ಕರಾವಳಿ

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತಾಧಿಗಳು

Pinterest LinkedIn Tumblr

dharmasthala_deepotsava

ಬೆಳ್ತಂಗಡಿ : ದೇವಸ್ಥಾನಗಳು ಭಕ್ತರು ಮತ್ತು ಭಗವಂತನೊಂದಿಗೆ ಸಂಪರ್ಕ ಕಲ್ಪಿಸುವ ಕೇಂದ್ರಗಳಾಗಿವೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಿಕೊಂಡುಬರುವ ಕಾರ್ಯವನ್ನು ಮಾಡಬೇಕಾಗಿದೆ. ಸಮಾಜದಲ್ಲಿ ತಲೆಯೆತ್ತುವ ವಿಕೃತಿಗಳು ಮರೆಯಾಗಿ ಸಂಸ್ಕೃತಿ ನೆಲೆಸುವಂತಾಗಲು ದೇವರಲ್ಲಿ ನಂಬಿಯಿಟ್ಟು ಮುಂದುವರಿಯುವ ಅಗತ್ಯವಿದೆ. ನಾವು ಸಂಸ್ಕೃತಿಯನ್ನು ರಕ್ಷಿಸಿದರೆ ಸಂಸ್ಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಗುರುವಾರ ಸಂಜೆ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಉಜಿರೆಯಿಂದ ಧರ್ಮಸ್ಥಳದ ಸನ್ನಿಧಾನಕ್ಕೆ ಆಗಮಿಸಿದ ಸಾವಿರಾರು ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು.ಈ ಪಾದಯಾತ್ರೆ ಸ್ವಸ್ಥ ಸಮಾಜದ ರಚನೆಗಾಗಿ ನಡೆದಿದೆ. ಇದಕ್ಕೆ ಯೋಗ ಬೇಕು. ನಡೆಯುವ ಶಕ್ತಿಗೆ ಯೋಗದ ಬಲ ಬೇಕಿದ್ದರೆ ಭಗವಂತನ ದರ್ಶನಕ್ಕಾಗಿ ಪಾದಯಾತ್ರೆ ಮಾಡಲು ಮನೋಯೋಗ ಬೇಕು. ದಿನಾ ಪಾದಯಾತ್ರೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಭಗವಂತನ ಜತೆ ಸಂಬಂಧ ಬೆಳೆಸಲು ಪ್ರತಿ ಊರುಗಳಲ್ಲಿ ಧರ್ಮ ಕೇಂದ್ರದ ನಿರ್ಮಾಣ ನಡೆಯಿತು. ನಾವು ಅಂತಹ ಕೇಂದ್ರಗಳ ಮೂಲಕ ಭಗವಂತನ ಜತೆ ಸಂಪರ್ಕ ಸಾಧಿಸಬೇಕು. ನಮ್ಮಲ್ಲಿ ಜ್ಞಾನ ಬೆಳೆಯುತ್ತದೆ ಎಂದರು.

ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕು ಎಂಬ ಗುರಿಯೊಂದಿಗೆ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಇದು ಸಮಾಜಕ್ಕೆ ಒಳಿತನ್ನು ಮಾಡಲಿದೆ. ಸಮಾಜದಲ್ಲಿರುವ ಭೇದಭಾವಗಳು ಇಲ್ಲವಾಗಿ ಸಮಾನತೆ ಸಹೋದರತೆ ನೆಲೆಸುವಂತಾಗಬೇಕಾಗಿದೆ ಎಂದ ಅವರು, ಸ್ಥಳೀಯ ಜನರ ಪ್ರೀತಿ ವಿಶ್ವಾಸದಿಂದಾಗಿ ಇನ್ನೂ ಉತ್ತಮವಾದ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ.

ಬೆಳ್ತಂಗಡಿ ತಾಲೂಕನ್ನು ಆದರ್ಶ ತಾಲೂಕನ್ನಾಗಿ ರೂಪಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸೋಣ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿಟ್ಟ ಸ್ವಚ್ಛ ಗ್ರಾಮದ ಕಲ್ಪನೆ ನಮ್ಮ ಮನೆ ಗ್ರಾಮದಿಂದ ಆರಂಭವಾಗಬೇಕಾಗಿದೆ ಆಗ ದೇಶವೇ ಸ್ವಚ್ಚವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮಗೆ ಅಂತರಂಗ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು. ಭಾರತೀಯ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದರು. ಗಂಗಾಶುದ್ಧಿಗೆ ಹೊರಟರು. ಸ್ವತ್ಛ ಭಾರತ ಮೂಲಕ ನಿರ್ಮಲ ಮನಸ್ಥಿತಿ ಉಂಟು ಮಾಡಿದರು. ಈಗ ನೋಟು ರದ್ದತಿ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಇದು ಜೀವನಗಂಗೆಯನ್ನು ಶುದ್ಧಿಗೊಳಿಸುವ ಕಾರ್ಯ ಎಂದು ಹೆಗ್ಗಡೆಯವರು ಹೇಳಿದರು.

ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು. ಬಿ.ಕೆ. ಧನಂಜಯ ರಾವ್‌ ಸ್ವಾಗತಿಸಿ, ಕಿಶೋರ್‌ ಹೆಗ್ಡೆ ವಂದಿಸಿದರು. ಶ್ರೀನಿವಾಸ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

4 ನೇ ವರ್ಷದ ಪಾದಯಾತ್ರೆ

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ವಠಾರದಿಂದ ಸಾವಿರಾರು ಭಕ್ತರು ಪಾದಯಾತ್ರೆ ಆರಂಭಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಾ ಸಮಿತಿಯಿಂದ ನಮ್ಮ ನಡಿಗೆ ಭಗವಂತನ ಕಡೆಗೆ ಎಂಬ ಘೋಷಣೆಯೊಂದಿಗೆ ನಡೆದ 4 ನೇ ವರ್ಷದ ಪಾದಯಾತ್ರೆಯನ್ನು ಶ್ರೀ ಜನಾರ್ದನ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುವುದರ ಮೂಲಕ ಆರಂಭಿಸಲಾಯಿತು. ಪಾದಯಾತ್ರೆಯಲ್ಲಿ ತಾಲೂಕಿನ ರಾಜಕೀಯ ಸಾಮಾಜಿಕ ಧಾರ್ಮಿಕ ಕ್ಷೇತ್ರದ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಪಾದಯಾತ್ರಿಕರಿಗೆ ಅಲ್ಲಲ್ಲಿ ಪಾನಿಯ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿತ್ತು.

Comments are closed.