಣಿ ಮಹಳೆಯ ಅಪೇಕ್ಷಣೀಯ ತೂಕದ ಲೆಕ್ಕದಲ್ಲಿ 30-35 ಕಿ.ಕ್ಯಾ/ಕಿ.ಗ್ರಾಂ ಕ್ಯಾಲೊರಿಗಳನ್ನು ಮತ್ತು 1.5-2.5 ಗ್ರಾಂ/ಕಿ.ಗ್ರಾಂ ಸಸಾರಜನಕವನ್ನು ಕೊಡಬೇಕು. ಗರ್ಭಾವಸ್ಥೆಯಲ್ಲಿ ಇವರ ದೈಹಿಕ ತೂಕ 12ಕಿ.ಗ್ರಾಂ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

diabetes_type_4

ರೋಗ ಲಕ್ಷಣಗಳು:
ಅತಿ ಮೂತ್ರ ವಿಸರ್ಜನೆ
ತೀವ್ರ ಬಾಯಾರಿಕೆ
ಉತ್ಕಟ ಹಸಿವು
ತೂಕ ಕಡಿಮೆಯಗುವುದು
ಆಯಾಸ ಮತ್ತು ಸುಸ್ತು
ಗಾಯಗಳು ಮಾಯದೆ ಇರುವುದು
ಜನನಾಂಗಳಲ್ಲಿ ತುರಿಕೆ ಹಾಗೂ ಸೋಂಕು
ತೂಕಡಿಕೆ ಹಾಗೂ ಕಣ್ಣಿನ ತೊಂದರೆ
ಕಾಲುಗಳ ಜಡತೆ ಮತ್ತು ಪಾದಗಳಲ್ಲಿ ಉರಿತ
ಆಗಾಗ ಸೋಂಕು ರೋಗಗಳು ಬರುವುದು.

ರೋಗ ಪರೀಕ್ಷೆ:
ಹೈಪರ್ಗ್ಲೈಸೀಮಿಯ (ರಕ್ತದಲ್ಲಿ ಗ್ಲೂಕೋಸ್‌ನ ಅತಿಶಯತೆ)
ರೋಗಿ ಆಹಾರ ಸೇವಿಸಿದ 12ಗಂಟೆಗಳ ನಂತರ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣದ ಪರೀಕ್ಷೆ ಮಾಡಲಾಗುವುದು. ಒಂದು ಡೆಸಿ ಲೀ.ಗೆ 120ಮಿ.ಗ್ರಾಂನಷ್ಟು ಪ್ಸಾಸ್ಮಾಗ್ಲೂಕೋಸ್ ಇದ್ದರೆ ಸಕ್ಕರೆ ಕಾಯಿಲೆ ಇದೆ ಎಂದು ತಿಳಿಯಬಹುದು.

ಗ್ಲೂಕೋಸ್ ಟಾಲರೆನ್ಸ್ ಪರೀಕ್ಷೆ:
ಈ ಪರೀಕ್ಷೆಯಿಂದ ದೇಹ ಎಷ್ಟು ಗ್ಲೂಕೋಸ್ ಅನ್ನು ಉಪಯೋಗಿಸಿಕೊಳ್ಳಬಹುದು ಎನ್ನುವುದು ತಿಳಿಯುತ್ತದೆ.

ಮೂತ್ರ ಪರೀಕ್ಷೆ:
ಈ ಪರೀಕ್ಷೆಯಿಂದ ಮೂತ್ರದಲ್ಲಿ ಗ್ಲೂಕೋಸ್ ಅಂಶ ಹೆಚ್ಚಿದ್ದರೆ ತಿಳಿಯುತ್ತದೆ.

ಮಧುಮೇಹಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು :
ತೃಪ್ತಿಕರ ದೇಹ ತೂಕವನ್ನು ಹೊಂದುವುದು.
ರಕ್ತದಲ್ಲಿ ಗ್ಲೂಕೋಸ್ ಪ್ರಮಾಣದ ನಿಯಂತ್ರಣೆ
ಆಹಾರ ನಿರ್ವಹಣೆ
ಮದ್ಯಪಾನವನ್ನು ವರ್ಜಿಸುವುದು
ಸ್ನಾಯುಗಳ ಬಲವರ್ಧನೆಗೆ ಕ್ರಮಬದ್ಧ ವ್ಯಾಯಾಮ
ಉದ್ರೇಕಗೊಳ್ಳದೆ ಇರುವುದು.
ಪಾದಗಳನ್ನು ಗಾಯಗಳಿಂದ ರಕ್ಷಿಸುವುದು
ಕ್ರಮಬದ್ಧ ಆರೋಗ್ಯ ತಪಾಸಣೆ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುವುದು.
ಧೂಮಪಾನವನ್ನು ನಿಲ್ಲಿಸುವುದು.

ಆಹಾರ ನಿರ್ವಹಣೆ:
ಸೂಕ್ತ ಆಹಾರ ಸೇವನೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸರಿಯಾದ ಮಟ್ಟಕ್ಕೆ ತಂದು ನಿಯಂತ್ರಣಕ್ಕೆ ಒಳಪಡಿಸುತ್ತದೆ. ಮಧುಮೇಹಿಯ ವಯಸ್ಸು, ತೂಕ, ಚಟುವಟಿಕೆ ಹಾಗೂ ಆರೋಗ್ಯಸ್ಥಿತಿಗೆ ಅನುಗುಣವಾಗಿ ಕ್ಯಾಲೊರಿಗಳ ಸೇವನೆಯನ್ನು ನಿಗದಿಪಡಿಸಬೇಕು. ಕ್ಯಾಲೊರಿಗಳು ಮಧುಮೇಹಿಯ ದಿನದ ಅವಶ್ಯಕತೆಗಿಂತ ಹೆಚ್ಚು ಇರದಂತೆ ನೋಡಿಕೊಳ್ಳಬೇಕು. ಇವರ ಆಹಾರದಲ್ಲಿ ರಕ್ತದ ಸಕ್ಕರೆಯ ಪ್ರಮಾಣವನ್ನು ಇಳಿಸಲು ಸಹಾಯ ಮಡುವಂತಹ ಆಹಾರ ವಸ್ತುಗಳಾದ ಮೆಂತ್ಯ, ಹಾಗಲಕಾಯಿ ಹಾಗೂ ನೇರಳೆ ಹಣ್ಣುಗಳನ್ನು ಸೇರಿಸುವುದು ಸೂಕ್ತ.

ಕ್ಯಾಲೊರಿಯನ್ನೊದಗಿಸುವ ಪೋಷಕಾಂಶಗಳು:
ಶರ್ಕರ ಪಿಷ್ಟಗಳು : ನಮ್ಮ ದೈನಂದಿನ ಚಟುವಟಿಕೆಗಳಿಗೆ ಬೇಕಾದ ಶಕ್ತಿಯ ಶೇ. 55ರಷ್ಟನ್ನು ಆಹಾರದಲ್ಲಿನ ಶರ್ಕರ ಪಿಷ್ಟಗಳು ಒದಗಿಸಬೇಕು. ಸರಳ ರೂಪದ ಸಕ್ಕರೆ ಅಥವಾ ಗ್ಲೂಕೋಸ್ ರೂಪದಲ್ಲಿ ಲಭಿಸುವ ಶರ್ಕರಪಿಷ್ಟಗಳು ತೀವ್ರವಾಗಿ ಜೀರ್ಣನಾಳಗಳಿಂದ ಹೀರಲ್ಪಟ್ಟು ರಕ್ತದ ಗ್ಲೂಕೋಸ್ ಮಟ್ಟವು ಏರಲು ಕಾರಣವಾಗುತ್ತದೆ. ಆದರೆ ಸಂಕೀರ್ಣ ರೂಪದಲ್ಲಿ ಶರ್ಕರ ಪಿಷ್ಟಗಳು ನಿಧಾನವಾಗಿ ಪಚನಗೊಂಡು ಹೀರಲ್ಪಡುತ್ತವೆ. ಆದ್ದರಿಂದ ಶೇ. 20ರಷ್ಟು ಕ್ಯಾಲೊರಿಗಳು ಸಂಕೀರ್ಣ ರೂಪದ ಶರ್ಕರಪಿಷ್ಟ ಒದಗಿಸುವ ನಾರುಯುಕ್ತ ಪದಾರ್ಥಗಳು, ಪಾಲಿಶ್ ಮಾಡದ ಕಾಳು, ಬೇಳೆಕಾಳುಗಳು, ಒಟ್ಟು ಧಾನ್ಯಗಳು, ಹಸಿ ತರಕಾರಿಗಳು ಹಾಗೂ ಸೊಪ್ಪುಗಳಿಂದ ಮಧುಮೇಹಿಗಳಿಗೆ ಒದಗಿದರೆ ಸೂಕ್ತ.

