ಮಂಗಳೂರು: ಮುಂಬಯಿ, ದಿಲ್ಲಿ ಮುಂತಾದ ಮಹಾನಗರಗಳಲ್ಲಿ ಅತಿಕಿರಿಯ ಮಕ್ಕಳಲ್ಲಿ ರಕ್ತದ ಏರೊತ್ತಡ, ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಗಳು ಇವೇ ಮುಂತಾದ ಕಾಹಿಲೆಗಳು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.
ಭಾರತೀಯ ಶಿಶು ತಜ್ಞರ ಪತ್ರಿಕೆಯ (ಇಂಡಿಯನ್ ಜರ್ನಲ್ ಆಫ್ ಪೆಡಿಯಾಟ್ರಿಕ್ಸ್ ) ಈ ಕುರಿತಾದ ಪ್ರಬಂಧವೊಂದು ಪ್ರಕಟವಾಗಿರುವ ಬಗ್ಗೆ ವರದಿಯಾಗಿದೆ . ಅಮೆರಿಕಾದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಶೇ. 60ರಷ್ಟು ಮಕ್ಕಳಲ್ಲಿ ಬೊಜ್ಜು ಮತ್ತಿತರ ಸಮಸ್ಯೆಗಳು ಸಾಮಾನ್ಯವಾಗಿರುವ ಬಗ್ಗೆ ಕೆಲ ವರ್ಷಗಳ ಹಿಂದಿನಿಂದಲೂ ವರದಿಯಾಗುತ್ತಿದ್ದು, ಈಗ ನಮ್ಮ ದೇಶದಲ್ಲೂ ಈ ಪಿಡುಗುಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.
ಇದು ಒಮ್ಮಿಂದೊಮ್ಮೆಗೇ ಕಂಡು ಬರುತ್ತಿರುವ ಬೆಳವಣಿಗೆಯೇನಲ್ಲ. ಹಲವು ವರ್ಷಗಳಿಂದ ಅಂತಹಾ ಸೂಚನೆಗಳಿದ್ದರೂ ವೈದ್ಯಕೀಯ ಸಮುದಾಯವು ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲವೆಂದೇ ಹೇಳಬಹುದು.
ಮಧುಮೇಹದ ಉದಾಹರಣೆಯನ್ನೇ ನೋಡೋಣ. ಸುಮಾರು ಮೂವತ್ತು ವರ್ಷಗಳ ಹಿಂದೆ, ಮಧುಮೇಹವು ಹೆಚ್ಚಾಗಿ ಮಧ್ಯವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿತ್ತು. ತೊಂಭತ್ತರ ದಶಕದ ವೇಳೆಗೆ ಇಪ್ಪತ್ತರ ವಯಸ್ಸಿನವರಲ್ಲೂ ಅದು ಗೋಚರಿಸಲಾರಂಭಿಸಿತು. ಈಗ ಕಳೆದ ಹತ್ತು ವರ್ಷಗಳಿಂದೀಚೆಗೆ 10-12 ವರ್ಷ ವಯಸ್ಸಿನ ಮಕ್ಕಳಲ್ಲೂ ಅದು ಕಾಣಿಸಿಕೊಳ್ಳುತ್ತಿದೆ.
ಐವತ್ತು-ಅರುವತ್ತರ ವಯಸ್ಸಿನವರಲ್ಲಿ ಕಂಡು ಬರುತ್ತಿದ್ದ ರಕ್ತದ ಏರೊತ್ತಡವೂ ಕಳೆದ ಕೆಲವು ವರ್ಷಗಳಿಂದ ಯುವ ವಯಸ್ಸಿನವರಲ್ಲೂ ಕಂಡು ಬರುತ್ತಿದ್ದು ಈಗ 3-4 ವರ್ಷದ ಮಕ್ಕಳಲ್ಲೂ ವರದಿಯಾಗುತ್ತಲಿದೆ. ಹಾಗೆಯೇ, 45-55 ವಯಸ್ಸಿನ ಗಂಡಸರಲ್ಲಿ ಕಂಡು ಬರುತ್ತಿದ್ದ ಹೃದಯದ ರಕ್ತನಾಳಗಳ ಕಾಹಿಲೆ ಹಾಗೂ ಹೃದಯಾಘಾತಗಳು ಈಗ 20-30ರ ತರುಣ-ತರುಣಿಯರಲ್ಲೂ, ಅಪರೂಪಕ್ಕೆ ಸಣ್ಣ ಮಕ್ಕಳಲ್ಲೂ ಕಂಡುಬರಲಾರಂಭಿಸಿದೆ.
