ಕರಾವಳಿ

ಕೋಟದಲ್ಲಿ ಯಶಸ್ವಿ ಉದ್ಯೋಗ ಮೇಳ: ‘ಭರವಸೆ’ಯಲ್ಲಿ ಭಾಗವಹಿಸಿದ 3 ಸಾವಿರಕ್ಕೂ ಹೆಚ್ಚು ಉದ್ಯೋಗಕಾಂಕ್ಷಿಗಳು

Pinterest LinkedIn Tumblr

ಉಡುಪಿ: ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕೋಟ ವಿವೇಕ ವಿದ್ಯಾಸಂಸ್ಥೆಯ ವಠಾರದಲ್ಲಿ ಫೆ.24 ಭಾನುವಾರದಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ “ಭರವಸೆ’ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಂತೆ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಉಡುಪಿ ಜಿಲ್ಲೆಗೆ ಒದಗಿಸಿದ್ದು, ಯುವಜನತೆ ಉದ್ಯೋಗ ಪಡೆಯಲು ಎಲ್ಲಾ ರೀತಿಯ ಪೂರಕ ವಾತಾವರಣ ಜಿಲ್ಲೆಯಲ್ಲಿದೆ, ಯುವ ಜನತೆ ಇದರ ಸದುಪಯೋಗ ಪಡೆಯಬೇಕು. ಉಡುಪಿ ಜಿಲ್ಲೆಯ ಯುವ ಜನತೆ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಜಿಟಿಟಿಸಿ ತರಬೇತಿ ಕೇಂದ್ರವನ್ನು ಉಪ್ಪೂರಿನಲ್ಲಿ ನಿರ್ಮಿಸಲಾಗುತ್ತಿದ್ದು, ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರಿಗೂ 100% ಉದೋಗ ದೊರೆಯಲಿದೆ, ಮಣಿಪಾಲದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಕೌಶಲ್ಯ ಕೇಂದ್ರ ತೆರೆದಿದ್ದು, ಇದರಲ್ಲಿ ಉದ್ಯೋಗ ಪಡೆಯಲು ಬೇಕಾದ ಅಗತ್ಯ ತರಬೇತಿ ಮತ್ತು ಮಾಹಿತಿ ನೀಡಲಾಗುತ್ತಿದೆ, ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ರಾಮಕೃಷ್ಣ ಹೆಗಡೆ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣಗೊಳ್ಳುತ್ತಿದೆ, ಜೆಮ್ಸ್ ಅಂಡ್ ಜ್ಯೂಯಲ್ಸ್ ತರಬೇತಿ ಕೇಂದ್ರ ಸಹ ಆರಂಭಗೊಂಡಿದ್ದು, ಈ ಭಾಗದ ಯುವಜನತೆಗೆ ಉದ್ಯೋಗ ಸೃಷ್ಠಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗಿದ್ದು, ಯುವ ಜನತೆ ಇದರ ಪ್ರಯೋಜನ ಪಡೆಯುವಂತೆ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆದು ಸ್ವಾವಲಂಬಿಗಳಾಗುವಂತೆ ಶೋಭಾ ಹೇಳಿದರು.