ಸಸಾರಜನಕ : ಪ್ರತಿ 1ಗ್ರಾಂ ಸಸಾರಜನಕ ೪ ಕ್ಯಾಲೊರಿಗಳನ್ನು ಒದಗಿಸುತ್ತದೆ. ಸಕ್ಕರೆ ರೋಗಿಗಳು ಸಾಕಷ್ಟು ಪ್ರಮಾಣದಲ್ಲಿ ಸಸಾರಜನಕ ಸೇವಿಸಬೇಕು. ಆದರೆ ಅತಿ ಹೆಚ್ಚಾದ ಸಸಾರಜನಕದ ಸೇವನೆ ರೋಗಿಗಳಲ್ಲಿ ಮೂತ್ರಪಿಂಡದ ತೊಂದರೆಯನ್ನುಂಟು ಮಾಡುವುದಾಗಿ ತಿಳದುಬಂದಿದೆ. ಆದ್ದರಿಂದ ಸಸಾರಜನಕದ ಪ್ರಮಾಣ ಕಡಿಮೆ ಮಾಡಬೇಕಾದ್ದು ಒಳ್ಳೆಯದು. ಪ್ರಾಣಿಮೂಲ ಸಸಾರಜನಕ ಸಸ್ಯಮೂಲ ಸಸಾರಜನಕಕ್ಕಿಂತ ಸುಲಭವಾಗಿ ಪಚನಗೊಳ್ಳುತ್ತದೆ. ದೇಹಕ್ಕೆ ಅವಶ್ಯಕವಾದ ಕ್ಯಾಲೊರಿಯ ಪ್ರಮಾಣದ ಶೇ.20ರಷ್ಟು ಭಾಗ ಸಸಾರಜನಕ ಸೇವಿಸಿದರೆ ಸಾಕು.
ಕೊಬ್ಬು : ಆಹಾರದಲ್ಲಿರುವ ಪ್ರತಿ 1ಗ್ರಾಂ ಕೊಬ್ಬು 9 ಕ್ಯಾಲೊರಿಗಳನ್ನು ಕೊಡಬಲ್ಲದು. ಹೀಗಾಗಿ ಆಹಾರದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರಬೇಕಾದುದು ಅವಶ್ಯ. ಕೊಬ್ಬಿನ ಪ್ರಮಾಣದಷ್ಟೇ ಅದರ ರೂಪ ಸಹ ಅತಿ ಮುಖ್ಯ. ಅಸಂತೃಪ್ತ ಮೇದೋಆಮ್ಲಗಳನ್ನು ಹೊಂದಿರುವ ಸಸ್ಯಮೂಲ ತೈಲಗಳನ್ನು ಉಪಯೋಗಿಸಬೇಕು. ಸಂತೃಪ್ತ ಮೇದೋಆಮ್ಲಗಳನ್ನು ಜಾಸ್ತಿಯಾಗಿ ಒಳಗೊಂಡಿರುವ ವನಸ್ಪತಿ, ಬೆಣ್ಣೆ, ತುಪ್ಪ ಹಾಗೂ ಪ್ರಾಣಿ ಮೂಲ ಕೊಬ್ಬುಗಳನ್ನು ಬಳಸುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಹೃದಯ ಸಂಬಂಧಿತ ತೊಂದರೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಇದರಿಂದ ಬೊಜ್ಜು ಸಹ ಜಾಸ್ತಿಯಾಗಿ ಇನ್ಸುಲಿನ್ ಕಾರ್ಯಕ್ಕೆ ಪ್ರತಿರೋಧವನ್ನುಂಟು ಮಾಡುತ್ತದೆ. ಮಧುಮೇಹ ರೋಗಿಗಳು ತೆಗೆದುಕೊಳ್ಳುವ ಒಟ್ಟು ಕ್ಯಾಲೊರಿಯಲ್ಲಿ ಕೊಬ್ಬಿನ ಪ್ರಮಾಣ ಶೇ.20ರಷ್ಟಿರಬೇಕು. ಅಸಂತೃಪ್ತ ಮತ್ತು ಸಂತೃಪ್ತ ಮೇದೋಆಮ್ಲಗಳು 2:1ಪ್ರಮಾಣದಲ್ಲಿರಬೇಕು. ದೈನಂದಿನ ಆಹಾರದಲ್ಲಿ ಕೊಲೆಸ್ಟ್ರಾಲ್ 3೦ ಮಿ.ಗ್ರಾಂಗಿಂತ ಕಡಿಮೆ ಇರಬೇಕು.

