ಕರಾವಳಿ

2 ಬಾರಿ ಶಾಸಕರು; ರಾಜಕೀಯ‌ ನಿವೃತ್ತಿ ಬಳಿಕ ಸಮಾಜ‌ಸೇವೆಯಲ್ಲಿ ಹತ್ತೂರಿಗೆ ಉಪಕಾರಿಯಾಗಿದ್ದ ಹಿರಿಯ ಮುತ್ಸದ್ಧಿ ಎ.ಜಿ. ಕೊಡ್ಗಿ ನಿಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ರಾಜಕೀಯ ಕ್ಷೇತ್ರದಲ್ಲಿ ಕರಾವಳಿ ರಾಜಕೀಯ ಭೀಷ್ಮ ಎಂದೇ ಕರೆಸಿಕೊಳ್ಳುತ್ತಿದ್ದ ಚಾಣಾಕ್ಷ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ. ಕೊಡ್ಗಿ) ಅವರು ಅಸೌಖ್ಯದಿಂದ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೃಷಿ ಕುಟುಂಬದಲ್ಲಿ 1929ರ ಅ.1ರಂದು ಜನಿಸಿದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರ ತಂದೆ ಕೃಷ್ಣರಾಯ ಕೊಡ್ಗಿ ಸ್ವಾತಂತ್ರ್ಯ ಹೋರಾಟಗಾರರು. ಕಾನೂನು ಪದವಿ ಪಡೆದ ಕೊಡ್ಗಿಯವರು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ಸ್ವಲ್ಪ ಸಮಯ ವಕೀಲರಾಗಿ ಕೆಲಸ ನಿರ್ವಹಿಸಿದರು. ತರುವಾಯ ಸಹಕಾರಿ, ಕೃಷಿ, ರಾಜಕಾರಣದಲ್ಲಿ ಗುರುತಿಸಿಕೊಂಡ ಕೊಡ್ಗಿಯವರು ಕೊನೆಕಾಲದಲ್ಲಿ ಸಮಾಜ ಸೇವೆ ಮೂಲಕ‌ ಹತ್ತೂರಿಗೆ ಉಪಕಾರಿಯಾದರು. 2013ರಲ್ಲಿ ಅವರು ರಾಜಕೀಯ ನಿವೃತ್ತಿ ಹೊಂದಿ‌ ಪೂರ್ಣ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಎಂಟು ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, 1972-83ರ ತನಕ ಬೈಂದೂರು ಶಾಸಕ, ಬಿಜೆಪಿ ಅಧಿಕಾರವಧಿಯ 2006-08ರ ತನಕ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ, ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1982-1990ರ ತನಕ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. ಅಮಾಸೆಬೈಲು ಸೋಲಾರ್ ಗ್ರಾಮ‌ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಹಿರಿಯ ಮುತ್ಸದ್ಧಿ ಎ.ಜಿ ಕೊಡ್ಗಿ ಅವರ ಶ್ರಮವಿತ್ತು.

 

Comments are closed.