ಮಾನಸಿಕ ಹಾಗೂ ಶಾರೀರಿಕವಾಗಿ ಆರೋಗ್ಯವಂತರಾಗಿರಲು ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯ – ಪ್ರವೀಣ್ ಬೋಜ ಶೆಟ್ಟಿ.
ಮುಂಬಯಿ: ಬಂಟರ ಸಂಘ ಮುಂಬಯಿ ಇತರ ಎಲ್ಲಾ ಯೋಜನೆಗಳಿಗೆ ಮಹತ್ವ ನೀಡುವಂತೆ, ಸದಸ್ಯರ ಆರೋಗ್ಯದ ಕಡೆಯೂ ಹೆಚ್ಚಿನ ಮಹತ್ವ ನೀಡುತ್ತಿದೆ. ಜೀವನದಲ್ಲಿ ಶಾರೀರಿಕ, ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಆರೋಗ್ಯವಂತರಾಗಬೇಕಾದ ಅಗತ್ಯವಿದೆ. ಇದಕ್ಕಾಗಿ ಪ್ರತಿಯೊಬ್ಬರು ನಿಯಮಿತವಾಗಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡುವ ಅಗತ್ಯವಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.

ಜು. 27 ರಂದು ಬೆಳಿಗ್ಗೆ ಬಂಟರ ಸಂಘ ಮುಂಬಯಿಯ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಇವರ ನೇತೃತ್ವದಲ್ಲಿ ಮಲಾಡ್ ಪಶ್ಚಿಮದ ತುಂಗಾ ಮಲ್ಟಿ ಸ್ಪೆಶಾಲಿಟಿ ಹಾಸ್ಪಟಲ್, ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ವಿಧವೆಯರಿಗೆ ಆರ್ಥಿಕ ಸಹಾಯ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರವೀಣ್ ಭೋಜ ಶೆಟ್ಟಿ ಅವರು, ತುಂಗಾ ಆಸ್ಪತ್ರೆಯು ನಮ್ಮವರದ್ದೇ ಆಗಿದ್ದು ಈ ಆಸ್ಪತ್ರೆ ಕೋರೋನಾ ಸಮಯದಲ್ಲಿ ನನಗೆ ಪುನರ್ಜನ್ಮ ನೀಡಿದೆ. ತುಂಗಾ ಆಸ್ಪತ್ರೆಯಲ್ಲಿ ನಮ್ಮವರಿಗೆ ರಿಯಾಯಿತಿಯೂ ಇದೆ. ನಾವು ಮೆದುಳನ್ನು ಖಾಲಿಯಾಗಿರಿಸದೇ ಅದಕ್ಕೆ ಸದಾ ಏನಾದರೊಂದು ಕೆಲಸವನ್ನು ಕೊಡುತ್ತಿರಬೇಕು. ಸದಾ ಸಮಾಜ ಸೇವೆಯಲ್ಲಿ ನಿರತರಾದಲ್ಲಿ ಮೆದುಳು ಚುರುಕಾಗಿರುತ್ತದೆ, ಅದು ಆರೋಗ್ಯಕ್ಕೂ ಉತ್ತಮ. ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಮೆಡಿಕ್ಲೈಮ್ ಮಾಡಿಸಿ ಕೊಳ್ಳುವ ಅಗತ್ಯವಿದೆ. ಪ್ರಧಾನ ಮಂತ್ರಿಯವರ ಆಯುಷ್ಮಾನ್ ಕಾರ್ಡಿನಲ್ಲಿ ಐದು ಲಕ್ಷ ಮೊತ್ತದ ಆರೋಗ್ಯವಿಮೆಯಿದೆ. ಮುಂಡಪ್ಪ ಪಯ್ಯಡೆಯವರೂ ಸೇರಿ ಈ ಪ್ರಾದೇಶಿಕ ಸಮಿತಿಯ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ. ಇಲ್ಲಿ ಪ್ರತಿಯೊಬ್ಬರೂ ಅವರವರ ಜವಾಬ್ಧಾರಿಯನ್ನು ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇಂದು ಸಂಘದಿಂದ ಸಹಾಯ ಪಡೆಯಲು ಬಾಕಿ ಉಳಿದ ವಿದ್ಯಾರ್ಥಿಗಳಿಗೆ ಹಾಗೂ ವಿಧವೆಯರಿಗೆ ಆರ್ಥಿಕ ಸಹಾಯವನ್ನು ಪ್ರಾದೇಶಿಕ ಸಮಿತಿ ವಿತರಿಸಿ ಪ್ರೋತ್ಸಾಹಿಸಿದ್ದು ಅಭಿನಂದನೀಯ ಎಂದರು.
