ಕರಾವಳಿ

ಕಾಮಗಾರಿ ಸಮರ್ಪಕವಾಗಿ ಮಾಡದೇ ಕಡತದಲ್ಲಿ ಮಾತ್ರ ಸಾಧನೆ ತೋರಿಸಲಾಗುತ್ತಿದೆ : ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು

Pinterest LinkedIn Tumblr

ಮಂಗಳೂರು ನವೆಂಬರ್ 23 : ಸಭೆಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ತಮಗೆ ವಹಿಸಿದ ಕೆಲಸದ ಬಗ್ಗೆ ಗಂಭೀರತೆ ಇರಬೇಕು. ಕಾಮಗಾರಿ ಸಮರ್ಪಕವಾಗಿ ಮಾಡದೇ ಕಡತದಲ್ಲಿ ಮಾತ್ರ ಸಾಧನೆ ತೋರಿಸಲಾಗುತ್ತಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಭೆಯಲ್ಲಿ ತಿಳಿಸಿದರು.

ದ.ಕ ಜಿಲ್ಲಾ ಪಂಚಾಯತ್, ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಳೂರು ತಾಲೂಕಿನ ಕಂದಾವರ, ಗುರುಪುರ, ಪಡುಪೆರಾರೆ ಮತ್ತು ಗಂಜಿಮಠ ಗ್ರಾಮ ಪಂಚಾಯತ್‍ಗಳ ಘನ/ದ್ರವ್ಯ ತ್ಯಾಜ್ಯವಿಲೇವಾರಿ ಘಟಕಗಳ ಕಾಮಗಾರಿ ಅನುಷ್ಟಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವರದಿಯಂತೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯ ಇರುವ ಕುಟುಂಬಗಳಲ್ಲಿ ಮನೆ ನಂಬರ್ ಹೊಂದಿರುವ ಮತ್ತು ಹೊಂದದೇ ಇರುವ ಕುಟುಂಬಗಳಲ್ಲಿ ಶೌಚಾಲಯ ರಹಿತ ಕುಟುಂಬಗಳು 901 ಆಗಿದ್ದು, ಮನೆ ನಂಬರ್ ಹೊಂದಿರುವ 728 ಕುಟುಂಬಗಳು ಹಾಗೂ ಮನೆ ನಂಬರ್ ಹೊಂದದೇ ಇರುವ 173 ಕುಟುಂಬಗಳಿವೆ ಎಂದು ತಿಳಿಸಿದರು.

ಈ ಬಗ್ಗೆ ಆಕ್ಷೇಪವೆತ್ತಿದ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಇವರು ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ನಂಬರ್ ಹೊಂದಿದ ಕುಟುಂಬಗಳಿಗೆ ಶೌಚಾಲಯ ಇಲ್ಲ ಆದರೆ ಕಡತದಲ್ಲಿ ಮಾತ್ರ ಸಾಧನೆ ತೋರಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಿಗೆ ಸೂಚಿಸಿದರು.

2018-19ನೇ ಸಾಲಿನಲ್ಲಿ ಸಾರ್ವಜನಿಕ ಶೌಚಾಲಯ ಯೋಜನೆಯಲ್ಲಿ ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು, ಸುಳ್ಯ ತಾಲೂಕಿನಲ್ಲಿ ಭೌತಿಕ ಪ್ರಗತಿಯಲ್ಲಿ 50 ಘಟಕಗಳ ಗುರಿ ಹೊಂದಿದ್ದು, 39 ಪೂರ್ಣಗೊಂಡು, 11 ಪ್ರಗತಿಯಲ್ಲಿದೆ. 2019-20 ನೇ ಸಾಲಿನಲ್ಲಿ ಇನ್ನು 71 ಶೌಚಾಲಯಗಳ ಗುರಿಯನ್ನು ಹೊಂದಿದೆ ಎಂದು ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ತಿಳಿಸಿದರು.

2019-20 ನೇ ಸಾಲಿನ ಗ್ರಾಮೀಣ ನೀರು ಸರಬರಾಜು ಯೋಜನೆಯ ಒಟ್ಟು ಭೌತಿಕ ಗುರಿ 513 ಆಗಿದ್ದು, ಭೌತಿಕ ಸಾಧನೆ 224 ಆಗಿರುತ್ತದೆ. ಈ ಕಾಮಗಾರಿಗಳಿಗೆ ಅಂದಾಜು ವೆಚ್ಚ 13353.48 ಲಕ್ಷ. ಎಂದು ವರದಿಯ ಪ್ರಕಾರ ತಿಳಿದು ಬಂದಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ 6 ತಿಂಗಳಲ್ಲಿ ಯಾವ ಕೆಲಸಗಳನ್ನು ಮಾಡುತ್ತೀರಾ ಅದರ ಕಾರ್ಯತಂತ್ರಗಳನ್ನು ನವೆಂಬರ್ 30 ರ ಒಳಗಾಗಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಎಲ್ಲ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.