ನವದೆಹಲಿ: ಒಡಿಶಾದ ಬಾಲಸೋರ್‌ನಲ್ಲಿ ಹಳಿತಪ್ಪಿದ ರೈಲಿನ ಬೋಗಿಗಳಿಗೆ ಮತ್ತೊಂದು ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು 200ಕ್ಕೂ ಹೆಚ್ಚು ಜನರು ಮೃತಪಟ್ಟು ಮತ್ತು 900 ಜನರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸರಕು ಸಾಗಣೆ ರೈಲು ಕೂಡ ಅಪಘಾತಕ್ಕೀಡಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪಿಕೆ ಜೆನಾ ತಿಳಿಸಿದ್ದಾರೆ.
ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ. ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕಿರುವ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ 233 ಮಂದಿ ಸಾವಿಗೀಡಾಗಿದ್ದು, ಸುಮಾರು 900 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ತಿಳಿಸಿದ್ದಾರೆ.
ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಾಯುಪಡೆಯನ್ನು ಕರೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ 10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರ ನೀಡುವುದಾಗಿ ವೈಷ್ಣವ್ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
Comments are closed.