ಕರಾವಳಿ

ಕಂಬಳ ನಿಷೇಧದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ – ಜನಾಂದೋಲನಕ್ಕೆ ಸಿದ್ದತೆ

Pinterest LinkedIn Tumblr

Mulki_Kambala_Notice_1

ಮಂಗಳೂರು, ನ.25 : ಕಂಬಳ ನಿಷೇಧದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಬೃಹತ್ ಜನಾಂದೋಲನ ಪ್ರತಿಭಟನೆ ನಡೆಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ.

ಕಂಬಳ ಕ್ರೀಡೆಗೆ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಖಂಡಿಸಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿಯು ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು, ಸಂಸತ್‌ನಲ್ಲಿ ನಿಯಮ ತಿದ್ದುಪಡಿಗೆ ಒತ್ತಾಯ ಹೇರಲು ಹಾಗೂ ಜಿಲ್ಲೆಯಲ್ಲಿ ಬೃಹತ್ ಜನಾಂದೋಲನ ಪ್ರತಿಭಟನೆ ನಡೆಸಲು ನಗರದಲ್ಲಿ ಜಿಲ್ಲಾ ಕಂಬಳ ಸಮಿತಿಯು ಅಧ್ಯಕ್ಷ ಶಾಂತಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿಭಟನೆಯ ಮುಂದಿನ ಕ್ರಮದ ಕುರಿತಂತೆ ಮಿಯಾರಿನ ಕಂಬಳ ಗದ್ದೆಯಲ್ಲಿ ನವೆಂಬರ್ 27ರಂದು ಮಧ್ಯಾಹ್ನ ಮೂರು ಗಂಟೆಗೆ ಸಭೆ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆ ಕಂಬಳ ನಡೆಸುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕಂಬಳ ಸಮಿತಿಯು ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅಕವಾಶವಿದ್ದಲ್ಲಿ ಮನವಿ ಸಲ್ಲಿಸಲಾಗುವುದು. ಅಲ್ಲದೆ ಆರು ಜನರ ನಿಯೋಗಿ ದಿಲ್ಲಿಗೆ ತೆರಳಿ ಪರಿಸರ ಖಾತೆ ಹಾಗೂ ಸಂಬಂಧಪಟ್ಟ ಸಚಿವರಲ್ಲಿ ಈ ಬಗ್ಗೆ ಬೇಡಿಕೆ ಸಲ್ಲಿಸಿ, ಪ್ರಸ್ತುತ ಒಂದು ನಿಯಮದಡಿಯಿರುವ ಜಲ್ಲಿಕಟ್ಟು, ಎತ್ತಿನಗಾಡಿ ಓಟ ಹಾಗೂ ಇತರೆ ಗ್ರಾಮೀಣ ಕ್ರೀಡೆಯಿಂದ ಕಂಬಳವನ್ನು ಪ್ರತ್ಯೇಕಿಸಲು ಬಾಕಿ ಇರುವ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸುವಂತೆ ಹಾಗೂ ಇದು ಸಾಧ್ಯವಾಗದಿದ್ದಲ್ಲಿ ಮುಂದಿನ ಅಧಿವೇಶನದಲ್ಲಿ ಮಂಡಿಸಲು ಒತ್ತಾಯ ಹೇರುವ ಬಗ್ಗೆ ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳದ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದರು. ಕಂಬಳ ಉಳಿಸಲು ಪ್ರತಿಯೊಂದು ರೀತಿಯ ಹೋರಾಟಕ್ಕೂ ಬೆಂಬಲ ನೀಡುವುದಾಗಿ ಕಂಬಳ ಸಮಿತಿ ಸದಸ್ಯರು ಘೋಷಿಸಿದರು.

ಕಂಬಳ ನಿಷೇಧದ ಬಿಸಿಯನ್ನು ರಾಜ್ಯ ಹಾಗೂ ಕೇಂದ್ರಕ್ಕೆ ತಟ್ಟಿಸಲು ನಿಟ್ಟಿನಲ್ಲಿ ಉಭಯ ಜಿಲ್ಲೆಗಳಿಂದ ಕಂಬಳ ಪ್ರೇಮಿಗಳು ಒಗ್ಗೂಡಿಸಲು ಜನಾಂದೋಲನ ಮೂಲಕ ಬೃಹತ್ ಪ್ರತಿಭಟನೆಯನ್ನು ನಡೆಸುವಂತೆ ಸಮಿತಿ ಸದಸ್ಯರು ಒಕ್ಕೊರಲಿನಿಂದ ನಿರ್ಧರಿಸಿದರು. ಪ್ರಾರಂಭದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಲತಿಭಟನೆ ನಡೆಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.

ಆದರೆ ಪ್ರತಿಭಟನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಹಲವರ ಅಭಿಪ್ರಾಯದ ಮೇರೆಗೆ ಮಂಗಳೂರಿನಲ್ಲಿ ನಡೆಸಲ ಹಾಗೂ ಈ ಪ್ರತಿಭಟನೆಗೆ ಬೆಂಬಲದ ರೂಪದಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಮತ್ತು ಜಾತ್ಯತೀತವಾಗಿ ಆಹ್ವಾನಿಸಲು ನಿರ್ಧರಿಸಿದರು.

ಈ ಪ್ರತಿಭಟನೆಯಲ್ಲಿ ಸಮಾರು 250ರಿಂದ 300 ಜೋಡಿ ಕೋಣಗಳನ್ನು ಕರೆತರಲಾಗಿದ್ದು, ಸುಮಾರು ಒಂದು ಲಕ್ಷ ಜನ ಭಾಗವಹಿಸಲಿದ್ದಾರೆ. ನಗರದ ಪಂಪ್‌ವೆಲ್‌ನಿಂದ ಮೆರವಣಿಗೆಯ ರೂಪದಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ.

ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಸಂಚಾಲಕ ಸೀತಾರಾಂ ಶೆಟ್ಟಿ, ಕೋಶಾಧಿಕಾರಿ ಪಿಆರ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಕುಮಾರ್ ಮಾಡ, ಸಾಂಪ್ರದಾಯಿಕ ಕಂಬಳದ ಅಧ್ಯಕ್ಷ ಸುಧಾಕರ ಶೆಟ್ಟಿ, ರಾಜ್ಯ ಕ್ರೀಡಾ ರತ್ನ ಪುರಸ್ಕೃತ ಡಾ| ಜೀವಂಧರ್ ಬಲ್ಲಾಳ್ ಬಾರಾಡಿಬೀಡು, ಪುತ್ತೂರು ಕೋಟಿ ಚೆನ್ನಯ ಕಂಬಳದ ಚಂದ್ರಹಾಸ ಶೆಟ್ಟಿ, ನಿರಂಜನ ರೈ, ಅನಿಲ್ ಶೆಟ್ಟಿ, ನವೀನ್ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.

Comments are closed.