ಕರಾವಳಿ

ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Video)

Pinterest LinkedIn Tumblr

ಕುಂದಾಪುರ: ಅಕ್ರಮವಾಗಿ ದನಗಳನ್ನು ಕದ್ದು ಸಾಗಿಸುತ್ತಿದ್ದ ವೇಳೆ ಗೋಕಳ್ಳರನ್ನು ಹಿಡಿಯಲು ಮುಂದಾದಾಗ ಬ್ಯಾರಿಕೇಡ್ ತಗುಲಿ ಗಾಯಗೊಂಡ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಟಿ ನಾಗಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೇಟಿಯಾಗಿ ಆರೋಗ್ಯ ವಿಚಾರಿಸಿದರು.

ಕುಂದಾಪುರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಗಾಯಾಳು ಸಿಬ್ಬಂದಿ ಹಾಗೂ ಅವರ ಸ್ನೇಹಿತರ ಬಳಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೋ ಕಳ್ಳರನ್ನು ಬಂಧಿಸಲು ತೆರಳಿದ ಪೊಲೀಸರಿಗೆ ಇಂತಹ ಪರಿಸ್ಥಿತಿ ಬಂದಿದ್ದು ಪೊಲೀಸರಿಗೆ ರಕ್ಷಣೆ ಇಲ್ಲದ ವ್ಯವಸ್ಥೆ ನಿರ್ಮಾಣವಾಗಿದೆ. ಬಿಜೆಪಿ ಸರಕಾರ ಇರುವಾಗ ಗೋ ಹತ್ಯೆ ನಿಷೇಧ ಜಾರಿಗೆ ತಂದಿದ್ದರೂ ಕೂಡ ಈಗಿನ ಕಾಂಗ್ರೆಸ್ ಸರಕಾರ ಗೋವುಗಳ ಮಾರಣ ಹೋಮಕ್ಕೆ ಪರೋಕ್ಷ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರು.

ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಶಾಂತ್ ಅವರಿಗೆ ಚಿಕಿತ್ಸೆಗೆ ನೆರವು ನೀಡಬೇಕು. ಪೊಲೀಸರ ಆರೋಗ್ಯ ಭಾಗ್ಯ ಈ ಆಸ್ಪತ್ರೆಗೆ ಅನ್ವಹಿಸುವುದಿಲ್ಲವಾಗಿರುವುದರಿಂದ ಸರಕಾರ ಯಾವುದೇ ಅನುದಾನದಲ್ಲಾದರೂ ಕೂಡ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಬೇಕು. ಪೊಲೀಸರಿಗೆ ರಕ್ಷಣೆ ನೀಡುವಲ್ಲಿ ಎಸ್ಪಿ ಅವರು ಕ್ರಮಕೈಗೊಳ್ಳಬೇಕು, ಆರೋಪಿಗಳನ್ನು ಬಂಧಿಸುವಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗಿಳಿಯಬೇಕು. ಗೋ ಹತ್ಯೆ ಗೋ ಸಾಗಾಣಿಕೆ ನಿಯಂತ್ರಣಕ್ಕೆ ಸರಕಾರ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟಕ್ಕೆ ಬಿಜೆಪಿ ಸಿದ್ಧಗೊಳ್ಳುತ್ತದೆ ಎಂದರು.

ಈ ಸಂದರ್ಭ ಬಿಜೆಪಿ ಹಿಂದುಳಿದ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಮೊದಲಾದವರು ಇದ್ದರು.

ಇದನ್ನೂ ಓದಿರಿ: ಅಕ್ರಮ ಗೋ ಸಾಗಾಟ: ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯ; ಎಸ್ಪಿ ಭೇಟಿ (Video)

(ವರದಿ- ಯೋಗೀಶ್ ಕುಂಭಾಸಿ)

Comments are closed.