ಬೆಂಗಳೂರು: ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಆದ್ಯತೆ ನೀಡಿ, ಬಳಿಕ ಆ ಪ್ರದೇಶಕ್ಕೆ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಭರವಸೆ ನೀಡಿದ್ದಾರೆ.

ರವಿವಾರ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.), ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ “ಕುಂದಾಪ್ರ ಕನ್ನಡ ಹಬ್ಬ-2025″ರ ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಮಾತನಾಡಿದರು. ಇದೇ ವೇಳೆ ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಡಿಸಿಎಂ ಸಮ್ಮುಖದಲ್ಲಿ ʼಊರ ಗೌರವʼ ಎನ್ನುವ ವಿಶೇಷ ಪುರಸ್ಕಾರ ಮಾಡಲಾಯಿತು.
‘ಕುಂದಾಪುರಕ್ಕೆ ಒಂದು ಸುಸಜ್ಜಿತ ಕುಂದಾಪ್ರ ಭವನ, ಒಂದು ವೈದ್ಯಕೀಯ ಕಾಲೇಜು ಹಾಗೂ ಕುಂದಾಪ್ರ ಸಮೀಪದ ಬೈಂದೂರಿನಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕು’ ಎಂದು ‘ಕುಂದಾಪುರ ಕನ್ನಡ ಪ್ರತಿಷ್ಠಾನ’ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಡಿಸಿಎಂ, “340 ಕಿ.ಮೀ. ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಸರ್ಕಾರಕ್ಕಿದೆ, ಈ ನೀತಿ ಜಾರಿ ಬಳಿಕ ವಿಮಾನ ನಿಲ್ದಾಣದ ಬಗ್ಗೆ ಚಿಂತಿಸೋಣ” ಎಂದರು. ಅಲ್ಲದೆ ಅದಕ್ಕೂ ಮುನ್ನ ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸಲಾಗುವುದು ಎಂದರು.
ಕುಂದಾಪುರ ಕಲೆ, ಸಾಹಿತ್ಯ, ಸಂಸ್ಕೃತಿ, ಒಗ್ಗಟ್ಟು ನೋಡಿ ಒಂದು ಗಂಟೆ ಕೂತಿದ್ದೇನೆ. ನೆಲ-ಭಾಷೆ-ಸಂಸ್ಕೃತಿ ಉಳಿಸುತ್ತಿರುವ ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನೀವು ಇಷ್ಟೊಂದು ಜನರನ್ನು ಒಟ್ಟು ಸೇರಿಸಿ ಕರ್ನಾಟಕದ ಹೃದಯ ಭಾಗದಲ್ಲಿ ಇದ್ದೀವಿ ಅಂತ ತೋರಿಸಿದ್ದೀರಿ. ಬಿಬಿಎಂಪಿ ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು, ಆದರೆ ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು, ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ ಎಂದರು. ಎಲ್ಲಕ್ಕಿಂತ ಹೆಚ್ಚು ಉಡುಪಿ-ಕುಂದಾಪುರದ ಜನತೆ ಜೊತೆ ಇದ್ದೇನೆ ಎಂಬ ಮಾತು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಟಿ ರಕ್ಷಿತಾ ಪ್ರೇಮ್, ಸಾಹಿತಿ-ಪತ್ರಕರ್ತ ಜೋಗಿ, ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಉಪೇಂದ್ರ ಶೆಟ್ಟಿ, ಚಿತ್ರನಟರಾದ ಶೈನ್ ಶೆಟ್ಟಿ, ಪ್ರವೀರ್ ಶೆಟ್ಟಿ, ಲೈಫ್ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.
Comments are closed.