ಕ್ಯಾನ್ಸರ್ ಗೆ ಕಾರಣಗಳೇನು? ಅನುವಂಶೀಯತೆಯೇ? ಹೆಚ್ಚುತ್ತಿರುವ ಒತ್ತಡಗಳೇ? ವ್ಯಾಯಾಮದ ಕೊರತೆಯೇ? ಬದಲಾಗಿರುವ ಜೀವನ ಶೈಲಿಯೇ? ಅಥವಾ ನಾವಿಂದು ತಿನ್ನುತ್ತಿರುವ ಆಹಾರವೇ? ಎಲ್ಲಾ ಆಧುನಿಕ ರೋಗಗಳನ್ನು ವಂಶವಾಹಿಗಳ ಮೇಲೆ ಆರೋಪಿಸುವುದು ಬಹಳ ಸುಲಭದ ಕೆಲಸ. ರೈತರ ಆತ್ಮಹತ್ಯೆಗಳಿಗೆ ತಾಪಮಾನದ ಏರಿಕೆಯೇ ಕಾರಣ ಎಂದು ಕೆಲವು ತಜ್ಞರು ಹೇಳುತ್ತಿರುವುದಕ್ಕೆ ಇದನ್ನು ಹೋಲಿಸಬಹುದು. ಯಾರೂ ಕಾಣಲಾಗದ, ಸರಿಪಡಿಸಲಾಗದ ಕಾರಣಕ್ಕೆ ತಳಕು ಹಾಕಿ, ಅದಕ್ಕೇನೂ ಮಾಡಲಾಗದೆನ್ನುವ ಅಸಹಾಯಕತೆಯ ಕಡಲಿಗೆ ತಳ್ಳಿಬಿಟ್ಟರೆ ಅದರಲ್ಲಿ ಮೀನು ಹಿಡಿಯಲೆಳಸುವವರಿಗೆ ಬಹಳ ಅನುಕೂಲವಾಗುತ್ತದೆ.
ವಂಶವಾಹಿಗಳು ಮೂರ್ನಾಲ್ಕು ದಶಕಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬದಲಾಗಲು ಸಾಧ್ಯವೇ? ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲೇ ಅಂತಹಾ ಬದಲಾವಣೆಗಳು ಯಾಕಾಗುತ್ತಿವೆ? ಸಾಕಷ್ಟು ವ್ಯಾಯಾಮದ ಕೊರತೆಯೇ ಈ ರೋಗಗಳಿಗೆ ಕಾರಣ ಎನ್ನಲಾಗುತ್ತಿದೆ. ಈಗಿನ ಮಕ್ಕಳು ಆಟವಾಡುವುದಿಲ್ಲ, ಟಿವಿ ಯ ಮುಂದೆ ಕುಳಿತು ಕಾಲಹರಣ ಮಾಡುತ್ತಾರೆ, ಹೀಗಾಗಿ ಬೊಜ್ಜು ಬೆಳೆಯುತ್ತದೆ ಎಂದೆಲ್ಲಾ ಮಕ್ಕಳನ್ನು ದೂರಲಾಗುತ್ತದೆ. ಆದರೆ ಈ ರೋಗಗಳಿಗೆ ಇದೇ ಮುಖ್ಯವಾದ ಕಾರಣವೇ? ಸಾಕಷ್ಟು ಆಟವಾಡುವ ಮಕ್ಕಳಲ್ಲೂ ಬೊಜ್ಜಿಲ್ಲವೇ? ಶಾಲೆಗಳಲ್ಲಿ ಮತ್ತು ನಿತ್ಯ ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡಗಳೂ ಇವಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಹೃದ್ರೋಗವಿದ್ದ ಬಾಲಕನಿಗೆ ಶಾಲೆ ಬಿಟ್ಟು, ಮನೆಯಲ್ಲಿ ಕುಳಿತು, ಯೋಗಾಭ್ಯಾಸ ಮಾಡಿ ಒತ್ತಡವನ್ನು ನಿವಾರಿಸಬೇಕೆಂಬ ಸಲಹೆಯನ್ನು ನೀಡಲಾಗುತ್ತದೆ! ಇಂತಹಾ ಸಲಹೆಗಳಿಗೆ ಆಧಾರಗಳೇನು? ನಮ್ಮ ಹಳೆಯ ಶಿಕ್ಷಣ ಪದ್ಧತಿಯನ್ನು ಬದಿಗಿಟ್ಟು, ಪಾಶ್ಚಿಮಾತ್ಯ ಪದ್ಧತಿಗಳನ್ನು ಅಳವಡಿಸುವ ಪ್ರಯೋಗಗಳನ್ನು ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ನಡೆಸಲಾಗುತ್ತದೆ, ಮಕ್ಕಳ ಮೇಲಿನ ಹೊರೆಯನ್ನಿಳಿಸುವುದೇ ಇಂತಹಾ ಪ್ರಯೋಗಗಳ ಉದ್ದೇಶವೆಂದೂ ಹೇಳಲಾಗುತ್ತಿದೆ. ಪರೀಕ್ಷೆಗಳಿಲ್ಲದೆ, ಅಂಕಗಳಿಲ್ಲದೆ, ಎಲ್ಲರನ್ನೂ ಮುಂದೊತ್ತುವ ಶಿಕ್ಷಣವನ್ನು ರೂಪಿಸಲಾಗುತ್ತಿದೆ. ಇಂತಹಾ ಹೊರೆಯಿಲ್ಲದ ಶಿಕ್ಷಣವು ಹೃದ್ರೋಗಕ್ಕೆ ಕಾರಣವಾಗುವಷ್ಟು ಹೊರೆಯಾಗುತ್ತಿದೆಯೇ? ಶಾಲೆಗಿನ್ನೂ ಹೋಗದಿರುವ ಮೂರು-ನಾಲ್ಕು ವರ್ಷ ವಯಸ್ಸಿನ ಮಕ್ಕಳಲ್ಲಿ ರಕ್ತದೊತ್ತಡವು ಏರುವಷ್ಟು ಕ್ರೂರವಾದ ಮಾನಸಿಕ ಒತ್ತಡವದೇನಿದೆ? ಇಂತಹಾ ಕಾಲ್ಪನಿಕ ಹೊರೆಯಿಂದ ಹೊರಬರಲು ಮನೆಯಲ್ಲಿ ಕುಳಿತು ಯೋಗಾಭ್ಯಾಸ ಮಾಡಬೇಕೆಂದರೆ ಅಂತಹಾ ಮಕ್ಕಳು ಮುಂದೆ ಓದುವುದಾದರೂ ಹೇಗೆ? ಇಷ್ಟಕ್ಕೂ, ಯೋಗಾಭ್ಯಾಸದಿಂದ ಯಾವುದೇ ರೀತಿಯ ಒತ್ತಡವನ್ನು ನಿವಾರಿಸಬಹುದೆನ್ನುವುದಕ್ಕೆ ಆಧಾರಗಳೆಲ್ಲಿವೆ? ಹಾಗಾದರೆ ಕಳೆದ ಮೂರು ದಶಕಗಳಲ್ಲಿ ಈ ಆಧುನಿಕ ಕಾಯಿಲೆಗಳೆಲ್ಲ ಇಷ್ಟೊಂದು ಹೆಚ್ಚುವುದಕ್ಕೆ ಕಾರಣವಾಗಿರಬಹುದಾದ ಅತಿ ದೊಡ್ಡ ಬದಲಾವಣೆಯೆಂದರೆ ಯಾವುದು? ಉತ್ತರವೇನೂ ಕಷ್ಟವಿಲ್ಲ: ಅದುವೇ ನಮ್ಮ ಆಹಾರ. ಇದನ್ನು ಸ್ಪಷ್ಟವಾಗಿ, ಗಟ್ಟಿಯಾಗಿ ಹೇಳದಿದ್ದರೆ, ಅದಕ್ಕಿರುವ ಪ್ರಾಮುಖ್ಯತೆಯೆಷ್ಟೆನ್ನುವುದು ಜನರಿಗೆ ಅರ್ಥವಾಗದು. ಹತ್ತು ಹಲವು ಕಾರಣಗಳನ್ನೆಲ್ಲ ಮುಂದೊತ್ತಿ ಜನರನ್ನು ಗೊಂದಲಕ್ಕೀಡು ಮಾಡುವುದರಿಂದ ಯಾವ ಪ್ರಯೋಜನವೂ ಆಗದು, ಬದಲಿಗೆ ಈ ಕಾಹಿಲೆಗಳು ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾಗುತ್ತದೆ
ಆದ್ದರಿಂದ ಈ ಕಾಯಿಲೆಗಳನ್ನು ದೂರವಿಡಬೇಕಾದರೆ ನಮ್ಮ ಆಹಾರಕ್ರಮವನ್ನು ಸರಿಪಡಿಸಬೇಕು.