ಬಂಟ್ಸ್ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ವರೂಪ್ ಹೆಗ್ಡೆಯವರು ಮಾತನಾಡುತ್ತಾ ವೈದ್ಯಕೀಯ ಶಿಬಿರವನ್ನು ನಡೆಸಲು ಅವಕಾಶ ಮಾಡಿಕೊಟ್ಟ ತುಂಗಾ ಗ್ರೂಪ್ ಗೆ ಅಭಿನಂದನೆ ಸಲ್ಲಿಸಿ, ಬಂಟರ ಸಂಘ ಮುಂಬಯಿಯಲ್ಲಿ ಸಮಾಜ ಭಾಂಧವರ ಸೇವೆ ಮಾಡಲು ಬಂಟ್ಸ್ ಛೇಂಬರ್ ಆಫ್ ಕಾಮರ್ಸ್, ಬಂಟ್ಸ್ ಲಾ ಫಾರ್ಂ, ಬಂಟ್ಸ್ ನ್ಯಾಯ ಮಂಡಳಿ , ಎಸೋಸಿಯೇಷನ್ ಆಪ್ ಬಂಟ್ಸ್ ಚಾರ್ಟರ್ಡ್ ಎಕೌಂಟೆಂಟ್, ಮುಂತಾದ ಅಂಗ ಸಂಸ್ಥೆಗಳಿವೆ. ಇದೀಗ ಆರೋಗ್ಯ ಕ್ಷೇತ್ರದಲ್ಲಿಯೂ ಸೇವೆಗೈಯಲು ಪ್ರಥಮವಾಗಿ ಎಸೋಷಿಯೇಶನ್ ಆಫ್ ಬಂಟ್ಸ್ ಡಾಕ್ಟರ್ಸ್ ಎಂಬ ಸಂಸ್ಥೆಯೊಂದು ಆಗಸ್ಟ್ 10 ರಂದು ಬಂಟರ ಸಂಘದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರಲ್ಲಿ ಸಮಾಜದ ಸುಮಾರು 400 ಕ್ಕೂ ಹೆಚ್ಚು ಡಾಕ್ಟರ್ ಗಳು ಈಗಾಗಲೇ ಸದಸ್ಯರಾಗಿದ್ದು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.ಈ ಸಮಾರಂಭದಲ್ಲಿ ಎಲ್ಲಾ ಸಮಾಜ ಭಾಂಧವರು ಭಾಗವಹಿಸಬೇಕೆಂದು ವಿನಂತಿಸಿದರು.
ತುಂಗಾ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಸಿ.ಎಂ.ಡಿ. ಡಾ. ಸತೀಶ್ ಶೆಟ್ಟಿಯವರು ಮಾತನಾಡುತ್ತಾ ನಮ್ಮ ಸಂಸ್ಥೆಗೆ ಬಂಟರ ಸಂಘವು ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದೆ. ಇಂದಿನ ಕಾರ್ಯಕ್ರಮಕ್ಕೆ ನಮ್ಮ ಆಸ್ಪ್ರತ್ರೆಯನ್ನು ಆಯ್ಕೆ ಮಾಡಿದ್ದು ನಮ್ಮ ಭಾಗ್ಯ. ಮುಂಬಯಿ ಮಹಾನಗರದಲ್ಲಿ ಬಹಳ ಸಣ್ಣ ಮಟ್ಟದಿಂದ ಮೀರಾ ರೋಡ್ ನಲ್ಲಿ ಪ್ರಾರಂಭಿಸಿದ ನಮ್ಮ ತುಂಗಾ ಗ್ರೂಫ್ ಆಫ್ ಹಾಸ್ಪಿಟಲ್ ಇಂದು ಬೊಯಿಸರ್ , ಮಲಾಡ್, ಜುಹೂ ಮುಂತಾದ ಕಡೆಗಳಿಗೆ ವಿಸ್ತರಿಸಿ, ಬೆಂಗಳೂರಿಗೂ ತಲುಪಿದ್ದೇವೆ. ನಾವು ಈ ಮಟ್ಟಕ್ಕೆ ಬೆಳೆಯಲು ಎಲ್ಲಾ ತುಳು ಕನ್ನಡಿಗರು ಬಹಳ ಸಹಕಾರವನ್ನಿತ್ತಿದ್ದಾರೆ. ಹಾಗಾಗಿ ಸಮಾಜದ ಋಣ ನಮ್ಮ ಮೇಲಿದೆ. ಸಮಾಜದಿಂದ ಪಡೆದದ್ದನ್ನು ತಿರುಗಿ ಸಮಾಜಕ್ಕೆ ಕೊಡುವುದು ಎಲ್ಲರ ಕರ್ತವ್ಯ. ಆ ನೆಲೆಯಲ್ಲಿ ಇಂದು ನಮ್ಮ ಆಸ್ಪತ್ರೆಯಲ್ಲಿ ಆಯೋಜಿಸಿದ ಕಾರ್ಯಕ್ರಮ ನಮಗೆ ಬಹಳ ಸಂತಸವನ್ನು ನೀಡಿದೆ. ಶರೀರದಲ್ಲಿನ ಆಂತರಿಕ ಬದಲಾವಣೆಗೆ ಕಾಲಕಾಲಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆ ಮಾಡಬೇಕು ಅದರೊಂದಿಗೆ ಯೋಗಾಭ್ಯಾಸ, ವ್ಯಾಯಾಮದ ಅಗತ್ಯವೂ ಇದೆ. ಪ್ರಾಣಾಯಾಮದ ಮೂಲಕ ಮನಸ್ಸನ್ನು ಸ್ವಚ್ಛವಾಗಿರಿಸಿ. ಮಾನಸಿಕ ಒತ್ತಡ ಇಲ್ಲದಿದ್ದಲ್ಲಿ ಹೃದಯಾಘಾತವಾಗಲು ಅಸಾಧ್ಯ ಎನ್ನುತ್ತಾ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಿದರು.
ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ ಯವರು ಪ್ರಾರ್ಥನೆಗೈದರು. ಇತ್ತೀಚೆಗೆ ನಿಧನರಾದ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿಯವರಿಗೆ ಹಾಗೂ ತುಂಗಾ ಗ್ರೂಪ್ ನ ಹರಿಪ್ರಸಾದ್ ಬಿ ಶೆಟ್ಟಿ ಇವರಿಗೆ ಮೌನ ಪ್ರಾರ್ಥನೆ ಯೊಂದಿಗೆ ಸಂತಾಪ ಸೂಚಿಸಲಾಯಿತು, ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿಯಿಂದ ಧನ ಸಹಾಯ ಪಡೆಯಲು ಬಾಕಿ ಇರುವ ಮಕ್ಕಳಿಗೆ ಹಾಗೂ ವಿಧವೆಯರಿಗೆ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಆರ್ಥಿಕ ಸಹಾಯವನ್ನು ನೀಡಲಾಯಿತು. ಸಮಾರಂಭಕ್ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಡಾ. ಶರ್ಮಿಳಾ ಶೆಟ್ಟಿ ಹಾಗೂ ಡಾ. ಕರಣ್ ಶೆಟ್ಟಿಯವರನ್ನು ಹಾಗೂ ಆಹಾರ್ ಸಂಸ್ಥೆಯ ಝೋನ್ 10 ರ ಉಪಾಧ್ಯಕ್ಷ ಗಂಗಾಧರ ಎ ಶೆಟ್ಟಿಯವರನ್ನು ಗೌರವಿಸಲಾಯಿತು.
ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಸಿ.ಯಸ್. ಉತ್ತಮ್ ಶೆಟ್ಟಿ , ಬೊರಿವಲಿ ಎಜ್ಯುಕೇಶನ್ ಸಮಿತಿಯ ಧನ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಯಸ್ ಪಯ್ಯಡೆ, ಕೋ. ಕನ್ವೇನರ್ ಅಶೋಕ್ ವಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ್ ಶೆಟ್ಟಿ,ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಸಂಚಾಲಕಿ ಶೈಲಜಾ ಎ. ಶೆಟ್ಟಿ, ಜವಾಬ್ ಅಧ್ಯಕ್ಷರಾದ ರಾಜೇಶ್ ಬಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಪೊಯಿಸರ್ ಜಿಮ್ಖಾನದ ಕರುಣಾಕರ ಯಸ್ ಶೆಟ್ಟಿ, ಉದ್ಯಮಿಗಳಾದ ಪಾಂಡು ಶೆಟ್ಟಿ ಮತ್ತು ಶ್ಯಾಮ್ ಶೆಟ್ಟಿ, ತುಂಗಾ ಹಾಸ್ಪಟಲ್ ನ ಡಾ. ಚಿಂತನ್ ಹೆಗ್ಡೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಆರ್. ಜಿ. ಶಾ, ವೈದ್ಯರುಗಳಾದ ಡಾ. ಶಿಲ್ಪಾ, ಡಾ. ಹೇಮಂತ್ ಮತ್ತು ತಂಡದವರನ್ನು ಗೌರವಿಸಲಾಯಿತು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕಾಂದಿವಲಿ ರಘುನಾಥ ಎನ್. ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿಯವರು ಧನ್ಯವಾದವಿತ್ತರು. ವೈದ್ಯಕೀಯ ಶಿಬಿರಕ್ಕೆ ಸುಮಾರು 140 ಕ್ಕೂ ಮಿಕ್ಕಿದ ಸಂಖ್ಯೆಯ ಸಮಾಜ ಭಾಂಧವರು ಆಗಮಿಸಿ ಅದರ ಪ್ರಯೋಜನವನ್ನು ಪಡೆದುಕೊಂಡರು.
ತುಂಗಾ ಸಮೂಹ ಸಂಸ್ಥೆಯ ಡಾ. ಸತೀಶ್ ಶೆಟ್ಟಿಯವರು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲಿಯೂ ಉನ್ನತ ಮಟ್ಟದಲ್ಲಿದ್ದು ನಮ್ಮ ಎಲ್ಲಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ. ಪ್ರತಿ ಭಾರಿಯೂ ವೈದ್ಯಕೀಯ ಶಿಬಿರ ನಡೆಸಲು ಇವರ ಸಹಾಯ ಹಾಗೂ ಪ್ರೋತ್ಸಾಹ ನಿರಂತರವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಬಂಟರ ಸಂಘ ಮತ್ತು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಉಪಸಮಿತಿಗಳು ಸಹಕರಿಸಿದ್ದು ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ.- ಪ್ರೇಮನಾಥ ಶೆಟ್ಟಿ ಕೊಂಡಾಡಿ, ಕಾರ್ಯಾಧ್ಯಕ್ಷ, ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ
ಆರೋಗ್ಯ ತಪಾಸಣೆಗೆ ನೀವೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ಯಾಕೆಂದರೆ ಇಂದಿನ ಜೀವನ ಪದ್ದತಿಯಲ್ಲಿ ನಿಯಮಿತವಾಗಿ ಅರೋಗ್ಯ ತಪಾಸಣೆಯ ಅಗತ್ಯವಿದೆ. ಇದರಿಂದ ಭವಿಷ್ಯದಲ್ಲಿ ಬರುವ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಸಕಾಲದಲ್ಲಿ ಸುಲಭವಾಗಿ ಪರಿಹರಿಸಲು ಸಾಧ್ಯವಿದೆ. ಎಲ್ಲಾ ರೋಗಗಳು ಪ್ರಾರಂಭವಾಗುತ್ತಲೇ ಗೋಚರವಾದರೆ ಎಲ್ಲದಕ್ಕೂ ಪರಿಹಾರವಿದೆ.ಇಂದು ನನ್ನನ್ನು ಇಲ್ಲಿಗೆ ಕರೆದು ಗೌರವಿಸಿದುದಕ್ಕೆ ನನ್ನ ಶುಭಕಾಮನೆಗಳು.-ಡಾ. ಕರಣ್ ಶೆಟ್ಟಿ, ಕಾರ್ಡಿಕ್ ಸರ್ಜನ್
Comments are closed.