ಉಡುಪಿ: ಶಿರ್ವ ಗ್ರಾಮದ ಮಟ್ಟಾರು ರಸ್ತೆಯ ಬಳಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವುಗೈದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಬೂಬಕ್ಕರ್ ಯಾನೆ ಅಬ್ದುಲ್ ಖಾದರ್ ಯಾನೆ ಇತ್ತೆ ಬರ್ಪೆ ಅಬುಬಕ್ಕರ್ ಬಂಧಿತ ಆರೋಪಿ. ಜೂ.27ರಂದು ಪವಿತ್ರ ಪೂಜಾರ್ತಿ ಎಂಬವರ ಮನೆಗೆ ನುಗ್ಗಿದ ಕಳ್ಳರು, 12,75,000ರೂ. ಮೌಲ್ಯದ ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ ಒಟ್ಟು 66.760 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 7,00,000ರೂ. ಎಂದು ಅಂದಾಜಿಸಲಾಗಿದೆ. ಈತನ ವಿರುದ್ಧ ಸುಮಾರು 30ಕ್ಕಿಂತ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿವೆ.
ಕಳವು ನಡೆದಿರುವ ವಿಧಾನವನ್ನು ಅವಲೋಕಿಸಿದ ಪೊಲೀಸರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್ಕ್ , ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದಾ ಅವರ ನೇತೃತ್ವದಲ್ಲಿ , ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕ ಜಯಶ್ರೀ ಎಸ್ ಮಾನೆ ಅವರ ನೇತೃತ್ವದ ತಂಡ ಪತ್ತೆಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಅಬೂಬಕ್ಕರ್‌ನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಉಪ ನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಎಸ್, ಪಡುಬಿದ್ರೆ ಪೊಲೀಸ್ ಉಪ ನಿರೀಕ್ಷಕ ಅನಿಲ್ ಕುಮಾರ್ ಟಿ. ನಾಯ್ಕ್, ಕಾಪು ಪೊಲೀಸ್ ಉಪ ನಿರೀಕ್ಷಕ ಮಹೇಶ ಟಿ. ಎಂ ಮತ್ತು ಸಿಬ್ಬಂದಿಗಳಾದ ಮಂಜುನಾಥ ಅಡಿಗ, ಅನ್ವರ್ ಆಲಿ, ಸಿದ್ಧರಾಯಪ್ಪ, ಕಿರಣ್, ಮಂಜುನಾಥ ಹೊಸಮನಿ, ಬಸವರಾಜ್, ಪ್ರಕಾಶ್ ಸುವರ್ಣ ಹಾಗೂ ಶ್ರೀಧರ್ ಶೆಟ್ಟಿಗಾರ್, ಹಾಗೂ ವೃತ್ತ ಕಛೇರಿಯ ಸಿಬ್ಬಂದಿಯವರಾದ ರಿಯಾಜ್ ಅಹ್ಮದ್, ಶರಣಪ್ಪ, ಜೀವನ್, ಪಾವನಾಂಗಿ, ದಿನೇಶ್ ಮತ್ತು ಜೀಪು ಚಾಲಕರಾದ ಜಗದೀಶ್, ಪ್ರಕಾಶ್ ಭಾಗವಹಿಸಿದ್ದರು.
Comments are closed.