
ಈ ಸ್ಥಳದಲ್ಲಿ ಇದು ಈ ವಾರದಲ್ಲಿ ಎರಡನೇ ಅಪಘಾತ… ತಿಂಗಳಲ್ಲಿ ಐದನೇ ಅಪಘಾತ…
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಕಾಪಿಕಾಡ್ ನಿಂದ ಕುಂಟಿಕಾನ್ ಗೆ ತೆರಳುವ ರಸ್ತೆಯ ಕುಂಟಿಕಾನ್ ಸಮೀಪದ ತಿರುವಿನಲ್ಲಿ ವೇಗವಾಗಿ ಬಂದ ಕೆ.ಎ. 19 ಎಮ್ ಸಿ 5699 ನಂಬರಿನ ಮಾರುತಿ ರಿಡ್ಜ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂಪೌಂಡ್ ನಲ್ಲಿ ಪಲ್ಟಿಯಾಗಿ ಬಿದ್ದಿದೆ.
ಮಂಗಳವಾರ ತಡ ರಾತ್ರಿ ಅಥವಾ ಬುಧವಾರ ಮುಂಜಾನೆ 1.30 ರ ಸುಮಾರಿಗೆ ಈ ಘಟನೆ ನಡೆದಿರ ಬೇಕೆಂದು ಶಂಕಿಸಲಾಗಿದೆ. ಆದರೆ ಕಾರಿನಲ್ಲಿ ಎಷ್ಟು ಮಂದಿ ಇದ್ದರು. ಯಾರಿಗೆ ಎನಾಗಿದೆ ಎಂಬ ಯಾವೂದೇ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ಬಳಿಕ ಕಾರಿನ ಮಾಲಕ (ಚಾಲಕ) ಸ್ಥಳದಿಂದ ಕಾಲ್ಕಿತ್ತಿದ್ದು, ಇಂದು ಬೆಳಿಗೆಯಾದರೂ ಪತ್ತೆಯಾಗಿಲ್ಲ.
ಸ್ಥಳಕ್ಕೆ ಠಾಣಾ ಉರ್ವಾ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕಾರನ್ನು ಸ್ಥಳದಿಂದ ತೆರವುಗೊಳಿಸಲು ಪೊಲೀಸರ ಜೊತೆ ಆಗಮಿಸಿ ಕ್ರೈನ್ ಚಾಲಕನ ಜೊತೆ ಮೊಬೈಲ್ ಸಂಭಾಷಣೆ ನಡೆಸಿದ ಕಾರು ಮಾಲಕ ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ. ಬೆಳಿಗ್ಗೆ 9.30ರ ವರೆಗೆ ಕಾರು ಮಾಲಕನಿಗಾಗಿ ಕಾದಿದ್ದ ಪೊಲೀಸರು ಬಳಿಕ ಮಾಲಕನ ಅನುಪಸ್ಥಿತಿಯಲ್ಲಿ ಕಾರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.

ಈ ಸ್ಥಳದಲ್ಲಿ ಇದು ವಾರದಲ್ಲಿ ಎರಡನೇ… ತಿಂಗಳಲ್ಲಿ ಐದನೇ ಅಪಘಾತ :
ಇದೇ ಸ್ಥಳದಲ್ಲಿ ಐದು ದಿನಗಳ ಹಿಂದೆ ಬೆಳಿಗ್ಗೆ 9 ಗಂಟೆಗೆ ವೇಗವಾಗಿ ಬಂದ ಸ್ಕೋಡಾ ಕಾರೊಂದು ಮುಂದಿನಿಂದ ಚಲಿಸುತ್ತಿದ್ದ ಮಹಿಳೆಯೊಬ್ಬರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದ್ವಿಭಾಜಕ್ಕೆ ಡಿಕ್ಕಿ ಹೊಡೆದು ಮತ್ತೆ ವಾಪಸ್ಸು ಕಾರು ಬಂದ ದಿಕ್ಕಿಗೆ ಮುಖ ಮಾಡಿ ನಿಂತಿತ್ತು.

ಈ ಅಪಘಾತದಲ್ಲಿ ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಆಗಿತ್ತು. ಕಾರು ಎಷ್ಟು ವೇಗವಾಗಿತ್ತು ಎಂದರೆ ಕಾರಿನ ಎರಡೂ ಏರ್ ಬ್ಯಾಗ್ ಓಪನ್ ಆಗಿತ್ತು. ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು. ಆದರೆ ದ್ವಿಚಕ್ರದಲ್ಲಿ ಚಲಿಸುತ್ತಿದ್ದ ಮಹಿಳೆ ಕಾರು ಡಿಕ್ಕಿ ಹೊಡದ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದಿದ್ದು, ಸೊಂಟ ಹಾಗೂ ಕಾಲಿಗೆ ಗಂಭೀರ ಪ್ರಮಾಣದ ಏಟಾಗಿತ್ತು.
ಎರಡು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಬೈಕ್ ಸವಾರನೊಬ್ಬ ರಸ್ತೆ ದ್ವಿಭಾಜಕ್ಕೆ ಡಿಕ್ಕಿ ಹೊಡೆದು ಬಿದ್ದು ಮೈಮೂಳೆ ಮುರಿದು ಕೊಂಡಿದ್ದಾನೆ.
ಅಪಘಾತ ವಲಯ ಎಂದು ಘೋಷಿಸಲು ಸ್ಥಳೀಯರ ಆಗ್ರಹ :
ಈ ಸ್ಥಳದಲ್ಲಿ ಈಗಾಗಲೇ ಹಲವಾರು ಅಪಘಾತಗಳು ನಡೆದಿದ್ದು, ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಬೈಕ್ ಸವಾರನೋರ್ವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದ. ಅಪಘಾತದ ಪರಿಣಾಮ ವಿದ್ಯುತ್ ಕಂಬದಲ್ಲಿ ಅಳವಡಿಸಲಾದ ಕೇಬಲ್ ಪೈಪ್ ಮುರಿದು ಬಿದ್ದಿದ್ದು, ಇಂದಿಗೂ ಅದರ ದುರಸ್ಥಿ ನಡೆದಿಲ್ಲ.

ಈ ಸ್ಥಳ ತಿರುವಿನಿಂದ ಕೂಡಿದ್ದು, ರಸ್ತೆ ಪಕ್ಕದಲ್ಲೇ ಚರಂಡಿಯಿದೆ.ಇಲ್ಲಿ ಅತೀ ವೇಗವಾಗಿ ಬರುವ ವಾಹನ ಸವಾರರಿಗೆ ವಾಹನವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕೂಡಲೇ ಈ ಸ್ಥಳದಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ರಾತ್ರಿ ಹೊತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ರಿಫ್ಲೆಕ್ಟರ್ ಹಾಕಬೇಕು. ಹಾಗೂ ಈ ಸ್ಥಳವನ್ನು ಅಪಘಾತ ವಲಯ ಎಂದು ಘೋಷಿಸ ಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.
Comments are closed.