ಕರ್ನಾಟಕ

ಐದು ಗ್ಯಾರಂಟಿಗಳನ್ನು ಅಧಿಕೃತವಾಗಿ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ವಿಸ್ತಾರವಾಗಿ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಾದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಜಾರಿಗೊಳಿಸಿ ಜೂ.2 ಶುಕ್ರವಾರ ಘೋಷಿಸಿದರು.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್​ ಯೋಜನೆ ಜಾರಿ ಬಗ್ಗೆ ವಿಸ್ತ್ರತವಾಗಿ ಹೇಳಿದರು.

ಗೃಹಜ್ಯೋತಿ:
ಮೊದಲ ಗ್ಯಾರಂಟಿ ಗೃಹಜ್ಯೋತಿ ಜಾರಿಗೆ ಸಂಪುಟ ಸಭೆ ನಿರ್ಧರಿಸಿದ್ದು, ಎಲ್ಲರಿಗೂ 200 ಯುನಿಟ್​ ವರೆಗೂ ಉಚಿತವಾಗಿ ವಿದ್ಯುತ್ ನೀಡಲಾಗುವುದು. 12 ತಿಂಗಳ ಸರಾಸರಿ ಆಧಾರದಲ್ಲಿ ವಿದ್ಯುತ್​ ಬಿಲ್​ ಪರಿಗಣನೆ ಮಾಡಿ, 12 ತಿಂಗಳಲ್ಲಿ ಎಷ್ಟು ಬಳಸುತ್ತಾರೋ ಅದರ ಸರಾಸರಿ ಪಡೆದುಕೊಂಡು 10% ಹೆಚ್ಚು ವಿದ್ಯುತ್ ನೀಡುತ್ತೇವೆ. 12 ತಿಂಗಳ ಆವರೇಜ್​ ವಿದ್ಯುತ್ ಬಳಕೆ ಮೇಲೆ 10% ನೀಡುತ್ತೇವೆ. ಸರಾಸರಿ ಬಳಕೆಗೆ 10% ಸೇರಿಸಿ ಹೆಚ್ಚುವರಿ ವಿದ್ಯುತ್​ ನೀಡುತ್ತೇವೆ. 200 ಯೂನಿಟ್​ ವಿದ್ಯುತ್​ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.

ಗೃಹಲಕ್ಷ್ಮೀ ಯೋಜನೆ:
ಮನೆ ಯಜಮಾನಿಗೆ ತಿಂಗಳಿಗೆ 2000 ರೂ. ಜಮಾ ಮಾಡುತ್ತೇವೆ. ಈಗ ಅವರು ಅಕೌಂಟ್ ನಂಬರ್, ಆಧಾರ್ ಕಾರ್ಡ್ ಕೊಡಬೇಕು. ಅಲ್ಲದೇ ಇದಕ್ಕೆ ಆನ್​ಲೈನ್​, ಆಫ್ ಲೈನ್ ಅರ್ಜಿ ಸಲ್ಲಿಸಬೇಕು. ಜೂನ್ 15ರಿಂದ ಜುಲೈ 15ರ ವರೆಗೆ​ ಮೂಲಕ ಅರ್ಜಿ ಸಲ್ಲಿಸಬೇಕು. ಬಳಿಕ ದಾಖಲೆಗಳನ್ನು ಪರಿಶೀಲಿಸಿ ಆಗಸ್ಟ್ 15ರಿಂದ ಮನೆ ಯಜಮಾನಿ ಬ್ಯಾಂಕ್​​ ಖಾತೆಗೆ ಹಣ ಹಾಕಲಾಗುವುದು. ಇದು ಬಿಪಿಎಲ್​ ಹಾಗೂ ಎಪಿಲ್ ಕಾರ್ಡುದಾರರಿಗೆ ಅನ್ವಯವಾಗಲಿದೆ. ಮನೆ ಯಜಮಾನಿ ಯಾರು ಎಂದು ಮನೆಯವರೇ ಹೇಳಿ ಅರ್ಜಿ ಸಲ್ಲಿಸಬೇಕು. ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಗೃಹ ಲಕ್ಷ್ಮೀ ಆಗಸ್ಟ್ ನಿಂದ ಜಾರಿ ಮಾಡಲಾಗುತ್ತದೆ. ಈಗಾಗಲೇ ಪಿಂಚಣಿ ಪಡೆಯುತ್ತಿರುವವರಿಗೂ ಗೃಹ ಲಕ್ಷ್ಮೀ ಯೋಜನೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಅನ್ನಭಾಗ್ಯ ಯೋಜನೆ:
ಜುಲೈ 1ರಿಂದ ಎಲ್ಲಾ ಬಿಪಿಎಲ್​ ಕಾರ್ಡುದಾರರಿಗೆ 10 ಕೆಜಿ ಆಹಾರಧಾನ್ಯ ವಿತರಿಸುತ್ತೇವೆ. ಈಗಲೇ 10 ಕೆ.ಜಿ ಅಕ್ಕಿ ನೀಡಲು ನಮ್ಮಲ್ಲಿ ದಾಸ್ತಾನು ಇಲ್ಲ, ಹೀಗಾಗಿ ಆಹಾರಧಾನ್ಯ ನೀಡಲಾಗುತ್ತದೆ.

ಉಚಿತ ಬಸ್ ಯೋಜನೆ:
ಇನ್ನು ಉಚಿತ ಬಸ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಜೂನ್ 11ರಿಂದ ಉಚಿತ ಬಸ್ ಪ್ರಯಾಣ ಮಾಡಬಹುದು. ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣವಿಲ್ಲ. ಇನ್ನುಳಿದಂತೆ ರಾಜಹಂಸ, ಕೆಎಸ್​ಆರ್​ಟಿಸಿಯ ಎಲ್ಲಾ ಎಕ್ಸ್​ಪ್ರೆಸ್, ಬಿಎಂಟಿಸಿ ಬಸ್​ಗಳಲ್ಲಿ ಕರ್ನಾಟಕದೊಳಗೆ ಪ್ರಯಾಣಿಸಬಹುದು.

ಯುವ ನಿಧಿ:
2022-23ರ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿದ್ದರೆ ಅಂತವರಿಗೆ ‘ಯುವನಿಧಿ’ ಯೋಜನೆ ಅಡಿಯಲ್ಲಿ ತಿಂಗಳಿಗೆ 3000 ರೂ. ನೀಡಲಾಗುತ್ತದೆ. ಬಿಎ, ಬಿಎಸ್​ಸಿಸ, ಬಿಕಾಂ ಪದವೀಧರ 18ರಿಂದ 25 ವರ್ಷದೊಳಗಿನ ನಿರುದ್ಯೋಗಿಗಳಿಗೆ ಯುವನಿಧಿ ಲಾಭ ಸಿಗಲಿದೆ.

2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿರುವ ಎಲ್ಲಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂ.ಡಿಪ್ಲೋಮಾ ಹೋಲ್ಡರ್ಸ್ ಗೆ 1500 ಪಾವತಿ ಮಾಡಲಾಗುತ್ತದೆ. 24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಆಗ ಹಣ ಪಾವತಿ‌ ಇಲ್ಲ. ನಿರುದ್ಯೋಗಿ ಎಂದು ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಹಣ ಸಿಗಲಿದೆ . ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಪಾವತಿ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

Comments are closed.