
ಮಂಗಳೂರು: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2016-2017ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಶ್ರೀ ದುರ್ಗೆಯ ಸನ್ನಿಧಿಯಲ್ಲಿ ಆರು ಮೇಳದ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಚಾಲನೆ ನೀಡಿದರು. ನಂತರ. ಕಲಾವಿದರು ಶ್ರೀ ದೇವಿಯ ಸನ್ನಿದಿಯಲ್ಲಿ ಗೆಜ್ಜೆ ಕಟ್ಟಿ ಕುಣಿದು ಸೇವೆಯನ್ನು ಪ್ರಾರಂಭಿಸಿದರು
ಆರು ಮೇಳಗಳ ದೇವರ ಪೆಟ್ಟಿಗೆ, ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳಿಗೆ ದೇವಳದಲ್ಲಿ ಪೂಜೆ ಬಳಿಕ ಶಾಲಾ ಸರಸ್ವತಿ ಸದನದಲ್ಲಿನ ಚೌಕಿಯಲ್ಲಿ ಪೂಜೆ ನಡೆಯಿತು. ಬಳಿಕ ದೇವಳದ ರಥ ಬೀದಿಯಲ್ಲಿ ನಿರ್ಮಿಸಿದ ಆರು ರಂಗಸ್ಥಳಗಳಲ್ಲಿ ಬಯಲಾಟ ನಡೆಯಿತು.
ಗುರುವಾರ ಕಟೀಲಿನಲ್ಲಿ ಸೇವೆಯಾಟ ನಡೆದು, ಇಂದಿನಿಂದ ತಿರುಗಾಟ ಆರಂವಾಗುತ್ತದೆ, 6 ಮೇಳಗಳು ಸುಮಾರು 6 ತಿಂಗಳ ಕಾಲ ತಿರುಗಾಟ ನಡೆಸಲಿದೆ.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಡಾ. ರವೀಂದ್ರನಾಥ ಪೂಂಜಾ, ವೇದವ್ಯಾಸ ತಂತ್ರಿ, ದೇವಳದ ಪ್ರಬಂಧಕ ವಿಜಯಕುಮಾರ್ ಶೆಟ್ಟಿ, ಮೇಳಗಳ ಮೆನೇಜರುಗಳು, ಕಲಾವಿದರು ಹಾಗೂ ಕಟೀಲು ಕ್ಷೇತ್ರಕ್ಕೆ ಸಂಬಂಧ ಪಟ್ಟ ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments are closed.