ಪ್ರಮುಖ ವರದಿಗಳು

ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ, ಬಾಯಿಗೆ ಮೂತ್ರ ಮಾಡಿ ಅಮಾನವೀಯತೆ ಮೆರೆದ ಉತ್ತರ ಪ್ರದೇಶ ಪೊಲೀಸರು! ವಿಡಿಯೋ ವೈರಲ್

Pinterest LinkedIn Tumblr

ಲಖನೌ: ರೈಲು ಹಳಿತಪ್ಪಿದ್ದನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಉತ್ತರ ಪ್ರದೇಶ ರೈಲ್ವೆ ಪೊಲೀಸರು ಹಲ್ಲೆ ನಡೆಸಿ, ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ರೈಲ್ವೆ ಪೊಲೀಸರು ಟಿವಿ ವರದಿಗಾರ ಅಮಿತ್ ಶರ್ಮಾ ಅವರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಹೀನ ಕೃತ್ಯಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಫೇಸ್​ಬುಕ್​ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತ ಬರವಣಿಗೆಗೆ ಜೈಲು ಪಾಲಾಗಿದ್ದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಮರುದಿನವೇ, ಮತ್ತೋರ್ವ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸರೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ದಿಮ್ನಾಪುರ್ ಬಳಿಯ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಸಾಮಾನ್ಯ ಉಡುಪು ಧರಿಸಿದ್ದರು. ಮೊದಲು ನನ್ನ ಕ್ಯಾಮೆರಾವನ್ನು ಕಸಿದುಕೊಂಡರು, ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಅಲ್ಲದೆ ನನ್ನನ್ನು ಕೆಳಗೆ ತಳ್ಳಿ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ನಡೆದುಕೊಂಡರು ಎಂದು ಶರ್ಮಾ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಅಧಿಕಾರಿ ರಾಕೇಶ್ ಕುಮಾರ್ ಮತ್ತು ರೈಲ್ವೆ ಪೊಲೀಸ್ ಪೇದೆ ಸುನಿಲ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಪೊಲೀಸರು ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಅಮಾನವೀಯವಾಗಿ ನಡೆದುಕೊಂಡಿದ್ದು ದುರದೃಷ್ಟಕರ. ಅವರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಮ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಅವರು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್​ ಅಧಿಕಾರಿಗಳು ಪತ್ರಕರ್ತನನ್ನು ಥಳಿಸುತ್ತಿರುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ.

Comments are closed.