ಕರಾವಳಿ

ಕುಂದಾಪುರದ ಕಮಲಶಿಲೆ ರಸ್ತೆಯಲ್ಲಿ ಹುಲಿರಾಯ ಸಂಚಾರ; ಕಿಡಿಗೇಡಿಗಳಿಂದ ಹಳೆ ವಿಡಿಯೋ ವೈರಲ್..?! (ವೀಡಿಯೋ)

Pinterest LinkedIn Tumblr

ಕುಂದಾಪುರ: ಬೃಹತ್ ಗಾತ್ರದ ಹುಲಿಯೊಂದು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಹಿಂಬದಿ ವಾಹನದಲ್ಲಿದ್ದವರು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದು ಸದ್ಯ ಈ ವಿಡಿಯೋ ವಾಟ್ಸಾಪ್ ಹಾಗೂ ಫೇಸ್‌ಬುಕ್‌ನಲ್ಲಿ ವೈರಲ್ ಆಗಿಬಿಟ್ಟಿದೆ.

ಕುಂದಾಪುರ ಹಾಗೂ ಉಡುಪಿ ಭಾಗದ ವಾಟ್ಸಾಪ್ ಗ್ರೂಫ್‌ಗಳಲ್ಲಿ ಇಂತಹದ್ದೊಂದು ವಿಡಿಯೋ ಬರುತ್ತಿದ್ದು ತಾಲೂಕಿನ ಕಮಲಶಿಲೆ ಸಂಪರ್ಕ ರಸ್ತೆಯಲ್ಲಿ ಹುಲಿ ಸಂಚಾರ ಎಂಬ ಸಂದೇಶವನ್ನು ಅದರೊಂದಿಗೆ ಹರಿಯಬಿಡಲಾಗಿದೆ. ಪ್ರಸ್ತುತ ಈ ವಿಡಿಯೋ ತೀರಾ ಗ್ರಾಮೀಣ ಪ್ರದೇಶದ ರಸ್ತೆಯಂತೆ ಕಂಡುಬರುತ್ತಿದ್ದು ವಾಹನದ ಕೆಲವೇ ಅಂತರದಲ್ಲಿ ಹುಲಿ ಸಂಚರಿಸುತ್ತಿರುವುದು ಮತ್ತು ವಾಹನದ ಬೆಳಕಿಗೆ ಹುಲಿ ಯಾವುದೇ ಗೊಂದಲಕ್ಕೂ ಒಳಗಾಗದೇ ಗಾಂಭೀರ್ಯದಿಂದಲೇ ಹೆಜ್ಜೆ ಹಾಕಿಹೋಗುವ ಸುಮಾರು 1 ನಿಮಿಷದ ವಿಡಿಯೋ ಇದೆ.

ಈ ಬಗ್ಗೆ ಶಂಕರನಾರಾಯಣ ವಯಯ ಅರಣ್ಯಾಧಿಕಾರಿಗಳಿಗೆ ವಿಚಾರಿಸಿದ್ರೇ ಯಾವುದೇ ರೀತಿಯ ಮಾಹಿತಿಯಿಲ್ಲ ಹಾಗೂ ಸಾರ್ವಜನಿಕರ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ವಿಡಿಯೋ ಕಾರವಾರದ ಕೈಗಾ ಪ್ರದೇಶದಲ್ಲಿ ಚಿತ್ರಿಸಲಾದ ವಿಡಿಯೋ ಆಗಿದ್ದು ಕುಂದಾಪುರದ್ದಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಕಾರವಾರದ ಕೈಗಾದಲ್ಲಿ ವಾಘ್ರ ಪ್ರತ್ಯಕ್ಷ ಎಂಬ ಸುದ್ದಿಯೂ ಭಾನುವಾರ ಖಾಸಗಿ ವಾಹಿನಿಯೊಂದರಲ್ಲಿ ಬಿತ್ತರವಾಗಿದೆ. ಇನ್ನೊಂದೆಡೆ ಈ ವಿಡಿಯೋ ಈ ಹಿಂದೆಯೂ ವೈರಲ್ ಆಗಿದ್ದು ಅದರಲ್ಲಿ ಮರಾಠಿ ಮಾತನಾಡುವುದು ಕೇಳಿಬಂದಿದ್ದು ಅದನ್ನು ಸದ್ಯ ವೈರಲ್ ಮಾಡಿದ ವಿಡಿಯೋದಲ್ಲಿ ಮ್ಯೂಟ್ ಮಾಡಲಾಗಿದೆ. ಹಳೆಯ ಈ ವಿಡಿಯೋ ಸುಮಾರು 1 ನಿಮಿಷ 30 ಸೆಕೆಂಡ್ ಇದ್ದು ಮೇಲ್ನೋಟಕ್ಕೆ ಇದು ಸಫಾರಿ ವೇಳೆ ಚಿತ್ರಿಸಿದ ವಿಡಿಯೋ ಆಗಿದ್ದು ಯಾವುದೋ ಕಿಡಿಗೇಡಿಗಳು ಸದ್ಯ ಅದನ್ನು ಕಮಲಶಿಲೆ ಹೆಸರಿನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಆದರೇ ಕಮಲಶಿಲೆಯಲ್ಲಿ ಹುಲಿ ಸಂಚಾರ ಎಂಬ ಬಗ್ಗೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ವೈರಲ್ ವಿಡಿಯೋ ಕಳೆದ ಒಂದೆರಡು ದಿನದಿಂದ ಹರಿದಾಡುತ್ತಿರುವ ಕಾರಣ ಕುಂದಾಪುರದ ಸಿದ್ದಾಪುರ, ಕಮಲಶಿಲೆ, ಹಳ್ಳಿಹೊಳೆ, ಆಜ್ರಿ ಮೊದಲಾದ ಗ್ರಾಮೀಣ ಪ್ರದೇಶಗಳ ಜನರು ಕಂಗಾಲಾಗಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Comments are closed.