ಸಕ್ಕರೆ ತಿನ್ನಬೇಡಿ/ತಿನ್ನಿಸಬೇಡಿ: ಸಕ್ಕರೆ, ಅದರಲ್ಲೂ ಮುಖ್ಯವಾಗಿ ಅದರಲ್ಲಿರುವ ಫ್ರಕ್ಟೋಸ್, ಆಧುನಿಕ ರೋಗಗಳಿಗೆ ಅತಿ ಮುಖ್ಯವಾದ ಕಾರಣಗಳಲ್ಲೊಂದು. ಸಕ್ಕರೆಯು ಹಸಿವನ್ನು ಹೆಚ್ಚಿಸುವುದಲ್ಲದೆ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಮೇದಸ್ಸಿನ ಪ್ರಮಾಣದಲ್ಲಿ ಹೆಚ್ಚಳ, ಯೂರಿಕಾಮ್ಲದ ಹೆಚ್ಚಳ ಇತ್ಯಾದಿಗಳಿಗೆಲ್ಲ ಕಾರಣವಾಗುತ್ತದೆ. ಯಾವುದೇ ರೂಪದಲ್ಲಿ ಸಕ್ಕರೆಯನ್ನು ಬಳಸಬೇಡಿ – ಪೇಯಗಳಲ್ಲಿ ಸಕ್ಕರೆಯನ್ನು ಬೆರೆಸಬೇಡಿ, ಸಕ್ಕರೆಭರಿತವಾಗಿರುವ ಎಲ್ಲಾ ಲಘು ಪೇಯಗಳು (ಅವು ಲಘುವೇನಿಲ್ಲ), ಎಲ್ಲಾ ತರದ ಸಿಹಿತಿಂಡಿಗಳು, ಚಾಕ್ಲೇಟ್, ಐಸ್ ಕ್ರೀಂ, ಕೇಕ್ ಇತ್ಯಾದಿಗಳೆಲ್ಲವನ್ನೂ ವರ್ಜಿಸಿ. ಹುಟ್ಟುಹಬ್ಬಗಳನ್ನೂ, ಸಮಾರಂಭಗಳನ್ನೂ ಸಿಹಿತಿಂಡಿಗಳು/ಸಿಹಿ ಪಾನೀಯಗಳಿಲ್ಲದೆ ಆಚರಿಸಿ. ಕೃತಕ ಸಿಹಿಕಾರಕಗಳು ಹಸಿವನ್ನು ಹೆಚ್ಚಿಸುತ್ತವೆಯಲ್ಲದೆ, ತಮ್ಮದೇ ಆದ ಅಡ್ಡ ಪರಿಣಾಮಗಳನ್ನೂ ಉಂಟುಮಾಡಬಹುದು, ಹಾಗಾಗಿ ಅವನ್ನೂ ವರ್ಜಿಸಿ.
ಹಣ್ಣುಗಳನ್ನು ತಿನ್ನಬೇಡಿ/ತಿನ್ನಿಸಬೇಡಿ: ಹಣ್ಣುಗಳಲ್ಲಿ ಫ್ರಕ್ಟೋಸ್ ತುಂಬಿದ್ದು, ಮೇಲೆ ಹೇಳಿರುವಂತೆ ಆಧುನಿಕ ರೋಗಗಳನ್ನುಂಟು ಮಾಡುತ್ತವೆ. ಹಣ್ಣುಗಳಲ್ಲಿ ಯಥೇಚ್ಛವಾಗಿ ಬಳಸುವ ಕೀಟನಾಶಕಗಳು ಮತ್ತಿತರ ರಾಸಾಯನಿಕಗಳಿಂದಾಗಬಹುದಾದ ತೊಂದರೆಗಳು ಬೇರೆಯೇ. ಆದ್ದರಿಂದ ಯಾವುದೇ ಹಣ್ಣುಗಳನ್ನು (ಬೆಣ್ಣೆ ಹಣ್ಣು ಹಾಗೂ ಕಾಡಿನ ಹಣ್ಣುಗಳಾದ ನೇರಳೆ, ನೆಲ್ಲಿ ಇತ್ಯಾದಿ ಹೊರತು ಪಡಿಸಿ) ಮತ್ತು ಹಣ್ಣಿನ ರಸಗಳನ್ನು ವರ್ಜಿಸಿ. ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡದು!
