ಕರಾವಳಿ

ಡಿವೈಎಫ್‌ಐ, ಎಸ್‌ಎಫ್‌ಐ ಪ್ರತಿಭಟನೆ : ಗ್ರಾಮಾಂತರ ಠಾಣೆ ಹಾಗೂ ಬಂದರು ಠಾಣೆಯ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

Pinterest LinkedIn Tumblr

dyfi_protest_4

ಮಂಗಳೂರು, ಅ.17: ಅಕ್ರಮ ಮರಳು ಮಾಫಿಯಾದ ವಿರುದ್ಧ ಕ್ರಮಕೈಗೊಳ್ಳಬೇಕಾಗಿದ್ದ ಪೊಲೀಸರು ಮಾಫಿಯಾದ ಪ್ರಭಾವಕ್ಕೊಳಗಾಗಿ ಅಮಾಯಕ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಮಾಫಿಯಾಗಳ ಚೇಲಾಗಳಂತೆ ವರ್ತಿಸುತ್ತಿದ್ದಾರೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷರು ಹಾಗೂ ಮನಪಾ ಸದಸ್ಯ ದಯಾನಂದ ಶೆಟ್ಟಿ ಆರೋಪಿಸಿದ್ದಾರೆ.

ಸೆ.2ರಂದು ನಡೆದ ಅಖಿಲ ಭಾರತ ಮುಷ್ಕರದ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಡಿವೈಎಫ್‌ಐ, ಎಸ್‌ಎಫ್‌ಐ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಯ ಮತ್ತು ಬಂದರು ಠಾಣೆಯ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ ಡಿವೈಎಫ್‌ಐ, ಎಸ್‌ಎಫ್‌ಐ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

dyfi_protest_3

ಜನಪರ ಕೆಲಸ ಮಾಡುತ್ತಿರುವವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ.ಮರಳು ಮಾಫಿಯದ ವಿರುದ್ಧ ಧ್ವನಿಯೆತ್ತುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ, ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟ ಪೊಲೀಸರ ನಡೆ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸಮಾಜದಲ್ಲಾಗುವ ಅನ್ಯಾಯ, ಅಕ್ರಮ, ಗೂಂಡಾಗಿರಿಗಳನ್ನು ನಿಯಂತ್ರಿಸಿ ಕೊಲೆಗಾರರು, ಸಮಾಜಘಾತುಕರನ್ನು ಬಂಧಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಪೊಲೀಸರ ಹೊಣೆ. ಆದರೆ ಬಂದರು ಠಾಣಾ ಪೊಲೀಸರು ಸುಳ್ಳು ಪ್ರಕರಣದ ಅಡಿಯಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಬಂಧಿಸಿ, ಕೈಕೋಳ ತೊಡಿಸಿ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದ್ದಾರೆ. ಪೊಲೀಸ್ ದೌರ್ಜನ್ಯದ ಮೂಲಕ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

dyfi_protest_2

ಅಮಾಯಕರನ್ನು ಬೆದರಿಸುತ್ತಿರುವ ಮಂಗಳೂರು ಗ್ರಾಮಾಂತರ ಠಾಣಾಧಿಕಾರಿ ಮರಳು ಮಾಫಿಯಾದವರೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ ಅವರು ಇಂತಹ ಭ್ರಷ್ಟ ಪೊಲೀಸ್ ಅಧಿಕಾರಿಗಳಿಂದ ಪೊಲೀಸ್ ಇಲಾಖೆಯ ಮಾನ ಹರಾಜುಗೊಳ್ಳುತ್ತಿದೆ. ಈ ಕೂಡಲೇ ನಗರದ ಪ್ರಾಮಾಣಿಕ, ಜನಸ್ನೇಹಿ ಪೊಲೀಸ್ ಆಯುಕ್ತರು ಮಂಗಳೂರು ಗ್ರಾಮಾಂತರ, ಬಂದರು ಠಾಣೆಯ ತಪ್ಪಿತಸ್ಥ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈ‌ಎಫ್‌ಐನ ಜಿಲ್ಲಾ ಕಾರ್‍ಯದರ್ಶಿ ಸಂತೋಷ್ ಬಜಾಲ್, ಎಸ್‌ಎಫ್‌ಐ ಜಿಲ್ಲಾ ಕಾರ್‍ಯದರ್ಶಿ ಚರಣ್ ಶೆಟ್ಟಿ ಮಾತನಾಡಿದರು.

dyfi_protest_1

ಈ ವೇಳೆ ಡಿವೈ‌ಎಫ್‌ಐನ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ರಫೀಕ್ ಹರೇಕಳ, ಸಿ‌ಐಟಿಯು ಮುಖಂಡರಾದ ಸಂತೋಷ್ ಶಕ್ತಿನಗರ, ಪ್ರೇಮನಾಥ್ ಜಲ್ಲಿಗುಡ್ಡೆ, ಜಯಂತಿ ಬಿ. ಶೆಟ್ಟಿ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷರಾದ ನಿತಿನ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.

ಡಿವೈ‌ಎಫ್‌ಐ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಸಿ‌ಐಟಿಯು ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಎಸ್‌ಎಫ್‌ಐನ ಮಯೂರಿ ಬೋಳಾರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Comments are closed.