ಕರ್ನಾಟಕ

ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ರಾಜಭವನಕ್ಕೆ ಕಾಂಗ್ರೆಸ್‌ ಮುತ್ತಿಗೆ: ಸಿದ್ದರಾಮಯ್ಯ, ಡಿಕೆಶಿ ಸಹಿತ ಹಲವರು ಪೊಲೀಸರ ವಶಕ್ಕೆ

Pinterest LinkedIn Tumblr

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ರಾಜ್ಯದ ಕಾಂಗ್ರೆಸ್ ನಾಯಕರು ಗುರುವಾರ ರಾಜಭವನ ಚಲೋ ಪ್ರತಿಭಟನಾ ರ್ಯಾಲಿ ನಡೆಸಿ ಮುತ್ತಿಗೆ ಹಾಕಲು ಮುಂದಾಗಿದ್ದು, ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಪೊಲೀಸರು ಬ್ಯಾರಿಕೇಡ್ ಹಾಕಿ ಕ್ವೀನ್ಸ್ ರಸ್ತೆಯನ್ನು ಬಂದ್ ಮಾಡಿದ್ದು, ಪ್ರತಿಭಟನಾಕಾರರನ್ನು ತುಂಬಲು ಕ್ವೀನ್ಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ಸನ್ನು ಪೊಲೀಸರು ಅಡ್ಡವಿಟ್ಟಿದ್ದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ಭವನಕ್ಕೆ ಪಾದಯಾತ್ರೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನು ಇಂಡಿಯನ್ ಎಕ್ಸ್​​​​ಪ್ರೆಸ್​​ ವೃತ್ತದ ಬಳಿ ಪೊಲೀಸರು ತಡೆದು, ವಶಕ್ಕೆ ಪಡೆದರು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದರು ಎನ್ನಲಾಗಿದೆ.

ಪ್ರತಿಭಟನೆ ವೇಳೆ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಪರಮೇಶ್ವರ್, ಶಾಸಕ ರಿಜ್ವಾನ್ ಹರ್ಷದ್, ಮಾಜಿ ಸಚಿವ ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್, ಪರಮೇಶಅವರ್ ನಾಯಕ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಪಾಲ್ಗೊಂಡಿದ್ದು, ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಕೆಪಿಸಿಸಿ ಕಚೇರಿ ಎದುರು ಬಾವುಟ ಹಾಗೂ ಧ್ವಜಗಳನ್ನು ಹಿಡಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Comments are closed.