ಕರಾವಳಿ

ಶ್ರೀ ಕ್ಷೇತ್ರ ಧರ್ಮಸ್ಥಳ : ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಚಾಲನೆ

Pinterest LinkedIn Tumblr

dharmasthala-eximission

ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾಸ್ಥಳ ಧರ್ಮಸ್ಥಳದಲ್ಲಿ ಗುರುವಾರ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ನ. 24ರಿಂದ 29ರ ವರೆಗೆ ಲಕ್ಷದೀಪೋತ್ಸವ ನಡೆಯಲಿದೆ. ನ. 27ರಂದು ಸರ್ವಧರ್ಮ ಸಮ್ಮೇಳನ ಮತ್ತು 28ರಂದು ಸೋಮವಾರ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಗುರುವಾರ ಪ್ರದರ್ಶನವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳವು ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸುತ್ತಿದ್ದು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ದುರ್ಬಲರ ಬಲವರ್ಧನೆ ಮಾಡಲಾಗುತ್ತಿದೆ. ಜೊತೆಗೆ ಕ್ಷೇತ್ರದ ಇತರ ಸಾಮಾಜಿಕ ಚಟುವಟಿಕೆಗಳು ಶ್ಲಾಘನೀಯವಾಗಿವೆ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾತ್ರೆಯ ಸಂದರ್ಭ ಜ್ಞಾನದಾನ ಈ ವಸ್ತುಪ್ರದರ್ಶನದ ಮುಖ್ಯ ಉದ್ದೇಶ. ಕೆಲವು ದಶಕಗಳ ಹಿಂದೆ ಜಾತ್ರೆ ಎಂದರೆ ದಾರಿ ತಪ್ಪಿಸುವ ತಾಣವಾಗಿತ್ತು. ಈಗಿನಂತೆ ಮನೋರಂಜನೆ ಇಲ್ಲದೆ ಇತರ ಚಟುವಟಿಕೆಗಳೇ ಜಾಸ್ತಿಯಾಗಿತ್ತು. ಆದರೆ ಈಗ ಜಾತ್ರೆಯ ವಿಕೃತಿ ತಪ್ಪಿ ಹೋಗಿದೆ. ಧಾರ್ಮಿಕ ಕ್ರಾಂತಿ ಆಗಿದೆ. ಬೀಡಿ, ಸಿಗರೇಟ್‌ ಹೊಗೆ ಕಡಿಮೆಯಾಗಿ ಅಗರಬತ್ತಿಯ ಸುವಾಸನೆಯ ಧೂಮ ಮಾತ್ರ ಕಾಣಿಸುತ್ತಿದೆ. ಶಿಸ್ತು, ಸದಾಚಾರ, ಸತ್ಕರ್ಮ, ಸಂಸ್ಕಾರಯುತ ಕರ್ಮಗಳು ಜಾರಿಯಾದಾಗ ಜಾತ್ರೆಗೊಂದು ಕಳೆ ಬರುತ್ತದೆ ಎಂದು ಹೆಗ್ಗಡೆಯವರು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಿನಿ ಡಾಕ್ಯುಮೆಂಟರಿಯನ್ನು ಬಿಡುಗಡೆಗೊಳಿಸಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಉಪಸ್ಥಿತರಿದ್ದರು.ಉಪನ್ಯಾಸಕ ಸುವೀರ್‌ ಜೈನ್‌ ನಿರ್ವಹಿಸಿ, ಉಪನ್ಯಾಸಕ ಸುನಿಲ್‌ ಪಂಡಿತ್‌ ಸ್ವಾಗತಿಸಿದರು. ರುಡ್‌ಸೆಟ್‌ ಸಂಸ್ಥೆಯ ತರಬೇತಿ ಉಪನ್ಯಾಸಕ ಜೇಮ್ಸ್‌ ವಂದಿಸಿದರು.

ಕಾರ್ಯಕ್ರಮಗಳ ವಿವರ :

ನ. 26ರಂದು ಲಲಿತಕಲಾ ಗೋಷ್ಠಿ ನಡೆಯಲಿದ್ದು, ಆನೂರು ಅನಂತಕೃಷ್ಣ ಶರ್ಮ ಅವರ ಲಯ-ಲಾವಣ್ಯ ಸೇರಿದಂತೆ ಸಂಗೀತ ನೃತ್ಯ ನಾಟಕ ವೈವಿಧ್ಯ ನಡೆಯಲಿದೆ.

ನ. 27ರ ರವಿವಾರ ಸಂಜೆ 5ಕ್ಕೆ ಸರ್ವಧರ್ಮ ಸಮ್ಮೇಳನವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ. ಗೋಪಾಲ ಗೌಡ ಉದ್ಘಾಟಿಸುವರು. ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ಶ್ರೀಮನ್ಹಾರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

ಹೊಸದಿಲ್ಲಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಪ್ರಾಕೃತ ವಿಭಾಗದ ಮುಖ್ಯಸ್ಥ ಡಾ| ಜಯಕುಮಾರ್‌ ಉಪಾಧ್ಯೆ, ಪುತ್ತೂರಿನ ಯಕ್ಷಗಾನ ಕಲಾವಿದ ಜಬ್ಟಾರ್‌ ಸಮೊ ಸಂಪಾಜೆ ಮತ್ತು ಧಾರವಾಡದ ವಿದ್ಯಾ ನಿಕೇತನದ ನಿರ್ದೇಶಕ ಫಾ| ಪ್ರಶಾಂತ್‌ ಡಿ’ಸೋಜಾ ಧಾರ್ಮಿಕ ಉಪನ್ಯಾಸ ನೀಡುವರು. ಚೆನ್ನೈನ ಗಾಯತ್ರಿ ಗಿರೀಶ್‌ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ನ. 28ರಂದು ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಸಾಹಿತಿ ಎಂ.ಎನ್‌. ವ್ಯಾಸ ರಾವ್‌ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ವಸುಧೇಂದ್ರ, ಸುಳ್ಯದ ಡಾ| ವೀಣಾ ಮತ್ತು ವಿಜಯವಾಣಿ ಪ್ರಧಾನ ಸಂಪಾದಕ ಬೆಂಗಳೂರಿನ ಹರಿಪ್ರಕಾಶ್‌ ಕೋಣೆಮನೆ ಉಪನ್ಯಾಸ ನೀಡುವರು. ಖ್ಯಾತ ಸಿನಿ ತಾರೆ ಶೋಭನಾ ಮತ್ತು ತಂಡದ ಕಲಾವಿದರಿಂದ ಗೀತ ಗೋವಿಂದ ನೃತ್ಯ ಪ್ರದರ್ಶನವಿದೆ.

ನ. 29ರಂದು ಮಂಗಳವಾರ ಭಗವಾನ್‌ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಸಮಾಪನಗೊಳ್ಳಲಿದೆ.

Comments are closed.