ಮಧುಮೇಹಿಗಳಿಗೆ ಆಹಾರ ಸೂಚಿ:
ಅ) ಬಳಸಬಹುದಾದ ಆಹಾರಗಳು
ಆ) ಮಿತವಾಗಿ ಬಳಸಬಹುದಾದ ಆಹಾರಗಳು
ಇ) ವರ್ಜಿಸಬೇಕಾದ ಆಹಾರಗಳು.
೧. ಧಾನ್ಯಗಳು
ಅ) ರಾಗಿ,ಗೋಧಿ,ನವಣೆ
ಆ) ಅಕ್ಕಿ, ಮೈದಾಹಿಟ್ಟು
ಇ) ಕೇಕ್, ಬಿಸ್ಕತ್ತುಗಳು, ನೂಡಲ್
೨. ಬೇಳೆಕಾಳುಗಳು
ಅ) ಎಲ್ಲಾ ತರಹದ ಬೇಳೆಕಾಳುಗಳು
ಆ) ಮೊಳಕೆಯೊಡೆದ ಕಾಳುಗಳು
೩. ಎಣ್ಣೆ ಮತ್ತು ಕೊಬ್ಬು
ಅ) ಅಸಂತೃಪ್ತ ಮೇದೋಆಮ್ಲಗಳನ್ನು ಹೊಂದಿರುವ ಎಣ್ಣೆಯ ಮಿತ ಬಳಕೆ
ಆ) ಕೊಬ್ಬಿನ ಮಿತ ಸೇವನೆ
ಇ) ಕರಿದ ತಿಂಡಿ, ಚೀಸ್, ಬೆಣ್ಣೆ, ತುಪ್ಪ, ವನಸ್ಪತಿ
೪. ತರಕಾರಿ ಮತ್ತು ಹಣ್ಣುಗಳು
ಅ) ಸೊಪ್ಪು, ನಿಂಬೆ, ಈರುಳ್ಳಿ, ಪುದೀನ, ಹಸಿ ತರಕಾರಿಗಳು
ಆ) ಗೆಡ್ಡೆಗೆಣಸುಗಳು
ಇ) ಒಣಗಿಸಿದ ಹಣ್ಣುಗಳು, ಹಣ್ಣಿನ ಷರಬತ್ತು, ಪಾಕದಲ್ಲಿ ಹಾಕಿ ಡಬ್ಬೀಕರಿಸಿದ ಹಣ್ಣು, ಬಾಳೆ ಹಾಗೂ ಆಲೂಗಡ್ಡೆ ಚಿಪ್ಸ್.
೫. ಹಾಲಿನ ಪದಾರ್ಥಗಳು
ಅ) ಕೊಬ್ಬು ರಹಿತ ಹಾಲು ಮತ್ತು ಮಜ್ಜಿಗೆ
ಆ) ಸಾಂದ್ರೀದರಿಸಿದ ಹಾಲು, ಕೆನೆ, ಬೆಣ್ಣೆ, ಕೋವ, ಕೊಬ್ಬು ತೆಗೆಯದ ಹಾಲು
