ಕರಾವಳಿ

ಅಕ್ರಮ ಗೋ ಸಾಗಾಟ: ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯ; ಎಸ್ಪಿ ಭೇಟಿ (Video)

Pinterest LinkedIn Tumblr

ಕುಂದಾಪುರ: ವಾಹನದಲ್ಲಿ 25 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನ ಹಾಗೂ 25 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ರಸ್ತೆಗೆ ಅಡ್ಡಲಾಗಿ ಇಟ್ಟ ಪೊಲೀಸ್ ಬ್ಯಾರಿಕೇಡ್ ತಗುಲಿ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ. 14 ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದು 11 ಜಾನುವಾರುಗಳು ಮೃತಪಟ್ಟಿದೆ. ಕುಂದಾಪುರ ತಾಲೂಕಿನ ಗುಲ್ವಾಡಿ ಎಂಬಲ್ಲಿ ಈ ಘಟನೆ ನಡೆದಿದೆ.

ಅಕ್ರಮವಾಗಿ ಜಾನುವಾರುಗಳನ್ನು ಕೆಂಪು ಬಣ್ಣದ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಸೈ ಶ್ರೀಧರ್ ನಾಯ್ಕ ಅವರಿಗೆ ಮಾಹಿತಿ ಬರುತ್ತದೆ. ಅದರಂತೆಯೇ ಅವರು 5 ಮಂದಿ ಸಿಬ್ಬಂದಿಗಳೊಂದಿಗೆ ವಿವಿಧ ತಂಡಗಳಾಗಿ ಕಾರ್ಯಾಚರಣೆಗೆ ಮುಂದಾಗಿದ್ದು ಠಾಣಾ ವ್ಯಾಪ್ತಿಯ ಗುಲ್ವಾಡಿ ಬ್ರಿಡ್ಜ್ ಬಳಿ ಮೂರ್ನಾಲ್ಕು ತಂಡಗಳಾಗಿ ಜಾನುವಾರು ಸಾಗಾಟದ ವಾಹನ ಅಡ್ದಗಟ್ಟಲು ಹೊಂಚು ಹಾಕಿದ್ದರು. ಅಕ್ರಮ ಗೋ ಸಾಗಾಟದ ವಾಹನದ ಮುಂಭಾಗದ ಒಂದು ಓಮ್ನಿ ಕಾರು ಹಾಗೂ ಇನ್ನೊಂದು ಬೊಲೆರೋ ವಾಹನ ಎಸ್ಕಾರ್ಟ್ (ಬೆಂಗಾವಲು ವಾಹನ) ಆಗಿ ಮುಂದೆ ಬಂದಿದ್ದು ಪೊಲೀಸರು ದಾಳಿ ನಡೆಸುವ ವೇಳೆ ಜಾನುವಾರು ತುಂಬಿದ್ದ ಕೆಂಪು ಬಣ್ಣದ ವಾಹನ ವೇಗವಾಗಿ ಮುಂದೆ ಸಾಗಿದೆ.

ಸಿನಿಮೀಯ ಶೈಲಿಯ ಚೇಸಿಂಗ್!
ಜಾನುವಾರು ತುಂಬಿದ್ದ ವಾಹನ ಪೊಲೀಸರ ದಿಕ್ಕು ತಪ್ಪಿಸಿ ಮುಂದೆ ಸಾಗಲು ಯತ್ನಿಸಿದಾಗ ಪೊಲೀಸರು ತಮ್ಮ ಇಲಾಖೆಯ ಜೀಪಿನಲ್ಲಿ ವಾಹನವನ್ನು ಹಿಂಬಾಲಿಸಲು ಯತ್ನಿಸಿದ್ದಾರೆ. ಶರ ವೇಗದಲ್ಲಿ ಆ ವಾಹನ ಚಲಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗಲೂ ಪೊಲೀಸರು ಧೃತಿಗೆಡದೆ ವಾಹನವನ್ನು ಕಿಲೋಮೀಟರುಗಟ್ಟಲೇ ಹಿಂಬಾಲಿಸಿದ್ದಾರೆ. ಅಲ್ಲದೇ ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಠಾಣೆಗೆ ಸಂದೇಶ ನೀಡಿ ನಾಕಾಬಂದಿ ಹಾಕಲು ಸೂಚನೆ ನೀಡಿದ್ದಾರೆ.

