ಭಟಿಂಡಾ: 25 ವರ್ಷದ ಗರ್ಭಿಣಿ ನೃತ್ಯಗಾರ್ತಿಯೊಬ್ಬರು ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದ್ದು , ಇದರ ವಿಡಿಯೋ ಈಗ ವೈರಲ್ ಆಗಿದೆ.
ಮೃತಳನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದ್ದು ಹೊಟ್ಟೆಗೆ ಗುಂಡು ಹೊಕ್ಕಿದ್ದರಿಂದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಆಶೀರ್ವಾದ ವಿವಾಹ ಭವನದಲ್ಲಿ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ನೃತ್ಯ ತಂಡವೊಂದು ಕಾರ್ಯಕ್ರಮ ನಡೆಸಿಕೊಡುತ್ತಿತ್ತು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಬಿಲ್ಲಾ ಎಂಬಾತ ವೇದಿಕೆ ಮೇಲೆ ನೃತ್ಯ ಮಾಡಲು ಅವಕಾಶ ಕೇಳಿದ. ಆದರೆ ಆತನಿಗೆ ನೃತ್ಯ ತಂಡದ ಜತೆ ಸೇರಿ ನೃತ್ಯ ಮಾಡಲು ಅವಕಾಶವನ್ನು ನೀಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಕುಲ್ವಿಂದರ್ ಕೌರ್ ಎಂಬ ನೃತ್ಯಗಾರ್ತಿಯ ಮೇಲೆ ಗುಂಡು ಹಾರಿಸಿದ ಎಂದು ಹೇಳಲಾಗುತ್ತಿದೆ. ಗುಂಡಿನ ಏಟಿಗೆ ಗಾಯಗೊಂಡ ಕೌರ್ ಕುಸಿದು ಬಿದ್ದರು. ಆದರೆ ಅವರ ತಂಡ ನೃತ್ಯವನ್ನು ಮುಂದುವರೆಸಿತು. ಕೆಲವು ಸಮಯದ ನಂತರವಷ್ಟೇ ಅವರಿಗೆ ಕೌರ್ ಗುಂಡಿನ ಏಟಿಗೆ ತುತ್ತಾಗಿರುವುದು ತಿಳಿದು ಬಂತು. ತಕ್ಷಣ ಆಕೆಯನ್ನು ಹತ್ತಿರದಲ್ಲಿದ್ದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಆಕೆಯಾಗಲೇ ಸಾವನ್ನಪ್ಪಿರುವುದಾಗಿ ಘೋಷಿಸಿದರು.
ಕೆಲವು ವರದಿಗಳ ಪ್ರಕಾರ ಸಂಭ್ರಮಾಚರಣೆಯಲ್ಲಿ ಹಾರಿಸಲಾದ ಗುಂಡು ತಗುಲಿ ಮಹಿಳೆ ಮೃತಪಟ್ಟಿದ್ದಾಳೆ. ಆದರೆ ಮೃತಳ ಪತಿ ಹರಿಜಿಂದರ್ ಸಿಂಗ್ ಬಿಲ್ಲಾ ಎಂಬಾತನೇ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.