ಮೈದಾ/ಸಿಹಿ ಜೋಳದ ಹಿಟ್ಟುಗಳನ್ನು ತಿನ್ನಬೇಡಿ/ತಿನ್ನಿಸಬೇಡಿ: ಮೈದಾ ಹಾಗೂ ಸಿಹಿ ಜೋಳದ ಹಿಟ್ಟುಗಳು ಸಕ್ಕರೆಯಂತೆಯೇ ವರ್ತಿಸುವುದರಿಂದ ಅವನ್ನೂ ವರ್ಜಿಸಿ. ಅವುಗಳಿಂದ ತಯಾರಿಸಿದ ಬ್ರೆಡ್ಡು, ಬಿಸ್ಕತ್ತುಗಳು, ನೂಡ್ಲ್ , ಪಿಜಾ, ಪಾಸ್ತಾ, ಕಾರ್ನ್ ಫ್ಲೇಕ್ಸ್, (ಅಥವಾ ವೀಟ್ ಮತ್ತು ರೈಸ್ ಫ್ಲೇಕ್ಸ್) ಕೇಕ್, ಇವೇ ಮುಂತಾದವನ್ನು ತಿನ್ನಬೇಡಿ/ತಿನ್ನಿಸಬೇಡಿ.
ಕರಿದ ತಿಂಡಿಗಳನ್ನು ತಿನ್ನಬೇಡಿ/ತಿನ್ನಿಸಬೇಡಿ: ಕರಿದ ತಿಂಡಿಗಳು ರಕ್ತನಾಳಗಳ ಕಾಹಿಲೆಗೆ ಪೂರಕವಾಗುವುದರಿಂದ ಅವನ್ನು ವರ್ಜಿಸಿ. ಬಿಸ್ಕತ್ತುಗಳು, ಚಿಪ್ಸ್, ವೇಫರ್ಸ್, ಫ್ರೆಂಚ್ ಫ್ರೈಸ್, ಕುರುಂಕುರುಂ ತಿಂಡಿಗಳನ್ನೆಲ್ಲ ವರ್ಜಿಸಿ. ಯಾವುದನ್ನೂ ಆಳವಾಗಿ, ಬಾಣಲೆಯಲ್ಲಿಟ್ಟು, ಕರಿಯಬೇಡಿ.
ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಐಸ್ ಕ್ರೀಂ ಬೇಡ: ಹಾಲು ಮತ್ತದರ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಐಸ್ ಕ್ರೀಂಗಳು ಹೆಚ್ಚಿನ ಆಧುನಿಕ ರೋಗಗಳನ್ನು ಉಲ್ಬಣಿಸುತ್ತವೆ. ಶೈಶವಾವಸ್ಥೆಯ ಬಳಿಕ ಹಾಲಿನ ಅಗತ್ಯವು ನಮಗಿಲ್ಲ, ಅದರಲ್ಲೂ ಪ್ರಾಣಿಜನ್ಯ ಹಾಲು ನಮ್ಮ ಆಹಾರವೇ ಅಲ್ಲ. ಕೆನೆ ತೆಗೆದು, ಒತ್ತಿ ಬೆರೆಸಿ ಹಾಲೆಂದು ಮಾರಲ್ಪಡುತ್ತಿರುವುದು ಹಾಲೇ ಅಲ್ಲ. ತರಕಾರಿಗಳಲ್ಲೂ, ಮೀನು ಇತ್ಯಾದಿಗಳಲ್ಲಿ ನಮಗೆ ಬೇಕಾದಷ್ಟು ಕ್ಯಾಲ್ಸಿಯಂ ದೊರೆಯುತ್ತದೆಯಾದ್ದರಿಂದ ಅದಕ್ಕಾಗಿ ಹಾಲಿನ ಸೇವನೆಯ ಅಗತ್ಯವಿಲ್ಲ.
ತರಕಾರಿಗಳು, ಮೊಳೆತ ಧಾನ್ಯಗಳು, ಮೀನು, ಮಾಂಸ, ಮೊಟ್ಟೆ, ನೀರು, ಇವೆಲ್ಲವೂ ನಮ್ಮ ನಿಸರ್ಗ ಸಹಜ ಆಹಾರಗಳು. ಅವುಗಳನ್ನೇ ತಿಂದು ಆರೋಗ್ಯಕರವಾಗಿ ಜೀವಿಸಬಹುದು.