(ಗಾಯಗೊಂಡ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಟಿ. ನಾಗಣ್ಣ)

ಬ್ಯಾರಿಕೇಡ್ ಹೊಡೆದು ಸಿಬ್ಬಂದಿಗೆ ಗಾಯ
ಗ್ರಾಮಾಂತರ ಠಾಣೆ ಎದುರು ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಅಡ್ದಗಟ್ಟಲು ಮುಂದಾದಾಗ ಅತಿ ವೇಗವಾಗಿ ಬಂದ ಜಾನುವಾರು ತುಂಬಿದ ವಾಹನ ಬ್ಯಾರಿಕೇಡ್ ಲೆಕ್ಕಿಸದೇ ಅದಕ್ಕೂ ಹೊಡೆದು ಮುಂದೆ ಸಾಗಿದೆ. ಈ ವೇಳೆ ಬ್ಯಾರಿಕೇಡ್ ಸಮೀಪ ಕರ್ತವ್ಯದಲ್ಲಿದ್ದ ಸಿಬ್ಬಂದಿ ಪ್ರಶಾಂತ್ ಟಿ. ಎನ್ ಎನ್ನುವವರಿಗೆ ಎರಡು ಕಾಲಿಗೆ ಗಂಭೀರ ಗಾಯಗಳಾಗಿದೆ. ತಕ್ಷಣ ಅವರನ್ನು ಸಹ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮುಂದುವರಿದ ಕಾರ್ಯಾಚರಣೆ..
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಲೆಕ್ಕಿಸದೇ ವಾಹನ ಮುಂದಕ್ಕೆ ಸಾಗಿತ್ತು. ಹಿಂಬದಿಯಿದ್ದ ಎಸೈ ಇತರರಿದ್ದ ಜೀಪು ವಾಹನವನ್ನು ಇನ್ನಷ್ಟು ದೂರ ಬೆನ್ನಟ್ಟಿದ್ದಾಗ ವಾಹನದಲ್ಲಿದ್ದ ಆರೋಪಿಗಳು ವಾಹನ ನಿಲ್ಲಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ 14 ಜಾನುವಾರುಗಳ ರಕ್ಷಣೆ ಮಾಡಲಾಗಿದ್ದು 11 ಜಾನುವಾರುಗಳು ಮೃತಪಟ್ಟಿದೆ. ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಅಸ್ವಸ್ಥ ಜಾನುವಾರುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಆರೋಪಿಗಳನ್ನು ಬಂಧಿಸುತ್ತೇವೆ: ಎಸ್ಪಿ
ಜಾನುವಾರು ಸಾಗಾಟದ ವೇಳೆ ಆರೋಪಿಗಳನ್ನು ಹಿಡಿಯಲು ಮುಂದಾದಾಗ ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಅಕ್ರಮ ಜಾನುವಾರು ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಎಲ್ಲಾ ಠಾಣೆ ಪಿಸ್ಸೈ ಅವರು ವಿಶೇಷ ಕರ್ತವ್ಯದಲ್ಲಿದ್ದರು. ಗುಲ್ವಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಲಭಿಸಿದ್ದು ಕೂಡಲೇ ಬಂಧಿಸುತ್ತೇವೆ ಎಂದು ಉಡುಪಿ ಜಿಲ್ಲಾ ಎಸ್ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿ‌ಎಸ್‌ಐ ಶ್ರೀಧರ್ ನಾಯ್ಕ, ಹೆಡ್ ಕಾನ್ಸ್‌ಟೇಬಲ್‌ಗಳಾದ ಮಧು, ಮರಿಗೌಡ, ಇಲಾಖೆ ಜೀಪು ಚಾಲಕ ಆನಂದ ಪೂಜಾರಿ, ಗ್ರಹರಕ್ಷಕ ದಳದ ಸುಪ್ರತ್ ಮತ್ತು ಜಗನ್ನಾಥ್ ಇದ್ದರು.

ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈ‌ಎಸ್ಪಿ ಪ್ರವೀಣ್ ನಾಯಕ್, ವಿವಿಧ ಠಾಣೆಯ ಉಪನಿರೀಕ್ಷಕರು ಭೇಟಿ ನೀಡಿದ್ದಾರೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

 

Comments are closed.