೬. ಮೊಟ್ಟೆ ಮತ್ತು ಮಾಂಸ
ಅ) ಮೊಟ್ಟೆಯ ಬಿಳಿ ಭಾಗ, ಮೀನು
ಆ) ಚರ್ಮರಹಿತ ಕೋಳಿ
ಇ) ಮಾಂಸ, ಮೊಟ್ಟೆಯ ಹಳದಿಭಾಗ, ಸೀಗಡಿ, ಎಣ್ಣೆಯಲ್ಲಿ ಕರಿದ ಖಾದ್ಯಗಳು
೭. ಸಕ್ಕರೆ ಹಾಗೂ ಸಿಹಿ ಪದಾರ್ಥಗಳು
ಅ) ಕೃತಕ ಸಕ್ಕರೆ
ಆ) ಸಕ್ಕರೆ, ಬೆಲ್ಲ, ಜೇನು, ಜಾಮ್, ಜೆಲ್ಲಿ, ಚಾಕೊಲೇಟ್‌ಗಳು, ಐಸ್‌ಕ್ರೀಂ
೮. ಪಾನೀಯಗಳು
ಅ) ಸಕ್ಕರೆ ರಹಿತ ತಾಜಾ ಹಣ್ಣಿನ ರಸ, ಚಹ ಹಾಗೂ ತರಕಾರಿಗಳ ಸೂಪ್
ಆ) ತಂಪು ಪಾನೀಯಗಳು
ಇ) ಮದ್ಯ, ಸಿಹಿ ಪಾನೀಯಗಳು ಹಾಗೂ ಹಣ್ಣಿನರಸ
ಅ) ಉಪ್ಪು ಆದಷ್ಟು ಕಡಿಮೆ ಹಾಕಿದ ಆಹಾರ
ಆ) ಸೋಡಿಯಂ ಅಂಶ ಸ್ವಲ್ಪ ಹೆಚ್ಚು ಇರುವ ಪ್ರಾಕೃತಿಕ ಆಹಾರ
ಇ) ಉಪ್ಪಿನಕಾಯಿ, ಉಪ್ಪು ಹೆಚ್ಚಿರುವ ತಿಂಡಿ, ಒಣಮೀನು, ಡಬ್ಬೀಕರಿಸಿದ ಆಹಾರ, ಚಟ್ನಿಗಳು, ಕೆಚಪ್‌ಗಳು, ಉಪ್ಪು ಹಾಕಿರುವ ಬೆಣ್ಣೆ, ಚೀಸ್ ಮತ್ತು ಚಿಪ್ಸ್.

ಪ್ರೀಯಾ ಓದುಗರೆ ನಿಮಗೆ ಈ ಲೇಖನ ಇಷ್ಟವಾದರೇ . ಇದನ್ನು ಇತರಿಗೆ ಶೇರ್ ಮಾಡಿ ಅವರು ಇದರ ಉಪಯೋಗವನ್ನು ಪಡೆಯುವಂತೆ ಸಹಕರಿಸಿ.

Comments are closed.