ಕರಾವಳಿ

ಕೋಟೇಶ್ವರದಲ್ಲಿ ‘ಗೀತ್ ಮಾಲಾ’; ಅಮರ ಗೀತೆಗಳ ಗಾನ- ಸಂಗೀತ ಪ್ರಿಯರಿಗೆ ರಸದೌತಣ! (Video)

Pinterest LinkedIn Tumblr

ಕುಂದಾಪುರ: ಸ್ನೇಹ ಸಂಜೆ ಕೋಟೇಶ್ವರ ಇವರು ಸಾದರಪಡಿಸಿದ ರಾಜ್ಯದ ಹೆಸರಾಂತ ಸಂಗೀತ ಕಲಾವಿದರಿಂದ ಅಮರ ಗೀತೆಗಳ ಮಧುರ ಗಾಯನ ‘ಗೀತ್ ಮಾಲಾ’ ಕಾರ್ಯಕ್ರಮವು ಭಾನುವಾರ ಇಳಿಸಂಜೆ ಕೋಟೆಶ್ವರದ ಕಾಳಾವರ ವರದರಾಜ್ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಿತು.

ಉದ್ಘಾಟನೆ…ಸನ್ಮಾನ…ಭಾಷಣವಿಲ್ಲ..!
ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೆರವೇರಿಸಿದರು. ಈ ಸಂದರ್ಭ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಭಾಕರ್ ಐತಾಳ್ ಅವರಿಗೆ ರಂಗ ಕಂಠೀರವ ಬಿರುದು ಮತ್ತು ಆರ್ಕೇಸ್ಟ್ರಾ ಕಲಾವಿದ ಮೋಹನ್ ಸಾರಂಗ ಅವರಿಗೆ ಸನ್ಮಾನಿಸಿ ಸಂಗೀತ್ ಸಾಮ್ರಾಟ್ ಬಿರುದು ನೀಡಿ ಗೌರವಿಸಲಾಯಿತು. ಆದರೆ ವೇದಿಕೆ ಕಾರ್ಯಕ್ರಮ ಸರಳವಾಗಿದ್ದು ಅತಿಥಿಗಳಿಗೆ ಭಾಷಣವಿರಲಿಲ್ಲ.

   

ಉದ್ಯಮಿಗಳಾದ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಸುರೇಂದ್ರ ಶೆಟ್ಟಿ, ಎಚ್. ದಯಾನಂದ ಶೆಟ್ಟಿ, ಅಕ್ಷಯ್ ಶೇಟ್, ಪಿ. ಡಬ್ಲ್ಯೂಡಿ ಗುತ್ತಿಗೆದಾರರಾದ ಪ್ರಶಾಂತ್ ಮೊಳಹಳ್ಳಿ, ಎನ್. ಜಯರಾಮ ಶೆಟ್ಟಿ ಸಬ್ಲಾಡಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಸಂಗೀತಕ್ಕೆ ಜನರು ಫಿದಾ….
ಭಾನುವಾರ ಸಂಜೆ ತುಂತುರು ಮಳೆಯಾಗುತ್ತಿದ್ದು ಕಾಲೇಜು ಮೈದಾನದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಪ್ರಸಿದ್ಧ ಕಲಾವಿದರಾದ ಶ್ರುತಿ ಬೀಡೆ, ರಮೇಶ್ಚಂದ್ರ, ದಿವ್ಯಾ ರಾಮಚಂದ್ರ, ಎಂ.ಡಿ. ಹನೀಫ್, ಇಕ್ಬಾಲ್, ಅಶೋಕ್ ಸಾರಂಗ್, ಅರ್ಜುನ್ ಇಟಗಿ, ವೈ.ಎನ್. ರವೀಂದ್ರ, ನಯನಾ ರಾಜಗೋಪಾಲ್ ಹಾಡಿದ ಕನ್ನಡ ಹಾಗೂ ಹಿಂದಿಯ ಸುಮಾರು 27  ಹಳೆ ಚಿತ್ರಗೀತೆಗಳು ಕೇಳುಗರ ಕಿವಿಗೆ ಇಂಪು ನೀಡಿದವು.

ಅರ್ಜುನ್ ಇಟಗಿ ಹಾಡಿಗೆ ಚಪ್ಪಾಳೆ ಸುರಿಮಳೆ!
ಅರ್ಜುನ್ ಇಟಗಿ ಹಾಡಿದ ನನ್ನ ಗೆಳತಿ ನನ್ನ ಗೆಳತಿ ಹಾಡಿಗೆ ನೆರೆದವರ ಚಪ್ಪಾಳೆ, ಸಿಳ್ಳೆ ಮುಗಿಲುಮುಟ್ಟಿತ್ತು. ಇನ್ನು ಆತ ತನ್ನದೇ ಶೈಲಿಯಲ್ಲಿ ಕುಣಿಯುತ್ತಾ ಹಾಡಿದ ಯಾರೇ ಕೂಗಾಡಲಿ ಊರೇ ಹೋರಾಡಲಿ, ಕಾಣದಂತೆ ಮಾಯವಾದನೋ……, ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಒಟ್ಟಿನಲ್ಲಿ ಭಾನುವಾರದ ಇಳಿಸಂಜೆ ಕೋಟೇಶ್ವರ ಕಾಲೇಜು ಮೈದಾನವು ಸಂಗೀತ ಪ್ರಿಯರಿಗೆ ರಸದೌತಣ ನೀಡಿದ್ದು ಸುಳ್ಳಲ್ಲ. ಸಂಪೂರ್ಣ ಕಾರ್ಯಕ್ರಮವನ್ನು ಪತ್ರಕರ್ತರಾದ ಕೆ.ಸಿ. ರಾಜೇಶ್ ಹಾಗೂ ವಸಂತ್ ಗಿಳಿಯಾರ್ ನಿರೂಪಿಸಿದರು. ಬರಹಗಾರರಾದ ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಪ್ರವೀಣ್ ಯಕ್ಷಿಮಟ ಸಹಕರಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.