ಕರಾವಳಿ

ಸಂಘಟಕ, ಧಾರ್ಮಿಕ ಮುಂದಾಳು ಜಯಾನಂದ ಖಾರ್ವಿ ವಿಧಿವಶ

Pinterest LinkedIn Tumblr

ಕುಂದಾಪುರ: ಧಾರ್ಮಿಕ ಮುಂದಾಳು ಜಯಾನಂದ ಖಾರ್ವಿ (64) ಮೇ.26 ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ ಶಾರದಾ, ಪುತ್ರಿ ಭರತ್ ನಿಶಾನ್, ಪುತ್ರಿ ನಿಹಾರಿಕಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಭಂಡಾರಕಾರ್ಸ್ ಕಾಲೇಜಿನಲ್ಲಿ ಪದವಿ ಪಡೆದು ವಾಲಿಬಾಲ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ತಾನು ಹುಟ್ಟಿದ ಊರಿಗೆ ತನ್ನ ಸಮಾಜದ ಕೀರ್ತಿಯನ್ನು ತಂದಿದ್ದರು. 1980-90 ದಶಕದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು.

ವೃತ್ತಿಯಲ್ಲಿ ಗುತ್ತಿಗೆದಾರರಾಗಿ ಜೀವನ ನಿರ್ವಹಣೆ ಮಾಡಿಕೊಂಡು ಕೊಂಕಣಿ ಖಾರ್ವಿ ಸಮಾಜದ ಪ್ರತಿಷ್ಠಿತ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವಿದ್ಯಾರಂಗ ಮಿತ್ರ ಮಂಡಳಿ(ರಿ)ಯ ವಿದ್ಯಾನಿಧಿ ಯೋಜನೆಯ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿದ್ಯಾರ್ಥಿಗಳಿಗೆ ವಿನೂತನವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದ್ದರು.

ಧಾರ್ಮಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಕ್ರೀಯವಾಗಿ ಇತ್ತೀಚೆಗೆ ನಡೆದ ಮಹಾಗಂಗಾರತಿಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಡೆಸಿ ಧಾರ್ಮಿಕ ಸೇವೆ ಸಲ್ಲಿಸಿಕೊಂಡು ಬಂದಿದ್ದರು.

ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಹೋಳಿ ಹಬ್ಬದ ಸಂದರ್ಭದಲ್ಲಿ ಶ್ರೀ ಮಹಾಕಾಳಿ ಮಾತೆಯ ಬಣ್ಣದ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ವಿಧಾನವನ್ನು ಅಳವಡಿಸಿ ಇತರೆ ಸಮಾಜಕ್ಕೆ ಪರಿಚಯಿಸಿದ್ದರು.

 

Comments are closed.