ಕರಾವಳಿ

ಏರಡುವರೆ ವರ್ಷದಿಂದ ಮನೆ ಬಿಟ್ಟ ಬಾಲಕ ಫೇಸ್‌ಬುಕ್‌ ಮೂಲಕ ಮರಳಿ ಮನೆಗೆ!

Pinterest LinkedIn Tumblr

ಉಡುಪಿ: ಮನೆ ಬಿಟ್ಟಿದ್ದ ಬಾಲಕನನ್ನು ಎರಡೂವರೆ ವರ್ಷದ ಆನಂತರ ಉಡುಪಿ ಅಪರಾಧ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ. ಮಣಿಪಾಲ ಅನಂತನಗರದ ಹುಡ್ಕೊ ಕಾಲನಿ ನಿವಾಸಿ ಶ್ರೀಧರ ಕೆ. ಅಮೀನ್‌ ಅವರ ಪುತ್ರ ಪ್ರೇಮ್ ಕಿರಣ್‌ ಅಮೀನ್‌ (16) ಪತ್ತೆಯಾದ ಬಾಲಕ. ಪುತ್ರ ನಾಪತ್ತೆಯಾಗಿದ್ದ ಬಗ್ಗೆ ಶ್ರೀಧರ ಕೆ. ಅಮೀನ್‌ ಅವರು 2015ರ ಜ. 31ರಂದು ಮಣಿಪಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆವಾಗ ಅವರ ಪುತ್ರನಿಗೆ ಹದಿಮೂರುವರೆ ವರ್ಷ ವಯಸ್ಸಾಗಿತ್ತು.

*ಪತ್ತೆಗೆ ಸಹಕಾರಿಯಾದ ಫೇಸ್‌ಬುಕ್‌*
ನಾಪತ್ತೆಯಾಗಿದ್ದ ಪ್ರೇಮ್ ಕೆಲ ಸಮಯಗಳಿಂದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸಕ್ರಿಯನಾಗಿರುವುದನ್ನು ಜಿಲ್ಲಾ ಅಪರಾಧ ಪೊಲೀಸ್‌ ಠಾಣೆಯ ಅಧಿಕಾರಿ ಹಾಗೂ ಅಕ್ರಮ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಘಟಕದ ಅಧಿಕಾರಿ ರತ್ನಕುಮಾರ್‌ ಜಿ. ಮಾಹಿತಿ ಕಲೆ ಹಾಕಿದ್ದರು. ಬೆಂಗಳೂರು ಸೈಬರ್‌ ಕ್ರೈಂ ವಿಭಾಗದ ಪೊಲೀಸರ ಸಹಕಾರ ಪಡೆದು ಪ್ರೇಮ್ ಮುಂಬಯಿಯಲ್ಲಿರುವುದನ್ನು ಪತ್ತೆಹಚ್ಚಿದ ಪೊಲೀಸರು ಅಲ್ಲಿನ ದವಾ ಬಜಾರ್‌ನಿಂದ ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದಾರೆ.

ಬಾಲಕನನ್ನು ತಂದೆಯ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ ಓದಿನಲ್ಲಿ ನಿರಾಸಕ್ತಿ ಇದ್ದು, ಕೆಲಸ ಅರಸಿ ಮನೆ ಬಿಟ್ಟು ಮುಂಬಯಿಗೆ ತೆರಳಿದ್ದೆ. ಅಲ್ಲಿ ಕ್ಯಾಂಟೀನ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದೆ. ಯಾರೂ ನನ್ನನ್ನು ಅಪಹರಿಸಿಲ್ಲ ಎಂದು ಹೇಳಿದ್ದು ಮುಂದೆ ಕುಟುಂಬದ ಜೊತೆಗಿರುವೆ ಎಂದಿದ್ದಾನೆ.

Comments are closed.