ಮಂಗಳೂರು: ಹಿಂದು ಸಂಪ್ರದಾಯದಲ್ಲಿ ಎಳ್ಳಿಗೆ ಮಹತ್ವದ ಸ್ಥಾನವಿದೆ. ಅಗಲಿದವರಿಗೆ ತರ್ಪಣ ನೀಡುವಾಗಲೂ ಎಳ್ಳನ್ನು ಬಳಸುತ್ತೇವೆ. ತಿಲೋದಕ ಮೋಕ್ಷಕ್ಕೆ ದಾರಿ ಎಂಬ ನಂಬಿಕೆ ನಮ್ಮದು. ಚಿಕ್ಕದಾದರೂ ಮಹತ್ವದ ಸಾಂಬಾರ ಪದಾರ್ಥವಾಗಿ ಹೆಸರು ಪಡೆದ ಎಳ್ಳು ರುಚಿಗೂ ಸೈ. ಒಗ್ಗರಣೆಗೆ ಚಿಟಕಿ ಎಳ್ಳು ಹಾಕಿದರೆ ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹಿತ! ಇಂಥ ಎಳ್ಳು ಸಾಕಷ್ಟು ಉಪಯೋಗಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ.
* ಎಳ್ಳಿನಲ್ಲಿರುವ ಮ್ಯಾಗ್ನೇಶಿಯಂ ಮತ್ತು ಇನ್ನಿತರ ಪೋಷಕಾಂಶಗಳು ಮಧುಮೇಹವನ್ನು ಹತೋಟಿಗೆ ತರುವಲ್ಲಿ ಸಹಕಾರಿಯಾಗಿದೆ. ಇದು ಪ್ಲಾಸ್ಮಾ ಗ್ಲುಕೋಸ್‌ಅನ್ನು ಹೆಚ್ಚಿಸುವ ಕಾರಣ ಅಧಿಕ ರಕ್ತದೊತ್ತಡದಿಂದ ಬಳಲುವವರಿಗೆ ಸಹ ಎಳ್ಳಿನಿಂದ ಉಪಯೋಗವಿದೆ.
* ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ತಿಂದ ಆಹಾರ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೈಹಿಕ ಕ್ರಿಯೆಗಳೆಲ್ಲ ಸರಾಗವಾಗಿ ಆಗುತ್ತವೆ.
*ಎಳ್ಳಿನಲ್ಲಿರುವ ಸತುವಿನ ಅಂಶ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಚರ್ಮದ ಆರೋಗ್ಯವನ್ನು ಕಾಪಾಡುವ ಜೀವಕೋಶಗಳು ಹಾನಿಯಾಗಿದ್ದಲ್ಲಿ ಅವನ್ನೆಲ್ಲ ಸ್ವಾಸ್ಥ್ಯಪೂರ್ಣವಾಗುವಂತೆ ಮಾಡುವಲ್ಲಿಯೂ ಎಳ್ಳಿನ ಪಾತ್ರ ಮಹತ್ವದ್ದು.
* ಸೂರ್ಯನ ಕಿರಣದಿಂದ ನಿಮ್ಮ ಚರ್ಮ ಬಹುಬೇಗನೇ ಕಪ್ಪಾಗುತ್ತಿದೆ ಅನ್ನಿಸಿದರೆ ಎಳ್ಳನ್ನು ಸೇವಿಸಿ. ದೇಹಕ್ಕೆ ಅಗತ್ಯವಿರುವಷ್ಟು ಎಳ್ಳನ್ನು ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದು, ಬಹುಬೇಗನೆ ಕಪ್ಪಾಗುವುದು ನಿಲ್ಲುತ್ತದೆ.
*ಎಳ್ಳಿನ ಎಣ್ಣೆಯನ್ನು ಲೇಪಿಸಿಕೊಳ್ಳುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಕೂದಲು ಕಾಂತಿಯುಕ್ತವೂ, ದಟ್ಟವೂ ಆಗುತ್ತದೆ.
* ಸತು, ಕ್ಯಾಲ್ಷಿಯಂ, ಪಾಸ್ಪರಸ್‌ಗಳ ಆಗರವೇ ಆಗಿರುವ ಎಳ್ಳಿನ ಸೇವನೆಯಿಂದ ಮೂಳೆಯ ಆರೋಗ್ಯ ಹೆಚ್ಚುತ್ತದೆ. ದುರ್ಬಲ ಮೂಳೆಗಳು ಸದೃಢವಾಗುತ್ತವೆ.
*ಗಾಯದಿಂದಾಗಿ ಮೂಳೆಗೇನಾದರೂ ಏಟಾಗಿದ್ದರೆ ಎಳ್ಳಿನ ಸೇವನೆಯಿಂದ ಸುಸ್ಥಿತಿಗೆ ಬರುತ್ತದೆ.
*ಆರ್ಥರೈಟಿಸ್, ಆಸ್ಟೋಪೊರೋಸಿಸ್ ಸಮಸ್ಯೆಯಿಂದ ಬಳಲುತ್ತಿರು ವವರಿಗೆ ಸಹ ಎಳ್ಳು ಉತ್ತಮ ಪರಿಹಾರ.
* ಶ್ವಾಸಕೋಶವನ್ನು ಶುದ್ಧಿಗೊಳಿಸುವಲ್ಲಿಯೂ ಎಳ್ಳಿನ ಪಾತ್ರ ಹಿರಿದು. ಅಸ್ತಮಾ ಸಮಸ್ಯೆಯಿಂದ ಬಳಲುವವರಿಗೂ ಎಳ್ಳಿನ ಸೇವನೆ ಒಳ್ಳೆಯದು.
* ಹಲ್ಲಿನ ಆರೋಗ್ಯವನ್ನು ಹೆಚ್ಚಿಸಿ, ದಂತಪಂಕ್ತಿಗಳು ಗಟ್ಟಿಯಾಗುವಂತೆ ಮಾಡುವಲ್ಲಿಯೂ ಎಳ್ಳು ಸಹಕಾರಿ.
* ಎಳ್ಳಿನ ಸೇವನೆಯಿಂದ ಸುಸ್ತು ಕಡಿಮೆಯಾಗುವುದಲ್ಲದೆ, ದೇಹದ ಶಕ್ತಿ ಹೆಚ್ಚುತ್ತದೆ.
ಈ ಎಲ್ಲವೂ ಎಳ್ಳಿನ ಉಪಯೋಗ. ಆದರೆ ಎಳ್ಳನ್ನು ಮಿತವಾಗಿ ಸೇವಿಸ ಬೇಕು. ಅಗತ್ಯಕ್ಕಿಂತ ಹೆಚ್ಚು ಸೇವನೆ ಆರೋಗ್ಯಕ್ಕೆ ಹಾನಿಕರ.