ಕರಾವಳಿ

ಬೀಜಾಡಿಯ ಡೇಂಜರ್ ಟ್ಯಾಂಕ್ ಕೆಡವಲು ಹರಸಾಹಸ, 2 ದಿನದ ಕಾರ್ಯಾಚರಣೆ ಯಶಸ್ವಿ – ವಿಡಿಯೋ ನೋಡಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬೀಜಾಡಿ ಬೈಪಾಸ್ ಬಳಿಯಲ್ಲಿದ್ದ ಸುಮಾರು 35 ವರ್ಷ ಹಳೆಯದಾದ ಕುಡಿಯುವ ನೀರು ಪೂರೈಕೆಯ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡು ಅಪಾಯಕಾರಿ ಸ್ಥೀತಿಯಲ್ಲಿದ್ದಿದ್ದು ಇತ್ತೀಚೆಗೆ ಉಡುಪಿ ಡಿಸಿ ಜಿ. ಜಗದೀಶ್ ಅವರು ನಿರುಪಯುಕ್ತ ಟ್ಯಾಂಕ್ ತೆರವಿಗೆ ಆದೇಶಿಸಿದ್ದರು. ಟ್ಯಾಂಕ್ ತೆರವು ಕಾರ್ಯ ಶುಕ್ರವಾರದಿಂದ ಆರಂಭಗೊಂಡಿದ್ದು ಶನಿವಾರ ಸಂಜೆಯವರೆಗೂ ನಿರಂತರ ಕಾರ್ಯಾಚರಣೆ ನಡೆದು ತೆರವು ಕಾರ್ಯಾಚರ್ಣೆ ಪ್ರಮುಖ ಘಟ್ಟ ತಲುಪಿದೆ. ‘ಕನ್ನಡಿಗ ವರ್ಲ್ಡ್’ ಈ ನಿರುಪಯುಕ್ತವಾದ ಅಪಾಯಕಾರಿ ನೀರಿನ ಟ್ಯಾಂಕ್ ಸಮಸ್ಯೆ ಕುರಿತು ಹಲವು ಬಾರಿ ವಿಸ್ತ್ರತ ವರದಿ ಮಾಡಿ ಅಧಿಕಾರಿಗಳ ಗಮನ‌ಸಳೆದಿತ್ತು.

2 ದಿನಗಳ ಸತತ ಕಾರ್ಯಾಚರಣೆ….
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಓವರ್ ಹೆಡ್ ಟ್ಯಾಂಕ್ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಮೊದಲಿಗೆ ಟ್ಯಾಂಕ್ ಪಿಲ್ಲರ್ ಒಂದರ ಕಾಂಕ್ರಿಟ್ ಪದರವನ್ನು ಕಟ್ಟಿಂಗ್ ಮೆಷಿನ್ ಮೂಲಕ ಕತ್ತರಿಲಾಗಿತ್ತು. ಬಳಿಕ ಮತ್ತೊಂದು ಪಿಲ್ಲರ್ ಕೂಡ ಅದೇ ಮಾದರಿಯಾಗಿ ಕತ್ತರಿಸಲಾಗಿತ್ತು. ಎರಡು ಪಿಲ್ಲರ್ ಕತ್ತರಿಸಿದಾಗಲೂ ಟ್ಯಾಂಕ್ ಮೇಲ್ಬಾಗದ ಡೂಮ್ ಕುಸಿಯದ ಕಾರಣ ಮತ್ತೊಂದು ಪಿಲ್ಲರ್ ಕೂಡ ಕತ್ತರಿಸಿ ಕ್ರೇನ್ ಮೂಲಕ ಮೇಲ್ಭಾಗಕ್ಕೆ ರೋಪ್ ಅಳವಡಿಸಿ ಎಳೆಯಲಾಯಿತು. ಆದರೆ ರೋಪ್ ತುಂಡರಿಸಿತೇ ಹೊರತು ಟ್ಯಾಂಕ್ ಕೊಂಚವೂ ಮಿಸುಕಾಡಲಿಲ್ಲ. ತಡರಾತ್ರಿ 12.30ರವರೆಗೂ ಕಾರ್ಯಾಚರಣೆ ನಡೆಸಿದ್ದು ನಂತರ ಸ್ಥಗಿತಗೊಳಿಸಲಾಗಿತ್ತು.