ಉದ್ಯೋಗ ಪಡೆಯಲು ಸಂದರ್ಶನ ಎದುರಿಸುವ ಕುರಿತು ಅಗತ್ಯ ಕೌಶಲ್ಯ ಬೆಳೆಸಿಕೊಳ್ಳುವಂತೆ ಹಾಗೂ ಅನುಭವದಿಂದ ಕೌಶಲ್ಯ ಬರಲಿದ್ದು ಮೊದಲ ಬಾರಿ ಸಂದರ್ಶನದಲ್ಲಿ ವಿಫಲರಾದರೆ ನಿರಾಸೆಗೊಳ್ಳದಂತೆ ಹೇಳಿದ ಸಂಸದರು, ಕರಾವಳಿ ಭಾಗದ ಯುವಜನತೆಯಲ್ಲಿ ಹೆಚ್ಚಿನ ವಿಧ್ಯಾಭ್ಯಾಸ, ಪ್ರತಿಭೆ, ಕೆಲಸದಲ್ಲಿ ಶ್ರದ್ದೆ, ಪ್ರಾಮಾಣಿಕತೆ ಇದ್ದು, ಉದ್ಯೋಗ ನೀಡುವ ಕಂಪೆನಿಗಳು ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಯುವ ಜನತೆಯ ಗುರಿ ದೊಡ್ಡದಾಗಿರಬೇಕು, ಗುರಿ ದೊಡ್ಡದಾಗಿದ್ದರೆ ಅದನ್ನು ಸಾಧಿಸುವ ಪ್ರಯತ್ ಸಹ ದೊಡ್ಡದಾಗಿದ್ದು, ಇದರಿಂದ ದೊರೆಯುವ ಪ್ರತಿಫಲ ಸಹ ದೊಡ್ಡದಾಗಿರುತ್ತದೆ, ಉದ್ಯೋಗ ಮೇಳದಲ್ಲಿ ಉದ್ಯೋಗ ನೀಡುವ ಕಂಪೆನಗಳು ಉದ್ಯೋಗದೊಂದಿಗೆ ತಮ್ಮ ಸಿಬ್ಬಂದಿಗಳ ಯೋಗಕ್ಷೆಮ ಸಹ ನೋಡಿಕೊಳ್ಳಬೇಕು , ಉಡುಪಿ ಎಂದರೆ ವಿದ್ಯಾಬ್ಯಾಸದ ಹಬ್ ಎಂಬ ಹೆಸರಿದೆ, ಇದು ಉದ್ಯೋಗ ಒದಗಿಸುವ ಹಬ್ ಸಹ ಆಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ದೊರಕಿಸುವ ಉದ್ದೇಶದಿಂದ ಗ್ರಾಮೀಣ ಪರಿಸರದಲ್ಲಿ ಈ ಉದ್ಯೋಗ ಮೇಳ ಆಯೋಜಿಸಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಸಂದರ್ಶನ ಎದುರಿಸುವ ಕುರಿತು ಕೋಟ ಥೀಂ ಪಾರ್ಕ ನಲ್ಲಿ ನುರಿತ ತರಬೇತುದಾರರಿಂದ 1 ದಿನದ ಕಾರ್ಯಾಗಾರವನ್ನು ಸಹ ನೀಡಲಾಗಿದೆ, ಇಂದು 75 ಕ್ಕೂ ಅಧಿಕ ಕಂಪೆನಿಗಳು ಆಗಮಿಸಿದ್ದು, ಸುಮಾರು 3500 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದು, ಸುಮಾರು 800 ರಿಂದ 1000 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.

ಯಶಸ್ವಿ ಉದ್ಯೋಗ ಮೇಳ….
ಸುಮಾರು 3 ಸಾವಿರಕ್ಕೂ ಹೆಚ್ಚು ಉದ್ಯೋಗಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಿದರು ಹಾಗೂ ಇನ್‌ಫೋಸಿಸ್‌, ವಿಪ್ರೊ ಸೇರಿದಂತೆ ದೇಶ-ವಿದೇಶದ ಸುಮಾರು 75ಕ್ಕೂ ಅಧಿ ಕ ವಿವಿಧ ಪ್ರತಿಷ್ಠಿತ ಉದ್ಯೋಗದಾತ ಕಂಪೆನಿಗಳು ಮೇಳದಲ್ಲಿ ಸಂದರ್ಶನ ನಡೆಸಿದವು. ಮೇಳಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಹಾಗೂ ಪೂರ್ವ ತಯಾರಿಯಾಗಿ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿತ್ತು. ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮತ್ತು ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಇತ್ತು. ಆಗಮಿಸಿದ ಕಂಪೆನಿಗಳು ಪ್ರತ್ಯೇಕ ಕೊಠಡಿಗಳಲ್ಲಿ ಸಂದರ್ಶನದ ನಡೆಸಿದರು. ಓರ್ವ ವಿದ್ಯಾರ್ಥಿ ಎರಡೆರಡು ತಾಂತ್ರಿಕ ಹಾಗೂ ತಾಂತ್ರಿಕೇತರ ಕಂಪನಿಗಳಲ್ಲಿ ಸಂದರ್ಶನಕ್ಕೆ ಅವಕಾಶವಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಸ್ವಯಂ ಸೇವಕರು ಅಗತ್ಯ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆ ಕೂಡ ಇತ್ತು. ಸಂದರ್ಶನ ಎದುರಿಸಿದವರಲ್ಲಿ ಸುಮಾರು 525ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸ್ಥಳದಲ್ಲೇ ಉದ್ಯೋಗಕ್ಕೆ ನಿಯೋಜಿಸಿಕೊಂಡು ಆದೇಶ ಪತ್ರವನ್ನು ನೀಡಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃಧ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಜಿಲ್ಲೆ ಮತ್ತು ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ), ಕೋಟ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ “ಭರವಸೆ” ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ತಾ.ಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ರಘು ತಿಂಗಳಾಯ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಭಾಸ್ಕರ್ ಅಮೀನ್, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವುಡ, ಅದಾನಿ ಗ್ರೂಪ್ ನ ಸಿಇಓ ಕಿಶೋರ್ ಆಳ್ವ, ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

Comments are closed.