ಶುಕ್ರವಾರ ರಾತ್ರಿಯೂ ಕಾರ್ಯಾಚರಣೆ…
ಎರಡು ಪಿಲ್ಲರ್ ಕತ್ತರಿಸುವುದೇ ತ್ರಾಸದಾಯಕ ಕೆಲಸವಾಗಿತ್ತು. ರಾತ್ರಿಯೂ ಕಾಮಗಾರಿ ಮುಂದುವರಿದ ಕಾರಣ ಹೆಲೋಜಿನ್ ಲೈಟ್ ಅಳವಡಿಸಿಕೊಂಡು ತೆರವು ಕಾರ್ಯ ಮುಂದುವರೆಸಲಾಯಿತು. ಕುಂದಾಪುರ ಪಿಎಸ್ಐ ಹರೀಶ್ ಆರ್., ಪ್ರೊಬೇಶನರಿ ಪಿಎಸ್ಐ ಐ.ಆರ್. ಗಡ್ಡೇಕರ್ ಹಾಗೂ ಸಿಬ್ಬಂದಿಗಳು, ಕುಂದಾಪುರ ಟ್ರಾಫಿಕ್ ಪೊಲೀಸರು ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ನಿರ್ವಹಿಸಿದರು. ಅಗ್ನಿಶಾಮಕದಳ ವಾಹನ ಹಾಗೂ ಸಿಬ್ಬಂದಿಗಳು, ಅಂಬುಲೆನ್ಸ್ ವಾಹನ, ಮೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಶನಿವಾರದ ಕಾರ್ಯಾಚರಣೆ
ಶನಿವಾರ ಮುಂಜಾನೆಯಿಂದಲೆ ಮತ್ತೆ ಕೆಲಸ ಆರಂಭಿಸಿ ಪಿಲ್ಲರಿನ ರಾಡುಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಲಾಯಿತು. ಬಳಿಕ ಮೆಷಿನ್ ಕಟ್ಟರ್ ಮೂಲಕ ರಾಡು ಕತ್ತರಿಸಿ ಸಂಜೆ ಸುಮಾರಿಗೆ ಮಂಗಳುರಿನಿಂದ ಬ್ರಹತ್ ಕ್ರೇನ್ ತರಿಸಿ ಚೈನ್ ಮೂಲಕ ಟ್ಯಾಂಕ್ ಮೇಲ್ಭಾದದ ಡೂಮ್ ಕೆಡವಲಾಯಿತು. ಬಳ್ಳಾರಿ ಮೂಲದ ಸುರತ್ಕಲ್ ನಿವಾಸಿ ಕಾಶಿನಾಥ್ ಹಾಗೂ ಸಹವರ್ತಿಗಳು ಶಿಥಿಲ ಟ್ಯಾಂಕ್ ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಶನಿವಾರ ರಾತ್ರಿ ೭ ಗಂಟೆಯ ಹೊತ್ತಿಗೆ ಟ್ಯಾಂಕ್ ಕುಸಿದು ಬಿದ್ದಿದ್ದು ಸ್ಥಳದಲ್ಲಿ ನೆರೆದ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸಿಹಿ ಹಂಚಿ ಖುಷಿಪಟ್ಟರು.

ಅಂತೂ ಇಂತೂ…ಸಮಾಧಾನ..
ದಲಿತ ಸಂಘರ್ಷ ಸಮಿತಿ ಮುಂದಾಳತ್ವದಲ್ಲಿ ರಾಜು ಬೆಟ್ಟಿನಮನೆ ಕಳೆದ ಐದು ವರ್ಷಗಳಿಂದ ಈ ಟ್ಯಾಂಕ್ ತೆರವಿನ ಬಗ್ಗೆ ಹಲವು ಹೋರಾಟ ನಡೆಸಿದ್ದರು. ಅದಕ್ಕೆ ಸ್ಥಳೀಯ ಗೋಪಾಡಿ ಗ್ರಾಮಪಂಚಾಯತ್ ಕೂಡ ಸಕಾರಾತ್ಮಕವಾಗಿ ಸ್ಪಂದನೆ ನೀಡಿತ್ತು. ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್ ಈ ವಿಚಾರದಲ್ಲಿ ಅತೀವ ಇಚ್ಚಾಶಕ್ತಿ ತೋರಿ ಹಲವು ಬಾರಿ ಜಿಲ್ಲಾಧಿಕಾರಿ, ಜಿಲ್ಲಾಪಂಚಾಯತ್ ಸಿ.ಎಸ್. ಮೊದಲಾದವರ ಬಳಿ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದರು. ಅಂತೆಯೇ ಇತ್ತೀಚೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಟ್ಯಾಂಕ್ ತೆರವಿಗೆ ಆದೇಶ ನೀಡಿದ್ದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 1.5 ಲಕ್ಷ, 50 ಸಾವಿರ ಗ್ರಾ.ಪಂ ಅನುದಾನ ಒಟ್ಟು ಎರಡು ಲಕ್ಷ ಬಿಡುಗಡೆಗೊಳಿಸಿ ಆದೇಶಿಸಿದ್ದರು.

ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಕುಮಾರ್, ಸಹಾಯಕ ಇಂಜಿನಿಯರ್ ಗಳಾದ ಕೇಶವ ಗೌಡ, ಶ್ರೀಧರ್ ಪಾಲೆಕ್ಕರ್, ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಪಿಡಿಓ ಗಣೇಶ, ಕಾರ್ಯದರ್ಶಿ ಹರೀಶ್ಚಂದ್ರ ಆಚಾರ್, ಸದಸ್ಯರಾದ ರಮೇಶ್ ಸುವರ್ಣ, ಸುರೇಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಸಿಬ್ಬಂದಿಗಳಾದ ಸಂದೀಪ್ ಕಾಮತ್, ಕೃಷ್ಣ ದೇವಾಡಿಗ, ಜಿ.ಪಂ ಸದಸ್ಯೆ ಶ್ರೀಲತಾ ಶೆಟ್ಟಿ, ಸಾಮಾಜಿಕ ಹೋರಾಟಗಾರ ಗಣೇಶ್ ಪುತ್ರನ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ರಾಜು ಬೆಟ್ಟಿನಮನೆ, ಅಣ್ಣಪ್ಪ ಬೆಟ್ಟಿನಮನೆ, ಪಿಡಬ್ಲ್ಯೂಡಿ ಗುತ್ತಿಗೆದಾರ ಅಶೋಕ್ ಬೀಜಾಡಿ ಇದ್ದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.